ADVERTISEMENT

ಪೌರ ಕಾರ್ಮಿಕರ ವಿಮೆಗೆ ನಿರ್ಲಕ್ಷ್ಯ: ಆಕ್ರೋಶ

ಕಾರ್ಮಿಕರ ಆರೋಗ್ಯ ತಪಾಸಣೆಗೂ ಮೀನಮೇಷ: ಆದ್ಯತೆ ಮೇರೆಗೆ ಮಾಡಿಸಲು ಎ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 10:45 IST
Last Updated 23 ಜುಲೈ 2024, 10:45 IST
<div class="paragraphs"><p>‌ರಾಮನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ&nbsp;ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್ ನೇತೃತ್ವದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆಗೆ ಸಂಬಂಧಿಸಿದ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. </p></div>

‌ರಾಮನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್ ನೇತೃತ್ವದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆಗೆ ಸಂಬಂಧಿಸಿದ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.

   

ರಾಮನಗರ: ಜಿಲ್ಲೆಯಲ್ಲಿರುವ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಇದುವರೆಗೆ ಆರೋಗ್ಯ ತಪಾಸಣೆ, ಆರೋಗ್ಯ ವಿಮೆ ಹಾಗೂ ಅಪಘಾತ ವಿಮೆ ಮಾಡಿಸದಿರುವ ಕುರಿತು, ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆಗೆ ಸಂಬಂಧಿಸಿದ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಮಿತಿ ಸದಸ್ಯ ಆರ್. ನಾಗರಾಜು, ‘ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಸಭೆಯಲ್ಲೂ ಇದೇ ವಿಷಯ ಮುಖ್ಯವಾಗಿ ಚರ್ಚೆಯಾಗಿತ್ತು. ಆದ್ಯತೆ ಮೇರೆಗೆ ವಿಮೆ ಮತ್ತು ಆರೋಗ್ಯ ತಪಾಸಣೆ ಮಾಡಿಸುವಂತೆ ಅಧ್ಯಕ್ಷರೇ ಸೂಚಿಸಿದ್ದರು. ಆದರೆ, ಅವರ ಮಾತಿಗೆ ಕಿಮ್ಮತ್ತಿಲ್ಲವಾಗಿದೆ. ಬಡ ಕಾರ್ಮಿಕರ ಆರೋಗ್ಯದ ಬಗ್ಗೆ ಅಧಿಕಾರಿಗಳು ಇಷ್ಟೊಂದು ನಿರ್ಲಕ್ಷ್ಯ ವಹಿಸಿದರೆ ಹೇಗೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸ್ಥಳೀಯ ಸಂಸ್ಥೆಗಳ ಶೇ 24.1 ಅನುದಾನದಲ್ಲಿ ವಿಮೆ ಮತ್ತು ಆರೋಗ್ಯ ತಪಾಸಣೆಗೆ ಹಣ ಕಾಯ್ದಿರಿಸಿದ್ದರೂ ವಿಮೆ ಮಾಡಿಸದ ಅಧಿಕಾರಿಗಳ ವಿರುದ್ಧ ಬಿನೋಯ್ ಆಕ್ರೋಶ ವ್ಯಕ್ತಪಡಿಸಿದರು. ‘ಲೋಡರ್‌ಗಳನ್ನು ಒಳಗೊಂಡಂತೆ ಪೌರ ಕಾರ್ಮಿಕರಿಗೆ ಎಲ್ಲಾ ರೀತಿಯ ವಿಮೆ ಮಾಡಿಸಬೇಕು. ಕಾಲಕಾಲಕ್ಕೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಬೇಕು’ ಎಂದು ಸೂಚಿಸಿದರು.

