ADVERTISEMENT

‘ಅನಾರೋಗ್ಯದ ಮೂಲ ಅನೈರ್ಮಲ್ಯ’

ಕರಿಕಲ್ ದೊಡ್ಡಿ ಗ್ರಾಮದಲ್ಲಿ ಬೀದಿನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 13:31 IST
Last Updated 2 ಜನವರಿ 2019, 13:31 IST
ಕರಿಕಲ್ ದೊಡ್ಡಿ ಗ್ರಾಮದಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಕಾರ್ಯಕ್ರಮದಡಿ ಬೀದಿನಾಟಕ ಪ್ರದರ್ಶಿಸಲಾಯಿತು
ಕರಿಕಲ್ ದೊಡ್ಡಿ ಗ್ರಾಮದಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಕಾರ್ಯಕ್ರಮದಡಿ ಬೀದಿನಾಟಕ ಪ್ರದರ್ಶಿಸಲಾಯಿತು   

ಚನ್ನಪಟ್ಟಣ: ’ನಮ್ಮ ಸುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳದ ಹೊರತು ಆರೋಗ್ಯವಂತ ಜೀವನ ನಡೆಸುವುದು ಅಸಾಧ್ಯ’ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.

ಕರಿಕಲ್ ದೊಡ್ಡಿ ಗ್ರಾಮದಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಕಾರ್ಯಕ್ರಮದಡಿ ಬುಧವಾರ ಏರ್ಪಡಿಸಿದ್ದ ‘ಬೀದಿನಾಟಕ ಪ್ರದರ್ಶನ’ದಲ್ಲಿ ಅವರು ಮಾತನಾಡಿದರು.

’ಪ್ರಸ್ತುತ ಆರೋಗ್ಯವೇ ಬಹುದೊಡ್ಡ ಆಸ್ತಿ. ಅನಾರೋಗ್ಯದ ಮೂಲವೇ ಅನೈರ್ಮಲ್ಯ. ಶುದ್ಧ ಕುಡಿಯುವ ನೀರನ್ನು ಬಳಸುವುದರಿಂದ ಹಾಗೂ ಸ್ವಚ್ಛತೆಯ ಬಗೆಗೆ ಸ್ವಯಂ ಕಾಳಜಿ ವಹಿಸುವುದರಿಂದ ಆರೋಗ್ಯವಂತರಾಗಿ ಇರಬಹುದು. ಆಧುನಿಕ ಜೀವನ ಶೈಲಿಯ ಜೊತೆಗೆ ಪರಿಸರ ಕಾಳಜಿ ಇಲ್ಲದಿರುವುದು ನೆಮ್ಮದಿಯ ಜೀವನಕ್ಕೆ ಧಕ್ಕೆಯುಂಟಾಗಿದೆ’ ಎಂದು ತಿಳಿಸಿದರು.

ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ ಮಾತನಾಡಿ, ’ಚರಂಡಿ, ಗುಂಡಿಗಳಲ್ಲಿ ನಿಂತ ನೀರು ಮತ್ತು ತ್ಯಾಜ್ಯ ವಸ್ತುಗಳಿಂದ ಸೊಳ್ಳೆ ಹಾಗೂ ಕ್ರಿಮಿಕೀಟಗಳು ಉತ್ಪತ್ತಿಯಾಗಿ ರೋಗಗಳು ಬಹು ಬೇಗ ಹರಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.

ಯುವ ಕವಿ ಅಬ್ಬೂರು ಶ್ರೀನಿವಾಸು ಮಾತನಾಡಿ, ’ಪರಿಸರ ಕಾಪಾಡಿಕೊಳ್ಳುವ ವಿಚಾರದ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದೆ. ಇಂತಹ ಬೀದಿ ನಾಟಕ ಪ್ರದರ್ಶನಗಳು ಗ್ರಾಮೀಣರಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಹೊಂದಲು ಸಹಕಾರಿಯಾಗಿವೆ’ ಎಂದರು.

ಶಿಕ್ಷಕ ಚಕ್ಕೆರೆ ಪುಟ್ಟಸ್ವಾಮಿ, ಗ್ರಂಥಪಾಲಕ ಶಿವರಾಮು, ವಂದಾರಗುಪ್ಪೆ ರಮೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು. ಜಾಗೃತಿ ಗೀತೆಗಳನ್ನು ಹಾಡಲಾಯಿತು.

ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ರಾಮನಗರ, ತಾಲ್ಲೂಕು ಪಂಚಾಯಿತಿ, ಚನ್ನಪಟ್ಟಣ, ಹಾಗೂ ಸ್ಟೆಪ್ಸ್ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT