ADVERTISEMENT

ಚರಂಡಿ ತುಂಬ ಹೂಳು: ಜನರ ಗೋಳು

ಪ್ಲಾಸ್ಟಿಕ್‌ ಕಸದ ಹಾವಳಿ: ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ವಿಪರೀತ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 9:47 IST
Last Updated 10 ಸೆಪ್ಟೆಂಬರ್ 2019, 9:47 IST
ಗೀತಾಮಂದಿರ ಬಡಾವಣೆಯ ಚರಂಡಿಯಲ್ಲಿ ತುಂಬಿದ ಪ್ಲಾಸ್ಟಿಕ್‌ ತ್ಯಾಜ್ಯ
ಗೀತಾಮಂದಿರ ಬಡಾವಣೆಯ ಚರಂಡಿಯಲ್ಲಿ ತುಂಬಿದ ಪ್ಲಾಸ್ಟಿಕ್‌ ತ್ಯಾಜ್ಯ   

ರಾಮನಗರ: ನಗರದ ಚರಂಡಿಗಳು ಹೂಳು ತುಂಬಿಕೊಂಡಿದ್ದು, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದಾಗಿದೆ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ನಗರದ ಸಾಕಷ್ಟು ಕಡೆಗಳಲ್ಲಿ ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ನಿಂತಿದೆ. ಕಸಕಡ್ಡಿಗಳು ತೇಲುತ್ತಿವೆ. ಕೆಲವು ಕಡೆ ನಗರಸಭೆಯ ಸಿಬ್ಬಂದಿ ಸ್ವಚ್ಛ ಮಾಡಿದ್ದಾರಾದರೂ ಮತ್ತೆ ಕಸ ಸೇರಿಕೊಂಡಿದೆ. ಇನ್ನೂ ಹಲವೆಡೆ ಹೂಳೆತ್ತುವ ಕೆಲಸವೇ ನಡೆದಿಲ್ಲ. ಚರಂಡಿಯಲ್ಲಿನ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್ ಕಸವೇ ಅತಿ ಹೆಚ್ಚು ತುಂಬಿಕೊಂಡಿದೆ. ಇದರಿಂದಾಗಿ ಮಳೆ ನೀರು ಮುಂದಕ್ಕೆ ಹರಿಯುತ್ತಿಲ್ಲ. ಮನೆಗಳ ಮುಂದೆ ಗಲೀಜು ನೀರು ನಿಲ್ಲುತ್ತಿರುವ ಕಾರಣ ಜನರು ತೊಂದರೆ ಅನುಭವಿಸತೊಡಗಿದ್ದಾರೆ.

ನಗರದ ಪ್ರಮುಖ ಬಡಾವಣೆಗಳಲ್ಲಿ ಆಗಾಗ್ಗೆ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಆದರೆ ಹಿಂದುಳಿದವರು, ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿನ ಪರಿಸ್ಥಿತಿ ಹೇಳತೀರದಾಗಿದೆ. ಎಷ್ಟೋ ಕಡೆ ವರ್ಷಗಳಿಂದಲೂ ಚರಂಡಿಯಲ್ಲಿನ ತ್ಯಾಜ್ಯ ತೆಗೆಯುವ ಕೆಲಸ ಆಗಿಲ್ಲ ಎಂದು ಜನರು ದೂರುತ್ತಾರೆ.

ADVERTISEMENT

ಸೊಳ್ಳೆಗಳ ಕಾಟ: ಚರಂಡಿ ಸಮಸ್ಯೆಯಿಂದಾಗಿ ಜನರು ರಾತ್ರಿ ಹೊತ್ತಿನಲ್ಲಿ ಸೊಳ್ಳೆ ಕಾಟದಿಂದ ಬೇಸತ್ತಿದ್ದಾರೆ. ಮಳೆಗಾಲದಲ್ಲಿಯೂ ಸೊಳ್ಳೆಗಳ ಗುಯ್‌ಗುಟ್ಟುವಿಕೆ ಹೆಚ್ಚಾಗಿ ಕೇಳಿಬರುತ್ತಿದೆ.

‘ಮನೆ ಮುಂದೆ ನೀರು ನಿಂತುಕೊಳ್ಳುತ್ತಿರುವ ಕಾರಣ ವಿಪರೀತ ಸಮಸ್ಯೆಯಾಗಿದೆ. ಸಂಜೆ ಆರರ ನಂತರ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಮನೆಯಲ್ಲಿ ಯಾವಾಗಲೂ ಸೊಳ್ಳೆ ಬತ್ತಿ ಹಚ್ಚಲೇ ಬೇಕು. ಮಕ್ಕಳಲ್ಲೂ ಆಗಾಗ್ಗೆ ಜ್ವರ ಕಾಣಿಸಿಕೊಳ್ಳುತ್ತಿದೆ’ ಎಂದು ದೂರುತ್ತಾರೆ ಗೀತಾಮಂದಿರ ಬಡಾವಣೆ ನಿವಾಸಿ ಶಾಂತಾ.

