ADVERTISEMENT

‘ವ್ಯಂಗ್ಯಚಿತ್ರಕ್ಕೆ ಸಾವಿರ ಅರ್ಥ ನೀಡುವ ಶಕ್ತಿ’

ಕಲಾ ಜಾನಪದ ಗಿರಿ ಉತ್ಸವ ಕಾರ್ಯಕ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 3:41 IST
Last Updated 12 ಜೂನ್ 2019, 3:41 IST
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ನಡೆದ ಕಲಾ ಜಾನಪದ ಗಿರಿ ಉತ್ಸವ ಕಾರ್ಯಕ್ರಮವನ್ನು ವೀಣಾಚಂದ್ರು ಉದ್ಘಾಟಿಸಿದರು
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ನಡೆದ ಕಲಾ ಜಾನಪದ ಗಿರಿ ಉತ್ಸವ ಕಾರ್ಯಕ್ರಮವನ್ನು ವೀಣಾಚಂದ್ರು ಉದ್ಘಾಟಿಸಿದರು   

ಚನ್ನಪಟ್ಟಣ: ಸಾವಿರ ವಿಚಾರಗಳನ್ನು ಕೇವಲ ಒಂದು ಚಿತ್ರದಲ್ಲಿ ಹೇಳುವ, ಸಾವಿರ ಅರ್ಥಗಳನ್ನು ನೀಡುವ ಶಕ್ತಿ ವ್ಯಂಗ್ಯಚಿತ್ರಗಳಿಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಚಂದ್ರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ಅಸಿರ ಚಿತ್ರಕಲಾ ಇನ್‌ಸ್ಟಿಟ್ಯೂಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ ಇವರ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಕಲಾ ಜಾನಪದ ಗಿರಿ ಉತ್ಸವ’ ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯವಾಗಿ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸದಾ ಒಂದಲ್ಲ ಒಂದು ಒತ್ತಡದಲ್ಲಿರುವ ಜನಸಾಮಾನ್ಯರು ಪತ್ರಿಕೆಗಳ ಕಡೆ ಗಮನ ನೀಡದಿರಬಹುದು. ಆದರೆ ಹಾಸ್ಯದ ಮೂಲದ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಗೆ ಚಾಟಿ ಬೀಸುವ ವ್ಯಂಗ್ಯಚಿತ್ರಗಳ ಮೇಲೆ ಕಣ್ಣಾಡಿಸುವರ ಸಂಖ್ಯೆ ಹೇರಳವಾಗಿದೆ ಎಂದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು ಮಾತನಾಡಿ, ಗ್ರಾಮೀಣ ಕಲೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖಾಂತರ ಸರ್ಕಾರವು ಅಸಂಘಟಿತ ಕಲಾವಿದರಿಗೆ ಆರ್ಥಿಕ ಸಹಕಾರ ನೀಡುತ್ತಿದೆ. ಇದನ್ನು ಕಲಾವಿದರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಚ್.ಪ್ರಕಾಶ್ ಮಾತನಾಡಿ, ತಾನು ಕಲಿತ ಕಲೆಯನ್ನು ಮಾರಾಟದ ವಸ್ತುವನ್ನಾಗಿ ಮಾಡದೆ, ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಚಿತ್ರಕಲೆಯನ್ನು ಮಕ್ಕಳಿಗೆ ಕಲಿಸಿಕೊಡುವುದರ ಮುಖಾಂತರ ಅಸಿರ ಚಿತ್ರಕಲಾ ಇನ್ ಸ್ಟಿಟ್ಯೂಟ್ ಸಂಸ್ಥಾಪಕ ರಮೇಶ್ ಅಕ್ಕೂರು ಅವರು ಸೇವೆ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.

ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆಯ ರಾಜ್ಯ ಘಟಕದ ಉಪಾಧ್ಯಕ್ಷ ನಾಗವಾರ ಶಂಭೂಗೌಡ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಪಂಚಾಯಿತಿ ಇಒ ರಾಮಕೃಷ್ಣ, ರಾಜ್ಯ ಜಾನಪದ ಅಕಾಡೆಮಿಯ ಸದಸ್ಯ ಕನಕಪುರ ಕಾಳಯ್ಯ, ಅಕ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ದೇವರಾಜು, ಸದಸ್ಯರುಗಳಾದ ಜಿ.ಕೃಷ್ಣ, ಪುಟ್ಟಮ್ಮ, ಸಂಸ್ಥೆಯ ಅಧ್ಯಕ್ಷೆ ಮುನಿರತ್ನಮ್ಮ ಭಾಗವಹಿಸಿದ್ದರು.

ಸಾಹಿತಿ ವಿಜಯ್ ರಾಂಪುರ ಅವರು ಸಿದ್ದಪ್ಪಾಜಿ ಪವಾಡದ ಬಗ್ಗೆ ಉಪನ್ಯಾಸ ನೀಡಿದರು. ನಿವೃತ್ತ ಯೋಧ ಅಕ್ಕೂರು ಸುರೇಶ್ ಹಾಗೂ ಅಂತರರಾಷ್ಟ್ರೀಯ ಯೋಗ ಪಟುಗಳಾದ ವೇದಾಂತ್, ವೈಷ್ಣವಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಜಾನಪದ ಕಲಾ ಪ್ರಕಾರಗಳನ್ನು ಪ್ರದರ್ಶನ ಮಾಡಲಾಯಿತು. ಗಾಯಕ ರಾ.ಬಿ.ನಾಗರಾಜು ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.