ADVERTISEMENT

21 ಬಗೆಯ ತಿನಿಸುಗಳ 'ಕಾಂಡಿಮೆಂಟ್ಸ್‌’

ದೇಶ–ವಿದೇಶಕ್ಕೂ ರವಾನೆಯಾಗುವ ಕಲ್ಲಳ್ಳಿ ಸ್ವೀಟ್ಸ್‌

ಪ್ರಜಾವಾಣಿ ವಿಶೇಷ
Published 21 ಅಕ್ಟೋಬರ್ 2024, 5:38 IST
Last Updated 21 ಅಕ್ಟೋಬರ್ 2024, 5:38 IST
ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿರುವ ಅಮೃತ ದರ್ಶಿನಿ ಕಾಂಡಿಮೆಂಟ್ಸ್
ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿರುವ ಅಮೃತ ದರ್ಶಿನಿ ಕಾಂಡಿಮೆಂಟ್ಸ್   

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದೊಡ್ಡಮಳೂರು ಗ್ರಾಮದಲ್ಲಿರುವ ಅಮೃತ ದರ್ಶಿನಿ ಕಾಂಡಿಮೆಂಟ್ಸ್ ಸುಮಾರು 21 ಬಗೆಯ ವಿಶೇಷ ತಿಂಡಿತಿನಿಸುಗಳನ್ನು ತಯಾರು ಮಾಡುತ್ತಾ, ತಿಂಡಿಪ್ರಿಯರ ಮನಗೆಲ್ಲುತ್ತಿದೆ.

ಕನಕಪರ ತಾಲ್ಲೂಕಿನ ಕಲ್ಲಳ್ಳಿ ಗ್ರಾಮದ ವೆಂಕಟೇಶ್ ಅಯ್ಯಂಗಾರ್ ಅವರು ಸುಮಾರು 19 ವರ್ಷಗಳಿಂದ ಗ್ರಾಮದಲ್ಲಿ ಈ ಅಂಗಡಿ ಇಟ್ಟುಕೊಂಡು ವಿಶೇಷ ತಿಂಡಿತಿನಿಸುಗಳ ಮೂಲಕ ತಾಲ್ಲೂಕಿನಲ್ಲಿ ಅಷ್ಟೇ ಅಲ್ಲದೆ ಹೊರರಾಜ್ಯ, ಹೊರ ದೇಶಗಳ ತಿಂಡಿಪ್ರಿಯರನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ.

ಇವರ ಅಂಗಡಿಯಲ್ಲಿ ತಯಾರಾಗುವ ಮನೋಹರ ಉಂಡೆ, ಕಜ್ಜಾಯ, ಸರ್ಜಫಾ, ತಿರುಪತಿ ರುಚಿಯುಳ್ಳ ಲಾಡು, ಪುರಿಉಂಡೆ, ಹರಳುಂಡೆ, ಕಡ್ಲೆಉಂಡೆ, ಕಡ್ಲೆಬೀಜ ಉಂಡೆ, ಪುಳ್ಳಂಗಾಯಿ ಉಂಡೆ, ಬೇಸನ್ ಲಡ್ಡು, ರವೆಉಂಡೆ, ಕರ್ಜಿಕಾಯಿ, ಚಿರೋಟಿ, ಇತ್ಯಾದಿ ತಿಂಡಿಗಳಿಗೆ ಹೊರ ರಾಜ್ಯಗಳಲ್ಲದೆ ಹೊರದೇಶಗಳಲ್ಲಿಯೂ ಗ್ರಾಹಕರಿದ್ದಾರೆ.

