ADVERTISEMENT

ಚನ್ನಪಟ್ಟಣ: ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ

ಸರ್ಕಾರದ ಜನಪರ ಯೋಜನೆ ಜನತೆಗೆ ತಿಳಿಸಿ: ಸಿಪಿವೈ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 5:08 IST
Last Updated 22 ಜನವರಿ 2023, 5:08 IST
ಚನ್ನಪಟ್ಟಣದ ಎಲೇಕೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕರಪತ್ರವನ್ನು ಪ್ರದರ್ಶಿಸುವ ಮೂಲಕ ಬಿಜೆಪಿ ವಿಜಯ ಸಂಕಲ್ಷ ಯಾತ್ರೆಗೆ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜು, ವಿಜಯ ಸಂಕಲ್ಪ ಅಭಿಯಾನ ಜಿಲ್ಲಾ ಸಂಚಾಲಕ ಎಲೇಕೇರಿ ರವೀಶ್, ಇತರರು ಭಾಗವಹಿಸಿದ್ದರು
ಚನ್ನಪಟ್ಟಣದ ಎಲೇಕೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕರಪತ್ರವನ್ನು ಪ್ರದರ್ಶಿಸುವ ಮೂಲಕ ಬಿಜೆಪಿ ವಿಜಯ ಸಂಕಲ್ಷ ಯಾತ್ರೆಗೆ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜು, ವಿಜಯ ಸಂಕಲ್ಪ ಅಭಿಯಾನ ಜಿಲ್ಲಾ ಸಂಚಾಲಕ ಎಲೇಕೇರಿ ರವೀಶ್, ಇತರರು ಭಾಗವಹಿಸಿದ್ದರು   

ಚನ್ನಪಟ್ಟಣ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶನಿವಾರದಿಂದ ಜ. 29ರವರೆಗೆ ನಗರ ಮತ್ತು ಗ್ರಾಮಾಂತರ ಪ್ರದೇಶದ ಎಲ್ಲಾ ಬೂತ್‌ಗಳಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕೈಗೊಂಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಿಳಿಸಿದರು.

ನಗರದ ಎಲೇಕೇರಿಯಲ್ಲಿ ಶನಿವಾರ ನಗರಸಭಾ ಸದಸ್ಯೆ ಸುಮಾ ರವೀಶ್ ಅವರ ಮನೆಗೆ ಬಿಜೆಪಿ ಕರಪತ್ರವನ್ನು ನೀಡಿ ‘ಮನೆ ಬಾಗಿಲಿಗೆ ಬಿಜೆಪಿ’ ಭರವಸೆಯ ಸ್ಟಿಕ್ಕರ್ ಅಂಟಿಸುವ ಮೂಲಕ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು.

ಸ್ಥಳೀಯ ಪದಾಧಿಕಾರಿಗಳು, ಮುಖಂಡರು ಕಾರ್ಯಕರ್ತರು ಯಾತ್ರೆ ನಡೆಸಿ ಪ್ರತಿ ಮನೆಗಳಿಗೆ ಭೇಟಿ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆ ಮತ್ತು ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಬೇಕು. ಈ ಮೂಲಕ ಬಿಜೆಪಿಯನ್ನು ಬೆಂಬಲಿಸಲು ಮತದಾರ ಪ್ರಭುಗಳಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದರು.

ADVERTISEMENT

‘ಫೆ.1ರಿಂದ ನಾನು ತಾಲ್ಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದ ಎಲ್ಲ ಹಳ್ಳಿಗಳಲ್ಲೂ ಪ್ರವಾಸ ಹಮ್ಮಿಕೊಂಡು, ಪ್ರತಿ ಮನೆಗೆ ಭೇಟಿ ನೀಡಿ ಬಿಜೆಪಿ ಸರ್ಕಾರದ ಸಾಧನೆ, ಜನಪರ ಕಾರ್ಯಕ್ರಮಗಳು, ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರ ಆಡಳಿತ ವೈಫಲ್ಯವನ್ನು ಜನರಿಗೆ ತಿಳಿಸುತ್ತೇನೆ’ ಎಂದು ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಪ್ರವಾಸ ಮಾಡುತ್ತಿರುವ ಬಗ್ಗೆ ಮಾತನಾಡಿದ ಯೋಗೇಶ್ವರ್, ನಿಖಿಲ್‌ಗೂ ಚನ್ನಪಟ್ಟಣ ಕ್ಷೇತ್ರಕ್ಕೂ ಸಂಬಂಧವಿಲ್ಲ. ನಾನು ಕುಮಾರಸ್ವಾಮಿ ಹೇಳಿಕೆಗಳಿಗೆ ಮಾತ್ರ ಉತ್ತರ ನೀಡುತ್ತೇನೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜು, ವಿಜಯ ಸಂಕಲ್ಪ ಅಭಿಯಾನ ಜಿಲ್ಲಾ ಸಂಚಾಲಕ ಎಲೆಕೇರಿ ರವೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ. ಜಯರಾಂ, ನಗರ ಅಧ್ಯಕ್ಷ ಶಿವಕುಮಾರ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಲವೇಗೌಡ, ನಗರಸಭಾ ಸದಸ್ಯರಾದ ಸುಮಾ ರವೀಶ್, ಕೋಟೆ ಚಂದ್ರು, ಎಂ.ಎನ್. ಆನಂದಸ್ವಾಮಿ, ಐರಿಸ್ ಬಾಬು, ರಾಮಚಂದ್ರು, ಡಾ. ಲೋಕಾನಂದ್, ಸದಾನಂದ್, ಶಿವಲಿಂಗಯ್ಯ ಭಾಗವಹಿಸಿದ್ದರು.

ಎಚ್.ಡಿ.ಕೆ ವಿರುದ್ಧ ವಾಗ್ದಾಳಿ

ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಸಂಪೂರ್ಣ ವೈಪಲ್ಯ ಅನುಭವಿಸಿದ್ದಾರೆ. ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ವಿಫಲರಾಗಿದ್ದಾರೆ ಎಂದು ಸಿ.ಪಿ. ಯೋಗೇಶ್ವರ್ ವಾಗ್ದಾಳಿ ನಡೆಸಿದರು.

‘ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿ ಆಗಿದ್ದ ವೇಳೆ ಮತ್ತು ಶಾಸಕರ ಅವಧಿಯಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವೈಪಲ್ಯ ಅನುಭವಿಸಿದೆ. ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವರು ವಿಫಲರಾಗಿದ್ದಾರೆ. ನಾನು ನಗರದ ಅಭಿವೃದ್ಧಿಗಾಗಿ ಸರ್ಕಾರಕ್ಕೆ ₹30 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಹಂತದಲ್ಲೇ ₹10 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಉಳಿದ ಅನುದಾನವನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.