ADVERTISEMENT

ಮಾಗಡಿ: ಮೂರು ಗ್ರಾಮ ಸೀಲ್‌ಡೌನ್‌

​ಪ್ರಜಾವಾಣಿ ವಾರ್ತೆ
Published 28 ಮೇ 2021, 4:04 IST
Last Updated 28 ಮೇ 2021, 4:04 IST
ಮಾಗಡಿ ತಾಲ್ಲೂಕಿನ ಬ್ಯಾಲಕೆರೆ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾದ ಹಿನ್ನೆಲೆಯಲ್ಲಿ ಪಿಡಿಒ ನಾಗರಾಜು ಸೀಲ್‌ಡೌನ್‌ ಮಾಡಿಸಿದರು
ಮಾಗಡಿ ತಾಲ್ಲೂಕಿನ ಬ್ಯಾಲಕೆರೆ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾದ ಹಿನ್ನೆಲೆಯಲ್ಲಿ ಪಿಡಿಒ ನಾಗರಾಜು ಸೀಲ್‌ಡೌನ್‌ ಮಾಡಿಸಿದರು   

ಮಾಗಡಿ: ತಾಲ್ಲೂಕಿನ ತಗ್ಗಿಕುಪ್ಪೆ ಗ್ರಾ,ಪಂ.ವ್ಯಾಪ್ತಿಯ ಬ್ಯಾಲಕೆರೆ, ಕುದೂರು ಹೋಬಳಿಯ ಚೌಡಿಬೇಗೂರು, ಶ್ರೀಗಿರಿಪುರ ಗ್ರಾಮಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ 3 ಗ್ರಾಮದಲ್ಲಿ ಸೀಲ್‌ ಡೌನ್‌ ಮಾಡಲಾಗಿದೆ ಎಂದು ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ ಪ್ರಸಾದ್‌ ತಿಳಿಸಿದರು.

ಬ್ಯಾಲಕೆರೆ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವ್ಯಾಪಕವಾಗಿ ಕೋವಿಡ್‌ ಟೆಸ್ಟ್‌ ಮಾಡುತ್ತಿದ್ದಾರೆ. ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಟೆಸ್ಟ್‌ ಮಾಡಿಸಿಕೊಳ್ಳಬೇಕು. ಮಾಸ್ಕ್‌ ಧರಿಸಿರಬೇಕು. ಮನೆಯಲ್ಲೇ ಉಳಿದು ಕೋವಿಡ್‌ ಸೋಂಕು ನಿಯಂತ್ರಿಸಲು ಸಹಕರಿಸಬೇಕು ಎಂದರು.

ಗ್ರಾಮದ ಮುಖಂಡ ಚಿಕ್ಕರಾಜು.ಎಸ್‌.ಮಾತನಾಡಿ, ಬೆಂಗಳೂರಿನಲ್ಲಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಳ್ಳಿಗಳತ್ತ ಧಾವಿಸಿದವರು ಗ್ರಾಮೀಣ ಭಾಗದಲ್ಲಿ ಕೋವಿಡ್‌ ಸೋಂಕನ್ನು ವ್ಯಾಪಕವಾಗಿ ಹರಡಿದರು. ಹಳ್ಳಿಗಾಡಿನಲ್ಲಿ ದೇವರ ಉತ್ಸವಗಳು, ಮದುವೆ, ಬೀಗರ ಊಟ ನಡೆದಿರುವುದರಿಂದ ಕೋವಿಡ್‌ ಸೋಂಕು ಹರಡುತ್ತಿದೆ’ ಎಂದರು.

ADVERTISEMENT

‘ತಾಲ್ಲೂಕು ಆಡಳಿತ ಈಗಾಗಲೆ ಎಚ್ಚರಿಕೆ ನೀಡಿದ್ದರೂ ಸಹಿತ ಕೆಲವರು ಗುಂಪುಗೂಡುತ್ತಿದ್ದಾರೆ. ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವುದು, ಟೆಸ್ಟ್‌ ಮಾಡಿಸುವುದ ನಡೆಸಬೇಕು. ನಮ್ಮೂರಿನಲ್ಲಿಯೇ 15ಕ್ಕಿಂತ ಅಧಿಕವಾಗಿ ಸೋಂಕಿತರು ಹುಲಿಕಟ್ಟೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಮನೆಯಲ್ಲೂ ಜ್ವರದಿಂದ ಬಳಲುವವರಿದ್ದಾರೆ. ಪಾಸಿಟಿವ್‌ ಬಂದರೆ, ಸಾವು ಬರಲಿದೆ ಎಂಬ ಭೀತಿಯಿಂದ ಟೆಸ್ಟ್‌ ಮಾಡಿಸಲು ಮುಂದಾಗುತ್ತಿಲ್ಲ’ ಎಂದರು.

ಪಿಡಿಒ ನಾಗರಾಜು ಮಾತನಾಡಿ, ಆರೋಗ್ಯ ಇಲಾಖೆಯವರ ಸಹಕಾರದಿಂದ ಕೋವಿಡ್‌ ಟೆಸ್ಟ್‌ ಮಾಡಿಸುತ್ತಿದ್ದೇವೆ. ಗ್ರಾಮದಲ್ಲಿ ಸೀಲ್‌ ಡೌನ್‌ ಸಹ ಮಾಡಿದ್ದೇವೆ. ಟೆಸ್ಟ್‌ ಮಾಡಿಸುವಂತೆ ಜನರ ಮನವೊಲಿಸಲಾಗುತ್ತಿದೆ ಎಂದರು. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.