ADVERTISEMENT

ಇವರಲ್ಲಿ ತಯಾರು ಮಾಡುವ ಮನೋಹರ ತಿಂಡಿಯು ವಿಶೇಷಗಳಲ್ಲಿ ವಿಶೇಷ ತಿಂಡಿ. ಅಕ್ಕಿ ಹಾಗೂ ಉದ್ದಿನಬೇಳೆಯನ್ನು ಉರಿದುಕೊಂಡು, ಪುಡಿ ಮಾಡಿ, ತುಪ್ಪದಲ್ಲಿ ಮಿಕ್ಸ್ ಮಾಡಿ ಆನಂತರ ದ್ರಾಕ್ಷಿ, ಗೋಡಂಬಿ, ಖರ್ಜೂರ, ಕೊಬ್ಬರಿಪುಡಿಯನ್ನು ಸೇರಿಸಿ ಉಂಡೆ ಮಾಡಲಾಗುತ್ತದೆ. ಎಲ್ಲೂ ಸಿಗದ ಈ ಉಂಡೆಗಾಗಿ ದೂರದೂರದಿಂದ ಜನರು ಬರುತ್ತಾರೆ. ಹಾಗೆಯೆ ಇವರಲ್ಲಿ ತಯಾರಾಗುವ ಮೃದುವಾದ ಕಜ್ಜಾಯ, ಸರ್ಜಫಾ, ಪುಳಿಯೋಗರೆ ಗೊಜ್ಜು, ಸಾಂಬಾರ್ ಪುಡಿ, ವಾಂಗಿಬಾತ್ ಪುಡಿ, ಬಿಸಿಬೇಳೆ ಬಾತ್ ಪುಡಿ, ಚಟ್ನಿ ಪುಡಿಗಳಿಗೂ ಅಷ್ಟೇ ಬೇಡಿಕೆ ಇದೆ.

ಕೋಡಬಳೆ, ಚಕ್ಕುಲಿ, ಮುಚ್ಚೋರೆ, ತೇಂಗೊಳಲ್, ನುಪ್ಪಿಟ್ಟು, ಮಿಕ್ಸರ್, ಅವಲ್ಕಕಿ ಮಿಕ್ಸರ್, ಹೋಳಿಗೆ, ಸಬ್ಬಕ್ಕಿ ಹಪ್ಪಳ ಸೇರಿದಂತೆ ವಿವಿಧ ತಿಂಡಿತಿನಿಸುಗಳ ವಿಶೇಷತೆಯೇ ಬೇರೆ. ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ತಿಂಡಿಗಳನ್ನು ಪೂರೈಸುತ್ತೇವೆ. ಬೆಂಗಳೂರಿನ ವಿದ್ಯಾರ್ಥಿ ನಿಲಯಗಳು, ಪಿಜಿಗಳೂ ನಮ್ಮ ತಿಂಡಿಗಳನ್ನು ಆರ್ಡರ್ ಕೊಟ್ಟು ತೆಗೆದುಕೊಂಡು ಹೋಗುತ್ತಾರೆ ಎಂದು ಮಾಲೀಕ ವೆಂಕಟೇಶ್ ಅಯ್ಯಂಗಾರ್ ತಿಳಿಸುತ್ತಾರೆ.

ಬೆಂಗಳೂರಿನ ವಿವಿಧ ಹೋಟೆಲ್‌ ಗಳಲ್ಲಿ ಸುಮಾರು 30 ವರ್ಷ ಅಡುಗೆಭಟ್ಟರಾಗಿ ಕಾರ್ಯನಿರ್ವಹಿಸಿದ ವೆಂಕಟೇಶ್ ಅಯ್ಯಂಗಾರ್ 20 ವರ್ಷಗಳ ಹಿಂದೆ ದೊಡ್ಡಮಳೂರು ಅಪ್ರಮೇಯಸ್ವಾಮಿ ದೇವಸ್ಥಾನದ ಭೋಜನಶಾಲೆಯಲ್ಲಿ ಅಡುಗೆಭಟ್ಟರಾಗಿದ್ದವರು. ಬೇರೆಯವರ ಕಡೆ ದುಡಿದದ್ದು ಸಾಕು ಎನಿಸಿ ಇಲ್ಲಿ ತಮ್ಮದೇ ಆದ ಅಮೃತ ದರ್ಶಿನಿ ಕಾಂಡಿಮೆಂಟ್ಸ್ ಹಾಕಿದರು. ‘ಭೋಜನಶಾಲೆಯಲ್ಲಿ ಶನಿವಾರ ಹಾಗೂ ಭಾನುವಾರ ಮಾತ್ರ ಕೆಲಸ ಇರುತ್ತಿತ್ತು. ಉಳಿದ ದಿನಗಳಲ್ಲಿ ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದ ನಾನು ಇಲ್ಲೊಂದು ಬೋಂಡಾ ಭಜ್ಜಿ ತಯಾರು ಮಾಡುವ ಸಣ್ಣ ಅಂಗಡಿ ಇಟ್ಟುಕೊಂಡೆ. ಅದನ್ನೆ ವಿಸ್ತರಿಸುತ್ತಾ, ವಿವಿಧ ಹೊಸ ಬಗೆಯ ತಿಂಡಿತಿನಿಸು ತಯಾರು ಮಾಡಲು ಆರಂಭಿಸಿದೆ. ಅದೀಗ ಈ ಭಾಗದಲ್ಲಿಯೇ ಎಲ್ಲೂ ಸಿಗದಷ್ಟು ವೈವಿದ್ಯಮಯ ತಿನಿಸುಗಳು ಸಿಗುವ ಕಾಂಡಿಮೆಂಟ್ಸ್ ಎಂದು ಪರಿಚಿತವಾಗಿದೆ’ ಎಂದು ಅವರು ತಿಳಿಸಿದರು.

