
ಚನ್ನಪಟ್ಟಣ: ತಾಲ್ಲೂಕಿನ ಬೇವೂರು ಗ್ರಾಮದ ಬೆಟ್ಟದ ತಿಮ್ಮಪ್ಪಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ವಿಷ್ಣು ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಿಂದ ನೆರವೇರಿತು.
ತಿಮ್ಮಪ್ಪಸ್ವಾಮಿಗೆ ಹೂವಿನ ಅಲಂಕಾರ ಮಾಡಿ ನಂತರ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವಮೂರ್ತಿಯನ್ನು ದೇವಾಲಯದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ದೇವಾಲಯದ ಒಳಗಡೆ ಮಣ್ಣಿನ ಹಣತೆ ಹಚ್ಚಿ ಸಂಭ್ರಮಿಸಿದರು. ಲೋಕ ಕಲ್ಯಾಣಕ್ಕಾಗಿ ಯಾವುದೇ ಅಗ್ನಿ ಅವಘಡಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ದೇವಸ್ಥಾನಗಳಲ್ಲಿ ದೇವರನ್ನು ಪ್ರಾರ್ಥಿಸಿ ಸಾಂಕೇತಿಕವಾಗಿ ರಾಜ ಗೋಪುರದ ಬಳಿ ತೈಲಪಟಕ್ಕೆ ಮಂಗಳಾರತಿಯಿಂದ ಬೆಂಕಿ ಹಚ್ಚಿ ಉರಿಸಲಾಯಿತು.
ದೇವಸ್ಥಾನದ ಹೊರಗೆ ಗೋಪುರದ ಬಳಿ ಜಗಜ್ಯೋತಿ ಬೆಳಗಿಸಲಾಯಿತು. ಬಳಿಕ ತೈಲ ಬಟ್ಟೆಯ ಕರಿಯನ್ನು ರಕ್ಷಾ ಪ್ರಸಾದವಾಗಿ ಭಕ್ತರಿಗೆ ನೀಡಲಾಯಿತು. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಗಜೋತ್ಸವ ನಡೆಸಲಾಯಿತು. ಮಣ್ಣಿನ ಹಣತೆಯ ಬೆಳಕಿನಲ್ಲಿ ದೇವಸ್ಥಾನ ಕಂಗೊಳಿಸಿತು. ವಿದ್ಯುತ್ ದೀಪಗಳಿಂದ ದೇವಾಲಯನ್ನು ಅಲಂಕರಿಸಲಾಗಿತ್ತು.
ತಹಶೀಲ್ದಾರ್ ಮಹೇಂದ್ರ, ಎಂ.ಕೆ. ದೊಡ್ಡಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಸೌಜನ್ಯ, ದೇವಾಲಯದ ಅರ್ಚಕ ಸಂತೋಷ್, ಗ್ರಾಮದ ಮುಖಂಡರಾದ ಯೋಗೀಶ್ ಗೌಡ, ವೆಂಕಟ ಶೆಟ್ಟಿ, ರಮೇಶ್, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.