ADVERTISEMENT

'ರಾಮನಗರದ ದೊಡ್ಡಗಣಪತಿ' ಪ್ರತಿಷ್ಠಾಪನೆ ಇಂದು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 16:36 IST
Last Updated 1 ಸೆಪ್ಟೆಂಬರ್ 2019, 16:36 IST
ಮುಖ್ಯ ರಸ್ತೆಯಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ 'ದರ್ಬಾರ್' ಗಣಪತಿ
ಮುಖ್ಯ ರಸ್ತೆಯಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ 'ದರ್ಬಾರ್' ಗಣಪತಿ   

ರಾಮನಗರ: ಶ್ರೀ ವಿದ್ಯಾಗಣಪತಿ ಸೇವಾ ಸಂಘದ ವತಿಯಿಂದ 52ನೇ ವರ್ಷದ ಅಂಗವಾಗಿ ಇಲ್ಲಿನ ಮುಖ್ಯರಸ್ತೆಯ ಶ್ರೀ ಭಾರ್ಗವಸ್ವಾಮಿ ಭಜನಾ ಮಂದಿರದಲ್ಲಿ ದರ್ಬಾರ್ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ಇದೇ 2ರಂದು ಮಧ್ಯಾಹ್ನ 12.30 ಗಂಟೆಗೆ ನಡೆಯುವ ವಿದ್ಯಾಗಣಪತಿ ಪ್ರತಿಷ್ಠಾಪನ ಪೂಜೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ ಪಾಲ್ಗೊಳ್ಳಲಿದ್ದಾರೆ.

ಗಣೇಶೋತ್ಸವವು 22ರವರೆಗೆ ನಡೆಯಲಿದ್ದು, ನಿತ್ಯ ವಿಶೇಷ ಪೂಜಾ ಕೈಂಕರ್ಯಗಳು, ಪ್ರಸಾದ ವಿನಿಯೋಗ ನೆರವೇರಲಿದೆ. 22ರಂದು ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಗುವುದು.

ADVERTISEMENT

ನಗರದ ಮುಖ್ಯರಸ್ತೆಯಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಂಘದ ವತಿಯಿಂದ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಗೆ ಈ ಬಾರಿ 52 ವರ್ಷಗಳು ತುಂಬಿದೆ. ‘ರಾಮನಗರದ ದೊಡ್ಡಗಣಪತಿ’ ಎಂದೇ ಪ್ರಸಿದ್ಧಿಯಾಗಿರುವ ಗಣಪತಿಮೂರ್ತಿಯನ್ನು 1967ರಿಂದ ನಿರಂತರವಾಗಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಅಂದಿನಿಂದ ಇಂದಿನವರೆಗೂ ‘ದರ್ಬಾರ್‌ ಗಣಪತಿ’ಯ ಮೂರ್ತಿಯನ್ನೇ ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದಾರೆ.

ಮೊದಲು ಮೂರು ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿತ್ತು. ಈಗ 11 ಅಡಿ ಎತ್ತರದ 7 ಅಡಿ ಅಗಲವಿರುವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅಂದಿನಿಂದಲೂ ಇಲ್ಲಿಯವರೆಗೆ ಮಣ್ಣಿನ ಗಣೇಶ ಮೂರ್ತಿಯನ್ನೇ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ ಎಂದು ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಕಾರ್ಯದರ್ಶಿ ಎ.ಎಸ್. ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲು ಅರ್ಚಕ ನಾಗಭೂಷಣ ಶಾಸ್ತ್ರಿ ಗಣೇಶಮೂರ್ತಿಯನ್ನು ತಯಾರಿಸುತ್ತಿದ್ದರು. ಈಗ ಮಾಗಡಿಯ ಉಮಾಶಂಕರ್ ಮತ್ತು ಸಹೋದರರು ಮೂರ್ತಿ ತಯಾರಿಸುತ್ತಿದ್ದಾರೆ. ಮೊದಲು ಎತ್ತಿನ ಗಾಡಿಯಲ್ಲಿ, ಈಗ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲಾಗುತ್ತಿದೆ. ರಾಜ್ಯದ ನಾನಾಭಾಗಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.