ADVERTISEMENT

ಕಿರಿಯರಿಗೂ ಲಸಿಕೆ; ಚುರುಕಾಗಲಿ ಅಭಿಯಾನ

ಆರೋಗ್ಯ ಕೇಂದ್ರಗಳಿಗೆ ಬೇಕು ಹೆಚ್ಚು ವಯಲ್ಸ್‌ l ಗ್ರಾಮೀಣ ಭಾಗಗಳಿಗೂ ಆದ್ಯತೆಗೆ ಒತ್ತಾಯ

ಆರ್.ಜಿತೇಂದ್ರ
Published 31 ಮೇ 2021, 2:31 IST
Last Updated 31 ಮೇ 2021, 2:31 IST
ತಗ್ಗೀಕುಪ್ಪೆ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ನಂತರ ವಿಶ್ರಮಿಸುತ್ತಿರುವ ಸಾರ್ವಜನಿಕರು
ತಗ್ಗೀಕುಪ್ಪೆ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ನಂತರ ವಿಶ್ರಮಿಸುತ್ತಿರುವ ಸಾರ್ವಜನಿಕರು   

ರಾಮನಗರ: ಜಿಲ್ಲೆಯಲ್ಲಿ 18ರಿಂದ 44 ವರ್ಷದ ಒಳಗಿನವರಿಗೂ ಲಸಿಕೆ ನೀಡುವ ಅಭಿಯಾನ ಮತ್ತೆ ಆರಂಭ ಆಗಿದೆ. ಇದರೊಟ್ಟಿಗೆ ಮೊದಲ ಡೋಸ್ ಪಡೆದ ಹಿರಿಯರಿಗೆ ಲಸಿಕೆ ಹಾಕುವ ಕಾರ್ಯ ಇನ್ನಷ್ಟು ಚುರುಕಾಗಿ ನಡೆಯಬೇಕಿದೆ.

ಈ ಮೊದಲು 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಲಸಿಕೆ ಕೊರತೆಯಿಂದಾಗಿ ಈ ಅಭಿಯಾನ ಆರಂಭದಲ್ಲೇ ನಿಂತು ಹೋಗಿತ್ತು. ಇದೀಗ ಮತ್ತೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.

ಆದ್ಯತಾ ವಲಯ: ಈ ಮೊದಲು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡ ಎಲ್ಲ ಕಿರಿಯರಿಗೂ ಲಸಿಕೆ ನೀಡಲಾಗುತಿತ್ತು. ಈಗ ಕಿರಿಯರ ವಿಭಾಗದಲ್ಲೂ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಇದಕ್ಕಾಗಿ 17 ಆದ್ಯತಾ ವಲಯಗಳನ್ನು ಸರ್ಕಾರ ಗುರುತಿಸಿದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಲ್ಲೂ ಲಸಿಕೆ ನೀಡುವ ಕಾರ್ಯಕ್ರಮ ಜಾರಿಯಲ್ಲಿದೆ.

ADVERTISEMENT

ಕಟ್ಟಡ ಕಾರ್ಮಿಕರು, ಟೆಲಿಕಾಂ ಮತ್ತು ಇಂಟರ್‌ನೆಟ್ ಸೇವಾದಾರರು, ವಿಮಾನಯಾನ ಸಂಸ್ಥೆ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬಂಕ್ ಸಿಬ್ಬಂದಿ, ಚಿತ್ರೋದ್ಯಮದ ಸಿಬ್ಬಂದಿ, ವಕೀಲರು, ಹೋಟೆಲ್ ಮತ್ತು ಆತಿಥ್ಯ ಸೇವಾದಾರರು, ಕೆಎಂಎಫ್ ಸಿಬ್ಬಂದಿ, ರೈಲ್ವೆ ಸಿಬ್ಬಂದಿ, ಗಾರ್ಮೆಂಟ್ಸ್‌ ನೌಕರರು, ಅರಣ್ಯ ಇಲಾಖೆ ಸಿಬ್ಬಂದಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ, ಜೈಲು ಸಿಬ್ಬಂದಿ, ಆರ್‌ಎಸ್‌ಕೆ ನೌಕರರು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು, ಮಹಿಳಾ ನಿಲಯಗಳಲ್ಲಿ ವಾಸವಿರುವ ನಿವಾಸಿಗಳು ಈಗ ಆದ್ಯತೆ ಮೇರೆಗೆ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಇವರೊಟ್ಟಿಗೆ ಅಂಗವಿಕಲರು, ತೃತೀಯ ಲಿಂಗಿಗಳು, ಬುದ್ಧಿಮಾಂದ್ಯರು ಮೊದಲಾದವರಿಗೂ ಆದ್ಯತೆ ಮೇರೆಗೆ ಲಸಿಕೆ ಸಿಗಲಿದೆ.