ಪರಿಹಾರಕ್ಕೆ ಒತ್ತಾಯ: ‘ವಿಮೆ ಮಾಡಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಚನ್ನಪಟ್ಟಣದಲ್ಲಿ ಆರು ತಿಂಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕನಿಗೆ ಯಾವುದೇ ಪರಿಹಾರ ಸಿಗಲಿಲ್ಲ. ಇದೀಗ, ಮತ್ತೊಬ್ಬ ಕಾರ್ಮಿಕ ವೆಂಕಟರಾಮು ಎಂಬಾತ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ವಿಮೆ ಮಾಡಿಸಿದ್ದರೆ ಇವರ ಕುಟುಂಬಕ್ಕೆ ನೆರವು ಸಿಗುತ್ತಿತ್ತು. ಮೃತರ ಕುಟುಂಬಗಳಿಗೆ ನಗರಸಭೆಯಿಂದ ಪರಿಹಾರ ಒದಗಿಸಬೇಕು’ ಎಂದು ನಾಗರಾಜ್ ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಚನ್ನಪಟ್ಟಣ ನಗರಸಭೆ ಅಧಿಕಾರಿ, ‘ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕನ ಸಹೋದರಿಗೆ ಹೊರಗುತ್ತಿಗೆಯಡಿ ಸಹಾಯಕಿ ಕೆಲಸ ನೀಡಲಾಗಿದೆ’ ಎಂದರು. ಆಗ ಎ.ಸಿ, ‘ಅವರ ಕುಟುಂಬಕ್ಕೆ ನಗರಸಭೆಯಿಂದ ಪರಿಹಾರ ನೀಡಲು ಅವಕಾಶ ಇರುವ ಕುರಿತು ಡಿಯುಡಿಸಿಗೆ ಪತ್ರ ಬರೆದು ಖಚಿತಪಡಿಸಿಕೊಂಡು ಕ್ರಮ ಕೈಗೊಳ್ಳುವಂತೆ ಎ.ಸಿ ಸಲಹೆ ನೀಡಿದರು.

ಅಧಿಕಾರಿಗಳ ಗೈರು: ಸಭೆಗೆ ಜಿಲ್ಲೆಯ ಆರು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಗೈರಾಗಿದ್ದರು. ಪೊಲೀಸ್ ಇಲಾಖೆ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಗೈರಾದವರೆಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸಮಿತಿ ಸದಸ್ಯರು ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಹಾಗೂ ಇತರ ಅಧಿಕಾರಿಗಳು ಇದ್ದರು.

ಪೌರ ಕಾರ್ಮಿಕರು ಶೂ ಸೇರಿದಂತೆ ಸುರಕ್ಷತಾ ಪರಿಕರ ಬಳಸುತ್ತಿವೆಂದರೆ ಅವರ ಮೇಸ್ತ್ರಿಗೆ ಉಗಿಯಿರಿ. ನಿಮಗೆ ಉಗಿಯಲು ಆಗದಿದ್ದರೆ ನನಗೇಳಿ. ಇಲ್ಲಿಗೆ ಕರೆಸಿ ನಿಮಗಿಂತಲೂ ಚನ್ನಾಗಿ ಉಗಿಯುವೆ – ಪಿ.ಕೆ. ಬಿನೋಯ್ ಉಪ ವಿಭಾಗಾಧಿಕಾರಿ

ಸುರಕ್ಷತಾ ಪರಿಕರ ವಿತರಣೆ: ದಾಖಲೆ ಇರಲಿ ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂಬುದರ ಕುರಿತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಅಧಿಕಾರಿಗಳು ವಿತರಿಸಿರುವುದಾಗಿ ಹೇಳಿದರು. ಅದಕ್ಕೆ ಎ.ಸಿ ‘ಗಬ್ ಬೂಟ್ ಗ್ಲೌಸ್ ಮಾಸ್ಕ್ ರೇನ್‌ಕೋಟ್ ಸೇರಿದಂತೆ ಪರಿಕರ ವಿತರಣೆ ಕುರಿತು ಚಿತ್ರ ವಿಡಿಯೊ ಸಮೇತ ದಾಖಲೆ ಇಟ್ಟುಕೊಳ್ಳಬೇಕು. ಇಂತಹ ವಿಷಯಗಳು ಸಭೆಯ ಚರ್ಚಾ ವಿಷಯವಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.