ಪ್ರತಿಯೊಂದು ತಿಂಡಿಗೂ ವಿಶೇಷವಾದ ರುಚಿ ಇದೆ. ನಮ್ಮಲ್ಲಿ ತಯಾರಾಗುವ ಮನೋಹರ ಉಂಡೆಯು ನಾವೇ ಕಂಡುಕೊಂಡ ಹೊಸರುಚಿ. ಹಾಗೆಯೆ ನಮ್ಮಲ್ಲಿ ಸಿಗುವ ಕಜ್ಜಾಯ, ಸರ್ಜಫಾ, ತಿರುಪತಿ ರುಚಿಯ ಲಾಡು, ಇತ್ಯಾದಿಗಳಿಗೂ ವಿಶೇಷ ರುಚಿ ಇದೆ.  ಹಾಗೆಯೆ ನಮ್ಮಲ್ಲಿ ತಯಾರಿಸಲಾಗುವ ಅಯ್ಯಂಗಾರ್ ಪುಳಿಯೋಗರೆ ಗೊಜ್ಜಿಗೆ ಆಂಧ್ರಪ್ರದೇಶ, ತಮಿಳುನಾಡು, ಅಮೆರಿಕ, ಲಂಡನ್, ಕೆನಡಾದಲ್ಲಿಯೂ ಗ್ರಾಹಕರಿದ್ದಾರೆ ಎನ್ನುತ್ತಾರೆ ಅವರು.

‘ಮಳೂರು ಅಪ್ರಮೇಯಸ್ವಾಮಿ ದೇವಾಲಯವು ಇತಿಹಾಸ ಪ್ರಸಿದ್ಧವಾಗಿರುವ ಕಾರಣ ದೇವಸ್ಥಾನ ವೀಕ್ಷಿಸಲು ಬರುವ ಪ್ರವಾಸಿಗರು ನಮ್ಮ ಅಂಗಡಿಯ ತಿಂಡಿಗಳನ್ನು ಕೊಳ್ಳದೆ ಹೋಗುವುದಿಲ್ಲ. ಒಮ್ಮೆ ಕೊಂಡವರು ತಮ್ಮ ಪರಿಚಯದವರು ಈಕಡೆ ಬಂದಾಗ ಅವರಿಂದಲೂ ತರಿಸಿಕೊಳ್ಳುತ್ತಾರೆ. ಇತರರಿಗೂ ನಮ್ಮ ಅಂಗಡಿಯ ತಿಂಡಿಗಳ ವಿಷಯ ತಿಳಿಸುತ್ತಾರೆ. ಹಾಗಾಗಿ ನಮ್ಮ ತಿಂಡಿಗಳು ಹೊರರಾಜ್ಯ, ಹೊರದೇಶಗಳಲ್ಲಿಯೂ ಪ್ರಸಿದ್ಧವಾಗಿವೆ’ ಎಂದರು.

ವೆಂಕಟೇಶ್ ಅಯ್ಯಂಗಾರ್ ಅವರ ಸಹೋದರ ಬಾಲಾಜಿ, ಅಕ್ಕನ ಮಗಳು ಮಂಜುಳಾ ಸೇರಿದಂತೆ ಮೂರು ಮಂದಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಕೈಚಳಕದಿಂದ ಇಲ್ಲಿನ ವಿವಿಧ ತಿಂಡಿತಿನಿಸುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.
ಸಂಪರ್ಕ ಸಂಖ್ಯೆ: 9731131440

ವಿಶೇಷ ರುಚಿಯುಳ್ಳ ಮನೋಹರ ಉಂಡೆ
ಸರ್ಜಫಾ
ಮೃದುವಾದ ಕಜ್ಜಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.