‘18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರ ಮತ್ತೆ ಲಸಿಕೆ ನೀಡಲು ಆರಂಭಿಸಿರುವುದು ಸ್ವಾಗತಾರ್ಹ. ಆದರೆ, ಮೇ ಆರಂಭದಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡ ಕಿರಿಯರಿಗೆ ಮಾತ್ರವೇ ಲಸಿಕೆ ನೀಡಿತ್ತು. ರಾಮನಗರಕ್ಕಿಂತ ಬೆಂಗಳೂರಿನ ಜನರೇ ಹೆಚ್ಚಾಗಿ ಲಸಿಕೆ ಪಡೆದುಕೊಂಡು ಹೋಗಿದ್ದರು. ಈ ಬಾರಿ ಹಾಗಾಗದಂತೆ ಎಚ್ಚರವಹಿಸಬೇಕು. ಸ್ಥಳೀಯರಿಗೆ ಲಸಿಕೆ ನೀಡಲು ಮೊದಲ ಆದ್ಯತೆ ನೀಡಬೇಕು. ಸದ್ಯ ಈ ಅಭಿಯಾನ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೆ ಮಾತ್ರ ಸೀಮಿತ ಆಗಿದ್ದು, ಇದನ್ನು ಗ್ರಾಮ ಮಟ್ಟಕ್ಕೂ ವಿಸ್ತರಿಸಬೇಕು’ ಎನ್ನುವುದು ಸಾರ್ವಜನಿಕರ ಆಗ್ರಹ.

ಇನ್ನಷ್ಟು ಸುಧಾರಿಸಲಿ: ಗ್ರಾಮೀಣ ಭಾಗದಲ್ಲಿ ಇಂದಿಗೂ ಲಸಿಕೆಗಳ ಕೊರತೆ ಇದೆ. ಜಿಲ್ಲೆಯ ಸಾಕಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 2–3 ದಿನಕ್ಕೆ ಒಮ್ಮೆ ಮಾತ್ರ ಲಸಿಕೆ ಸರಬರಾಜು ಆಗುತ್ತಿದೆ. 15–20 ಹಳ್ಳಿಗಳ ವ್ಯಾಪ್ತಿಯನ್ನು ಹೊಂದಿರುವ ಕೇಂದ್ರಗಳಿಗೆ ದಿನಕ್ಕೆ 2–3 ವಯಲ್‌ ಲಸಿಕೆ ಮಾತ್ರ ಸಿಗುತ್ತಿದೆ. ಇದರಿಂದಾಗಿ 20–30 ಜನರಿಗಷ್ಟೇ ಲಸಿಕೆ ಸಿಗುತ್ತಿದ್ದು, ಉಳಿದವರು ಲಸಿಕೆ ದೊರೆಯದೇ ಮನೆಗಳಿಗೆ ವಾಪಸ್‌ ಆಗುತ್ತಿದ್ದಾರೆ. ಪ್ರಾಥಮಿಕ ಕೇಂದ್ರವೊಂದಕ್ಕೆ ದಿನವೊಂದಕ್ಕೆ ಕನಿಷ್ಠ 10 ವಯಲ್‌ನಷ್ಟು ಲಸಿಕೆ ಸರಬರಾಜು ಆಗಬೇಕು. ಈ ಮೊದಲು ನೀಡುತ್ತಿದ್ದಂತೆ ಗ್ರಾಮಗಳಲ್ಲಿನ ಅಂಗನವಾಡಿ, ಸಮುದಾಯ ಭವನ ಮೊದಲಾದ ಕಡೆಗಳಲ್ಲೂ ಲಸಿಕೆಗೆ ವ್ಯವಸ್ಥೆ ಆಗಬೇಕು ಎಂದು ಜನರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.