ADVERTISEMENT

ಸರ್ಕಾರದ ವೈಫಲ್ಯಕ್ಕೆ ಖಂಡನೆ; ವಾಟಾಳ್‌ ನಾಗರಾಜ್ ನೇತೃತ್ವದಡಿ‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 2:37 IST
Last Updated 1 ನವೆಂಬರ್ 2020, 2:37 IST
ರಾಮನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ವಾಟಾಳ್‌ ನಾಗರಾಜ್ ನೇತೃತ್ವದಡಿ ಪ್ರತಿಭಟನೆ ನಡೆಯಿತು
ರಾಮನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ವಾಟಾಳ್‌ ನಾಗರಾಜ್ ನೇತೃತ್ವದಡಿ ಪ್ರತಿಭಟನೆ ನಡೆಯಿತು   

ರಾಮನಗರ: ‘ಕನ್ನಡಿಗರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಒಂದು ವರ್ಷ ಕಾಲ ಕನ್ನಡ ಚಳವಳಿ ನಡೆಸಲಾಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದ್ದು, ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದೆ’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ದೂರಿದರು.

ನಗರದ ಐಜೂರು ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಏಕೀಕರಣಗೊಂಡು 65 ವರ್ಷಗಳು ತುಂಬಿವೆ. ಏಕೀಕರಣವಾದರೂ ಕನ್ನಡಿಗರ ಬದುಕು ಹಸನಾಗಿಲ್ಲ. ನಾಡು–ನುಡಿ ನೆಲ, ಜಲದ ಅಭಿವೃದ್ಧಿಯಾಗಿಲ್ಲ. ಕರ್ನಾಟಕದಲ್ಲಿ ಕನ್ನಡಿಗರ ಸ್ಥಿತಿ ಹೀನಾಯವಾಗಿದ್ದು, ಅನಾಥ ಪ್ರಜ್ಞೆ ಕಾಡುತ್ತಿದೆ. ಅನ್ನಕ್ಕಾಗಿ ಬಂದ ಅನ್ಯಭಾಷಿಕರು ರಾಜಧಾನಿ ಮತ್ತು ರಾಜ್ಯದ ವಿವಿಧೆಡೆ ಭೂಮಿ ಕಬಳಿಸುತ್ತಿದ್ದಾರೆ. ಕನ್ನಡದ ಕರುಳಬಳ್ಳಿಗಳಿಗೆ ಉದ್ಯೋಗವಿಲ್ಲದೆ ನಿರುದ್ಯೋಗ ತಾಂಡವವಾಡುತ್ತಿದೆ. ರಾಜಧಾನಿಯಲ್ಲಿ ಮಾತೃಭಾಷೆ ಕನ್ನಡ ಕಣ್ಮರೆಯಾಗುತ್ತಿದೆ’ ಎಂದು ವಿಷಾದಿಸಿದರು.

ADVERTISEMENT

ಗಡಿನಾಡಿನಲ್ಲಿ ಕನ್ನಡ ಭಾಷೆಯೇ ಕಣ್ಮರೆಯಾಗಿದೆ. ತುಮಕೂರು, ರಾಯಚೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಗಡಿ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಕನ್ನಡ ಶಿಕ್ಷಕರಿಲ್ಲ. ಕನ್ನಡದ ಅಭಿವೃದ್ಧಿಗೆ ಸರ್ಕಾ‌ರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ಬೇರೆ ರಾಜ್ಯದಲ್ಲಿ ಇದಕ್ಕೆ ತದ್ವಿರುದ್ಧ ಸ್ಥಿತಿಯಿದೆ. ಅಲ್ಲಿ ಕನ್ನಡ ಚಿತ್ರಗಳೇ ಪ್ರದರ್ಶನಗೊಳ್ಳುವುದಿಲ್ಲ. ರಾಜ್ಯೋತ್ಸವ ದಿನದಂದು ಎಂಇಎಸ್ ಮುಖಂಡರು ಕರಾಳ ದಿನ ಆಚರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರನ್ನು ಗಡೀಪಾರು ಮಾಡಬೇಕು. ಕರಾಳ ದಿನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಕಳೆದ 62 ವರ್ಷಗಳಿಂದ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಹಾಗಾಗಿ ಭಾನುವಾರ ಬೆಂಗಳೂರಿನಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತದೆ. ಚುನಾವಣಾ ಆಯೋಗ ಸತ್ತೇ ಹೋಗಿದೆ. ಈ ರೀತಿಯ ಚುನಾವಣೆ ನಡೆದರೆ ಪ್ರಜಾಪ್ರಭುತ್ವ ನಾಶವಾಗಿ ಸರ್ವಾಧಿಕಾರ ಜಾರಿಯಾಗಲಿದೆ. ಕಳೆದ ವಾರವೇ ಚುನಾವಣಾ ವೀಕ್ಷಣದಳವನ್ನು ನೇಮಕ ಮಾಡಬೇಕಿತ್ತು. ಆದರೆ, ಇಲ್ಲಿಯ ತನಕ ಈ ಕಾರ್ಯ ನಡೆದಿಲ್ಲ. ಇದರಿಂದ ಚುನಾವಣೆಯಲ್ಲಿ ಹಣದ ಹೊಳೆ ಹರಿಯಲು ಸಹಕಾರಿಯಾಗಿದೆ ಎಂದು ಟೀಕಿಸಿದರು.

ಕರುನಾಡ ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಜಗದೀಶ್, ಪದಾಧಿಕಾರಿಗಳಾದ ಜಯಕುಮಾರ್, ಗಾಯತ್ರಿಬಾಯಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.