‘ನಮ್ಮಲ್ಲಿನ ಚರಂಡಿ ವ್ಯವಸ್ಥೆಯೇ ಹದಗೆಟ್ಟಿದೆ. ಕೆಲವು ಕಡೆ ರಸ್ತೆಗೆ ನೀರು ಹರಿಯುತ್ತಿದೆ. ಅಲ್ಲಲ್ಲಿ ಹಂದಿಗಳು ಕಾಣಸಿಗುತ್ತಿವೆ. ಎಲ್ಲೆಡೆ ಪ್ಲಾಸ್ಟಿಕ್‌ ತ್ಯಾಜ್ಯ ತುಂಬುತ್ತಿದೆ’ ಎಂದು ಅರ್ಕಾವತಿ ಬಡಾವಣೆಯ ನಿವಾಸಿ ಶ್ರೀನಿವಾಸ್ ಹೇಳುತ್ತಾರೆ.

‘ಟಿಪ್ಪು ನಗರ, ಯಾರಬ್‌ ನಗರ, ರೆಹಮಾನಿಯಾ ನಗರ, ಟ್ರೂಪ್‌ಲೇನ್‌ ಮೊದಲಾದ ಪ್ರದೇಶಗಳಲ್ಲಿ ಚರಂಡಿ ಸಮಸ್ಯೆ ಇದ್ದೇ ಇದೆ. ನೀರು ಸರಾಗವಾಗಿ ಹರಿಯುತ್ತಿಲ್ಲ. ಕೆಲವು ಕಡೆ ಒಳಚರಂಡಿ ಸ್ಲ್ಯಾಬ್‌ಗಳು ತೆರೆದುಕೊಂಡಿದ್ದು ಅಪಾಯ ಆಹ್ವಾನಿಸುತ್ತಿವೆ. ನಗರಸಭೆಯ ಸಿಬ್ಬಂದಿ ಇತ್ತ ಗಮನ ನೀಡಬೇಕು’ ಎನ್ನುತ್ತಾರೆ ಟಿಪ್ಪು ನಗರ ನಿವಾಸಿ ರೆಹಮಾನ್.

ಪೌರ ಪ್ರಜ್ಞೆ ಬೇಕು: ಚರಂಡಿ ಸ್ವಚ್ಛತೆ ಕುರಿತು ನಗರಸಭೆಯ ಸಿಬ್ಬಂದಿಯನ್ನು ಪ್ರಶ್ನಿಸಿದರೆ ‘ಸೀಮಿತ ಸಿಬ್ಬಂದಿಯೊಂದಿಗೆ ಆದಷ್ಟೂ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ.

ನಗರದೊಳಗಿನ ಕಸದ ವಿಲೇವಾರಿಯ ಜೊತೆಜೊತೆಗೇ ಚರಂಡಿ ಸ್ವಚ್ಛತೆಯ ಕಾರ್ಯವನ್ನೂ ಮಾಡಬೇಕಿದೆ. ಹೀಗಾಗಿ ಕೆಲವೊಂದು ಪ್ರದೇಶದಲ್ಲಿ ಸ್ವಚ್ಛತೆ ಸಾಧ್ಯವಾಗಿಲ್ಲ. ಜನರು ಸಹ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಸವನ್ನು ಚರಂಡಿಗೆ ಸುರಿಯಬಾರದು. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಕಡ್ಡಾಯವಾಗಿ ನಗರಸಭೆಯ ಕಸ ಸಂಗ್ರಹಣಾ ಗಾಡಿಗಳಿಗೆ ಹಾಕಬೇಕು. ಆಗ ಕಸ ಚರಂಡಿಗಳನ್ನು ಸೇರುವುದು ಅರ್ಧ ತಪ್ಪುತ್ತದೆ ಎನ್ನುತ್ತಾರೆ ಅವರು.

ಮತ್ತೆ ಚರಂಡಿ ಸೇರುವ ಕಸ
ಕೆಲವು ಕಡೆ ಚರಂಡಿಯಿಂದ ಮೇಲೆತ್ತಿದ ತ್ಯಾಜ್ಯವನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಅದೇ ಕಸ ಮತ್ತೆ ಒಳ ಸೇರುತ್ತಿದೆ. ಸ್ವಚ್ಛತಾ ಕಾರ್ಮಿಕರ ಶ್ರಮವೂ ವ್ಯರ್ಥವಾಗುತ್ತಿದೆ.

ಚರಂಡಿಯಿಂದ ಹೊಸ ತೆಗೆಯುವ ತ್ಯಾಜ್ಯವು ಹಸಿಯಾದ ಕಾರಣ ವಿಲೇವಾರಿ ಕಷ್ಟವಾದ್ದರಿಂದ ಒಣಗಲಿ ಎಂದು ಅದನ್ನು ಅಲ್ಲಿಯೇ ಬಿಡಲಾಗುತ್ತಿದೆ. ನಂತರದಲ್ಲಿ ಕಾರ್ಮಿಕರು ಅದನ್ನು ಮರೆಯುತ್ತಾರೆ. ನಾಲ್ಕೈದು ದಿನ ಆದ ಮೇಲೂ ಕಸ ಅಲ್ಲಿಯೇ ಬಿದ್ದಿರುತ್ತದೆ. ಮಳೆ ಬಂದ ಸಂದರ್ಭ ಕ್ರಮೇಣ ಮತ್ತೆ ಚರಂಡಿ ಸೇರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.