ರಾಮನಗರ: ಜಿಲ್ಲಾ ಪಂಚಾಯಿತಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಗರದ ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಮಂಗಳವಾರ ರೈತರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಎರಡು ದಿನ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಅಸಾದುಲ್ಲಾ ಷರೀಫ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಜಿಲ್ಲೆಯ 40 ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು. ರೈತರಿಗೆ ಆಧುನಿಕ ಪದ್ಧತಿಯಲ್ಲಿ ಹಸು, ಕುರಿ, ಮೇಕೆ, ಹಂದಿ ಸಾಕಾಣೆ, ರೋಗ ಹತೋಟಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ವೇಳೆ ಡಾ.ಅಸಾದುಲ್ಲಾ ಷರೀಫ್ ಮಾತನಾಡಿ, ಪಶುಪಾಲನಾ ಇಲಾಖೆ ಜಿಲ್ಲೆಯ ರೈತರಿಗೆ ಆಧುನಿಕ ಪದ್ಧತಿಯಲ್ಲಿ ಹಸು, ಕುರಿ, ಮೇಕೆ, ಹಂದಿ ಸಾಕಾಣೆ ಕೈಗೊಳ್ಳಲು ಅನುಕೂಲವಾಗುವಂತೆ ಅಗತ್ಯ ತರಬೇತಿ ನೀಡುತ್ತಿದೆ. ಪ್ರತಿ ತಿಂಗಳು 40 ರೈತರಂತೆ ಎರಡು ವಿಭಾಗಗಳಲ್ಲಿ 80 ರೈತರಿಗೆ ಎರಡು ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪಶುಪಾಲನಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ನಜೀರ್ ಅಹ್ಮದ್ ಮಾತನಾಡಿ, ಎರಡು ದಿನಗಳ ತರಬೇತಿಯಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ತರಬೇತಿ ಜೊತೆಗೆ ಪ್ರಮಾಣ ನೀಡಲಾಗುತ್ತಿದೆ. ಇದರಿಂದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪುರಸ್ಕೃತ ಯೋಜನೆಗಳಲ್ಲಿ ಸಾಲ ಸೌಲಭ್ಯ ಹಾಗೂ ಸರ್ಕಾರದ ಯೋಜನೆಗಳಿಗೆ ಅನುಕೂಲವಾಗುತ್ತದೆ ಎಂದರು.
ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಹತ್ತಿರದ ಪಶುವೈದ್ಯ ಆಸ್ಪತ್ರೆ ಅಥವಾ ತಾಲ್ಲೂಕು ಪಶುವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಉಪ ನಿರ್ದೇಶಕರ ಕಚೇರಿ ಮುಖ್ಯ ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ್, ರಾಮನಗರ ಪಶುಪಾಲನಾ ಇಲಾಖೆ ಸಂಚಾರಿ ಮತ್ತು ವಿಸ್ತರಣೆ ಹಿರಿಯ ಪಶು ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.