ADVERTISEMENT

ಮಾಗಡಿ: ವರಮಹಾಲಕ್ಷ್ಮಿ ಸ್ವಾಗತಕ್ಕೆ ಹೂ-ಹಣ್ಣು ಖರೀದಿ ಜೋರು

ಬೆಲೆ ಏರಿಕೆ ನಡುವೆಯೂ ಭರ್ಜರಿ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:26 IST
Last Updated 8 ಆಗಸ್ಟ್ 2025, 2:26 IST
ಮಾಗಡಿ ಮಾರುಕಟ್ಟೆಯಲ್ಲಿ ಹೂ ಖರೀದಿಸುತ್ತಿರುವ ಸಾರ್ವಜನಿಕರು
ಮಾಗಡಿ ಮಾರುಕಟ್ಟೆಯಲ್ಲಿ ಹೂ ಖರೀದಿಸುತ್ತಿರುವ ಸಾರ್ವಜನಿಕರು   

ಮಾಗಡಿ: ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮ–ಸಡಗರದಿಂದ ಆಚರಿಸಲು ತಾಲ್ಲೂಕಿನ ಜನತೆ ಸಿದ್ಧತೆ ನಡೆಸಿದ್ದು, ಗುರುವಾರ ಬೆಳಿಗ್ಗೆಯಿಂದಲೇ ಹೂವು ಮತ್ತು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು.

ಬೆಲೆ ಏರಿಕೆ ಬಿಸಿಯ ನಡುವೆಯೂ ಹೆಣ್ಣು ಮಕ್ಕಳ ಸಡಗರದ ಹಬ್ಬವಾಗಿರುವ ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಮಾರುಕಟ್ಟೆಯಲ್ಲಿ ಹೂ, ಹಣ್ಣು, ತರಕಾರಿ ಖರೀದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಗಗನ ಕುಸುಮವಾದ ಹೂಗಳ ಬೆಲೆ: ಮಲ್ಲಿಗೆ ಕೆ.ಜಿಗೆ ₹1000, ಕನಕಾಂಬರ ₹1,500, ಬಟಾನ್ಸ್ ₹400, ಗುಲಾಬಿ ₹450, ಕಾಕಡ ₹600, ಸೇವಂತಿಗೆ ₹450, ಮಲ್ಲಿಗೆ ಹಾರ ಒಂದಕ್ಕೆ ₹400 ಮಾರಾಟವಾಗುತ್ತಿವೆ. ಹಿಂದಿನ ದಿನಗಳಿಗೆ ಹೋಲಿಸಿದರೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹೂವುಗಳ ದರದಲ್ಲಿ ಭಾರಿ ಏರಿಕೆಯಾಗಿದೆ.

ADVERTISEMENT

ಹಬ್ಬದಲ್ಲಿ ಹಣ್ಣುಗಳಿಗೆ ಬೇಡಿಕೆ ಜಾಸ್ತಿ. ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ಮೂರ್ತಿಯ ಸುತ್ತ ಜೋಡಿಸಲು ಮತ್ತು ಅಲಂಕಾರಕ್ಕಾಗಿ ಹೆಚ್ಚಿನ ಪ್ರಮಾಣದ ಹಣ್ಣುಗಳನ್ನು ಖರೀದಿಸುತ್ತಾರೆ. ಬೇಡಿಕೆ ಹೆಚ್ಚಾದಂತೆ ಹಣ್ಣುಗಳ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ. ಆದರೆ ತರಕಾರಿ ಬೆಲೆ ಸ್ಥಿರವಾಗಿದೆ.

ಹಬ್ಬಕ್ಕೆ ಬಟ್ಟೆ, ಅಲಂಕಾರಿಕ ವಸ್ತುಗಳು, ಬಾಳೆಕಂದು ಸೇರಿದಂತೆ ವಿವಿಧ ವಸ್ತು ಖರೀದಿಸಲು ಸಾರ್ವಜನಿಕರು ಅಂಗಡಿ ಮುಂದೆ ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಮಾಗಡಿ ಮಾರುಕಟ್ಟೆಯ ರಸ್ತೆಯಲ್ಲೇ ಹೂವು, ಹಣ್ಣು, ತರಕಾರಿ ವ್ಯಾಪಾರ ಮಾಡುತ್ತಿರುವುದರಿಂದ ಕೆಂಪೇಗೌಡ ವೃತ್ತದಿಂದ ಡೂಮ್‌ಲೈಟ್‌ ವೃತ್ತದ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿತ್ತು.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಹೂ ಹಣ್ಣು ಖರೀದಿಯಲ್ಲಿರುವ ಸಾರ್ವಜನಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.