ADVERTISEMENT

ಲಸಿಕೆ: ಮನೆ ಮನೆ ಸಮೀಕ್ಷೆಗೆ ಸೂಚನೆ

ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:16 IST
Last Updated 5 ಡಿಸೆಂಬರ್ 2021, 5:16 IST
ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು
ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು   

ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯಿಂದ ಯಾರು ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ಲಸಿಕೆ ಪಡೆಯದೇ ಇರುವವರ ವಿವರ ಕ್ರೋಡೀಕರಿಸಿ ಅವರಿಗೆ ಲಸಿಕೆ ಪಡೆಯುವಂತೆ ಪ್ರೇರೇಪಿಸುವ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮೊದಲ ಡೋಸ್ 7,81,349 ಜನ ಪಡೆದು ಶೇ 95 ಸಾಧನೆಯಾಗಿದೆ. ಉಳಿದ ಶೇ 5 ಜನರು ಲಸಿಕೆ ಬೇರೆ ಜಿಲ್ಲೆಯಿಂದ ಪಡೆದಿರುವ ಬಗ್ಗೆ ಅಥವಾ ಈ ವರೆಗೂ ಲಸಿಕೆ ಪಡೆದಿಲ್ಲವೋ ಎಂಬುದರ ಬಗ್ಗೆ ನಿಖರ ಮಾಹಿತಿ ಬೇಕಿರುತ್ತದೆ. ಇದಕ್ಕೆ ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು ಎಂದರು.

ವಾರ್ಡ್ ವಾರು ಸಮೀಕ್ಷೆ ನಡೆಸಿ: ನಗರ ಪ್ರದೇಶದಲ್ಲಿ ಲಸಿಕೆ ಪಡೆಯದೇ ಇರುವವರ ಮಾಹಿತಿ ಸರಿಯಾಗಿ ದೊರಕುತ್ತಿಲ್ಲ. ಒಂದು ವಾರದೊಳಗಾಗಿ ಮನೆ-ಮನೆ ಸಮೀಕ್ಷೆ ನಡೆಸಿ. ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರ ಜೊತೆ ಸಮೀಕ್ಷೆಗೆ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ನೇಮಿಸಿಕೊಂದು ವರದಿ ನೀಡಬೇಕು ಎಂದು ಸೂಚನೆ ನೀಡಿದರು.

ADVERTISEMENT

ಜಿಲ್ಲೆಯಲ್ಲಿ ಶುಕ್ರವಾರದ ಅಂತ್ಯಕ್ಕೆ ಎರಡನೇ ಡೋಸ್‌ಗೆ 7,01,196 ಜನರಿಗೆ ಲಸಿಕೆ ನೀಡಬೇಕಿದ್ದು, 5,88,048 ಜನರು ಲಸಿಕೆ ಪಡೆದುಕೊಂಡು ಶೇ 84 ರಷ್ಟು ಸಾಧನೆಯಾಗಿದೆ. ಎರಡನೇ ಡೋಸ್ ಲಸಿಕೆ ಪಡೆಯಲು ಅವಧಿ ಪೂರೈಸಿರುವ 1,19,221 ಜನರು ಲಸಿಕೆ ಪಡೆಯಬೇಕಿರುತ್ತದೆ. 64,046 ಗ್ರಾಮೀಣ ಹಾಗೂ 55,175 ಜನರು ನಗರ ಪ್ರದೇಶದವರಾಗಿರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರವಾರು ಲಸಿಕೆ ಪಡೆಯದೇ ಇರುವವರ ಪಟ್ಟಿ ಲಭ್ಯವಿದ್ದು, ಲಸಿಕೆ ಪಡೆಯಲು ಹಿಂಜರಿಯುತ್ತಿರುವ ಪ್ರದೇಶಗಳಲ್ಲಿ ಐ.ಇ.ಸಿ ಚಟುವಟಿಕೆಗಳನ್ನು ಹೆಚ್ಚಿಸಿ ಎಂದು ಹೇಳಿದರು.

ಕೋವಿಡ್ ಲಸಿಕೆ ನೀಡುವ ಕೆಲಸ ಶೇ 100 ಸಾಧನೆಯಾಗಬೇಕಾದರೆ ಎಲ್ಲಾ ಇಲಾಖೆಗಳ ಸಹಭಾಗಿತ್ವ ಮುಖ್ಯ. ಲಸಿಕೆ ಕೆಲಸಕ್ಕೆ ಪ್ರತಿ ಬುಧವಾರ ಎಲ್ಲಾ ಇಲಾಖೆಯ ವಾಹನವನ್ನು ನಿಯೋಜಿಸಲಾಗುತ್ತಿದೆ. ನಿಯೋಜನೆಗೊಳ್ಳುವ ವಾಹನಗಳು ನಿಗದಿಯಾಗುವ ಸಮಯಕ್ಕೆ ಸರಿಯಾಗಿ ತಾಲ್ಲೂಕು ವೈದ್ಯಾಧಿಕಾರಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕು ಎಂದರು.

ಶಾಲಾ, ಕಾಲೇಜಿನ ವಿದ್ಯಾರ್ಥಿಗಳ ಪೋಷಕರು ಎರಡು ಡೋಸ್ ಲಸಿಕೆ ಪಡೆದುಕೊಳ್ಳಬೇಕು. ಈ ಬಗ್ಗೆ ಸರ್ವೆ ನಡೆಸುವಂತೆ ತಿಳಿಸಲಾಗಿತ್ತು. 3940 ಪೋಷಕರು ಲಸಿಕೆ ಪಡೆಯಲು ಬಾಕಿ ಇರುತ್ತಾರೆ ಎಂದು ಶಿಕ್ಷಣ ಇಲಾಖೆಯವರು ತಿಳಿಸಿರುತ್ತಾರೆ. ಶಿಕ್ಷಕರು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪೋಷಕರು ಲಸಿಕೆ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಕೈಗಾರಿಕೆ ಇಲಾಖೆಯವರು ಕಾರ್ಖಾನೆಗಳಲ್ಲಿ ಈ ಹಿಂದೆ ನಡೆಸಿದಂತೆ ಎರಡನೇ ಡೋಸ್ ಲಸಿಕೆಗೆ ಶಿಬಿರಗಳನ್ನು ಆಯೋಜಿಸಿ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಆರ್.ಸಿ.ಎಚ್. ಅಧಿಕಾರಿ ಡಾ. ಪದ್ಮಾ, ತಹಶೀಲ್ದಾರ್ ವಿಜಯ್ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಶ್ವಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.