ADVERTISEMENT

‘ಜನಪದ ಕಲೆ ಉಳಿಸಿ ಬೆಳೆಸಿ’

ಜಾನಪದ ಲೋಕದ ‘ತಿಂಗಳ ಅತಿಥಿ’ ಕಾರ್ಯಕ್ರಮದಲ್ಲಿ ಪುಟ್ಟಸ್ವಾಮಿ ಮನವಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 11:24 IST
Last Updated 9 ಡಿಸೆಂಬರ್ 2018, 11:24 IST
ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಲಾವಣಿ ಹಾಡುಗಾರ ಪುಟ್ಟಸ್ವಾಮಿ ಮಾತನಾಡಿದರು
ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಲಾವಣಿ ಹಾಡುಗಾರ ಪುಟ್ಟಸ್ವಾಮಿ ಮಾತನಾಡಿದರು   

ರಾಮನಗರ: ವಿನಾಶದ ಅಂಚಿನಲ್ಲಿರುವ ಭಾರತೀಯ ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ಜಗತ್ತಿನಲ್ಲಿ ಪ್ರಜ್ವಲಿಸುವಂತೆ ಮಾಡಿರುವ ಗ್ರಾಮೀಣ ಪ್ರದೇಶದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಲಾವಣಿ ಹಾಡುಗಾರ ಪುಟ್ಟಸ್ವಾಮಿ ಹೇಳಿದರು.

ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶನಿವಾರ ಸಂಜೆ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನಗೀಗ 85 ವರ್ಷ ವಯಸ್ಸು. ಜನಪದ ಪ್ರಾಸಗಳು, ನಗೆ ಚಾಟಿಗಳು, ಜನಪದ ಹಾಡಗಳನ್ನು ಪಟಪಟನೆ ಹೇಳುತ್ತೇನೆ. ‘ಅವ್ವ ಅವ್ವ ಗೆಣುಸೆ’, ‘ಅಪ್ಪ ಡಾಲ್ಡ ತುಪ್ಪ’, ‘ಡೊಳ್ಳು ಹೊಟ್ಟೆ ಬಾರಿ’, ಬಿಳಿ ಮೀಸೆ ತಾತ’ ಇಂತಹ ಮಕ್ಕಳ ಪ್ರಾಸಗಳನ್ನು ಮಕ್ಕಳಿಗೆ ಮುಟ್ಟುವಂತೆ ಹೇಳುತ್ತೇನೆ’ ಎಂದರು.

ADVERTISEMENT

‘ಮಾದೇಶ್ವರನ ಮೇಲಿನ ಹಾಡುಗಳು, ಜನಪದ ಹಾಡುಗಳು, ತತ್ವಪದಗಳು, ಭಜನೆಪದಗಳನ್ನು ಹಾಡುತ್ತೇನೆ. ‘ಟಿಪ್ಪುಸುಲ್ತಾನ್’, ‘ಬಸವಣ್ಣ’, ‘ಭಾರತಾಂಬೆ’ಯ ಮೇಲೆ ಲಾವಣಿಗಳನ್ನು ಹಾಡುತ್ತೇನೆ. ಶಾಲೆಗಳಲ್ಲಿ, ಮಠಗಳಲ್ಲಿ, ಸಭೆ ಸಮಾರಂಭಗಳಲ್ಲಿ ಹಾಡಿ ಜನರ ಮನ ಗೆದ್ದಿದ್ದೇನೆ’ ಎಂದರು.

‘ಕೂಲಿ ಒಂದಾಣೆ, ಎರಡಾಣೆ ಇದ್ದಾಗಿನಿಂದ ದುಡಿದು ಬದುಕು ಕಟ್ಟಿಕೊಂಡಿದ್ದೇನೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ನನಗೆ ಹೆಚ್ಚು ಸಂತೋಷ ಕೊಟ್ಟಿತು’ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ ಮಾತನಾಡಿ, ‘ಅರ್ಥವಿಲ್ಲದ ವಿದೇಶಿ ಸಂಗೀತ, ಉಡುಪುಗಳಿಂದಾಗಿ ನೈತಿಕತೆ ತಲೆ ತಗ್ಗಿಸಬೇಕಾಗಿದೆ. ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದು ತಿಳಿಸಿದರು.

‘ಇಂದಿನ ಮಕ್ಕಳಿಗೆ ಜನಪದ ಕಲೆಯ ಗಂಧಗಾಳಿಯೇ ಇಲ್ಲದಂತಾಗಿದೆ. ಬೀಸೊಕಲ್ಲು, ಹಂತಿಪದ, ಸೋಬಾನೆ ಪದಗಳು ಮರೆಯಾಗಿವೆ. ಈ ಹಿಂದೆ ಬಯಲಾಟ ನೋಡಲು ಮುಂಚಿತವಾಗಿ ಹಾಸಿಗೆ ಹಾಕಿ ಜಾಗವನ್ನು ಕಾಯ್ದಿರಿಸುತ್ತಿದ್ದೆವು, ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿದೆ’ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ, ‘ನಾನಾ ಹಳ್ಳಿಗಳಲ್ಲಿರುವ ಜನಪದ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಜನಪದ ಕಲೆ ನಶಿಸಿ ಹೋಗುತ್ತಿರುವಾಗ ನಾವೆಲ್ಲರೂ ಅದನ್ನು ಉಳಿಸಿ ಬೆಳೆಸಲು ಶ್ರಮಿಸಬೇಕು’ ಎಂದರು.

‘ಜನಪದ ಕಲೆಯು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇಂತಹ ಕಾರ್ಯಕ್ರಮಗಳಿಂದ ಕಲೆಯ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸಲು ಸಹಾಯವಾಗುತ್ತದೆ’ ಎಂದು ಅವರು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಮೆನೇಜಿಂಗ್ ಟ್ರಸ್ಟಿ ಆದಿತ್ಯಾನಂಜರಾಜ್, ಜಾನಪದ ಲೋಕದ ಆಡಳಿತಾಧಿಕಾರಿ ಡಾ.ಕುರುವ ಬಸವರಾಜ್, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.