ADVERTISEMENT

‘ವಿ.ವಿ ಪ್ಯಾಡ್‌ ವ್ಯವಸ್ಥೆಯಲ್ಲಿ ಪಾರದರ್ಶಕತೆ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 14:48 IST
Last Updated 14 ಮಾರ್ಚ್ 2019, 14:48 IST
ಕನಕಪುರ ಆರ್‌ಜಿಎಚ್‌ಎಸ್‌ ಶಾಲೆಯಲ್ಲಿ ನಡೆದ ಸ್ವೀಪ್‌ ತರಬೇತಿ ಕಾರ್ಯಾಗಾರದಲ್ಲಿ ಟಿ.ಎಸ್‌. ಶಿವರಾಮ್‌ ಮಾತನಾಡಿದರು
ಕನಕಪುರ ಆರ್‌ಜಿಎಚ್‌ಎಸ್‌ ಶಾಲೆಯಲ್ಲಿ ನಡೆದ ಸ್ವೀಪ್‌ ತರಬೇತಿ ಕಾರ್ಯಾಗಾರದಲ್ಲಿ ಟಿ.ಎಸ್‌. ಶಿವರಾಮ್‌ ಮಾತನಾಡಿದರು   

ಕನಕಪುರ: ‘ಈಗಿನ ಮತದಾನದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ವ್ಯವಸ್ಥೆ ಇದೆ. ಹೆಚ್ಚು ಪಾರದರ್ಶಕತೆಯನ್ನು ಈಗಿನ ವಿ.ವಿ ಪ್ಯಾಡ್‌ ಯಂತ್ರದಲ್ಲಿ ಕಾಣಬಹುದಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಟಿ.ಎಸ್‌.ಶಿವರಾಮ್‌ ಹೇಳಿದರು.

ನಗರದ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಜಿಲ್ಲಾ ಡಯಟ್‌ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 'ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರ' ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

ವಿದ್ಯುತ್‌ ಮತದಾನದಲ್ಲಿ ಮತದಾರರಿಗೆ ಮತ್ತು ರಾಜಕೀಯ ವ್ಯಕ್ತಿಗಳಿಗೆ ಅಪನಂಬಿಕೆ ಇತ್ತು. ಯಾರಿಗೋ ಮತ ಹಾಕಿದರೆ ಮತ್ತೆ ಯಾರಿಗೋ ಮತ ಬೀಳುವಂತೆ ಷಡ್ಯಂತ್ರರ ಮಾಡಲಾಗುತ್ತಿದೆ ಎಂಬ ಆರೋಪ, ಟೀಕೆ ವ್ಯಕ್ತವಾಗಿತ್ತು. ಈಗ ಇಂತಹ ಲೋಪಕ್ಕೆ ಅವಕಾಶವಿಲ್ಲ. ವಿ.ವಿ ಪ್ಯಾಡ್‌ ಯಂತ್ರದಲ್ಲಿ ಮತ ಖಚಿತತೆ ತೋರಿಸುತ್ತದೆ ಎಂದರು.

ADVERTISEMENT

ಶೇ90ರಷ್ಟು ಮತದಾನವಾದರೂ ಶೇ100ರಷ್ಟು ಮತದಾನವಾದಂತೆ. 18 ವರ್ಷ ದಾಟಿರುವವರು ಮತದಾನದ ಪಟ್ಟಿಯಲ್ಲಿ ಹೆಸರು ದಾಖಲು ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.

‘ಪ್ರಜಾಪ್ರಭುತ್ವದ ವ್ಯವಸ್ಥೆಯಿಂದಲೇ ದೇಶ ಬದಲಾಗಿದೆ. 50 ವರ್ಷದ ಹಿಂದೆ ಜೀವನ ಶೈಲಿ ಹೇಗಿತ್ತು. ಇಂದು ಹೇಗಿದೆ ಎಂಬುದನ್ನು ಕಾಣಬಹುದಾಗಿದೆ. ದೇಶದಲ್ಲಿ ಬದಲಾವಣೆ ಕಾಣಬೇಕಾದರೆ ಕಡ್ಡಾಯ ಮತದಾನ ಮಾಡಬೇಕೆಂದು’ ಸಲಹೆ ನೀಡಿದರು.

ಮತದಾನ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಅಂಗವಿಕಲರಿಗಾಗಿ ವಾಹನ ವ್ಯವಸ್ಥೆ ಇದೆ. ಮಹಿಳೆಯರಿಗಾಗಿಯೇ ಪ್ರತ್ಯೇಕ ಪಿ‍ಂಕ್‌ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.

ಸ್ವೀಪ್‌ ಇಸಿಒ ಚಂದ್ರಯ್ಯ ಮಾತನಾಡಿ, ಶಿಕ್ಷಕರು ಅಣುಕು ಮತದಾನ, ಜಾಥಾ, ಕರಪತ್ರ ಹಂಚಿಕೆ, ಜನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಡಯಟ್‌ನ ಹಿರಿಯ ಉಪನ್ಯಾಸಕ ಭೀಮನಾಯ್ಕ್‌, ತರಬೇತುದಾರರ ಮಹದೇವರಾವ್‌, ಅಶೋಕ್‌.ಆರ್‌, ಟಿ. ಗುರುಮೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.