ADVERTISEMENT

ಗುಣಮಟ್ಟದ ಹಳ್ಳಿ–ಹಳ್ಳಿಗಳ ಸಂಪರ್ಕ ರಸ್ತೆ

ಅಗಲಕೋಟೆ ಹ್ಯಾಂಡ್‌ ಪೋಸ್ಟ್‌ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 14:35 IST
Last Updated 18 ಜೂನ್ 2020, 14:35 IST
ಮಾಗಡಿ ಅಗಲಕೋಟೆ ಹ್ಯಾಂಡ್‌ ಪೋಸ್ಟ್‌ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಮಂಜುನಾಥ ಭೂಮಿ ಪೂಜೆ ನೆರವೇರಿಸಿದರು.
ಮಾಗಡಿ ಅಗಲಕೋಟೆ ಹ್ಯಾಂಡ್‌ ಪೋಸ್ಟ್‌ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಮಂಜುನಾಥ ಭೂಮಿ ಪೂಜೆ ನೆರವೇರಿಸಿದರು.   

ಮಾಗಡಿ: ತಾಲ್ಲೂಕಿನ ದಕ್ಷಿಣ ಗಡಿಗ್ರಾಮ ಕೊಟ್ಟಗಾರಹಳ್ಳಿಯಿಂದ ಉತ್ತರದ ಗಡಿಗ್ರಾಮ ಸುಗ್ಗನಹಳ್ಳಿವರೆಗೆ 28 ಕಿ.ಮಿ ದ್ವಿಪಥದ ರಸ್ತೆಯನ್ನು ₹33 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಅಗಲಕೋಟೆ ಹ್ಯಾಂಡ್‌ ಪೋಸ್ಟ್‌ ಬಳಿ ಗುರುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು.

ಗಡಿಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಚರಂಡಿ, ಸ್ಲಾಬ್‌ ಹಾಕಿಸಲು ರೈತರು ಸಹಕಾರ ನೀಡಬೇಕು. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ₹300 ಕೋಟಿ ಮಂಜೂರು ಮಾಡಿಸಿದ್ದರು. ತಾಲ್ಲೂಕಿನ ಎಲ್ಲ ರಸ್ತೆಗಳನ್ನು ಉನ್ನತೀಕರಿಸಲ ಕಾವೇರಿ ಕನ್ಟ್ರಕ್ಷನ್‌ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಹಳ್ಳಿ–ಹಳ್ಳಿಗಳ ಸಂಪರ್ಕ ರಸ್ತೆಗಳನ್ನು ಗುಣಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದರು.

ADVERTISEMENT

‌ಮತ್ತಿಕೆರೆ ಗ್ರಾಮದಲ್ಲಿ ರಸ್ತೆ ವಿಸ್ತರಣೆಗೆ ಗ್ರಾಮಸ್ಥರು ಸಹಕಾರ ನೀಡಬೇಕು. ಕೆಶಿಫ್‌ ರಸ್ತೆ ನಿರ್ಮಾಣವಾಗುತ್ತಿದ್ದು, ಕೆಲವು ಕಡೆಗಳಲ್ಲಿ ರೈತರು ಅಪ್ರೋಚ್‌ ರಸ್ತೆ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ. ರೈತರ ಬಳಿಗೆ ಅಧಿಕಾರಿಗಳನ್ನು ಕರೆಸಿ ಚರ್ಚಿಸಿ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಕೋಂಡಹಳ್ಳಿಯಿಂದ ತೂಬಿನಕೆರೆ, ರಂಗೇನಹಳ್ಳಿ, ಕಾಳಾರಿಯಿಂದ ಜಾಣಗೆರೆ ಸಂಪರ್ಕ ರಸ್ತೆಗಳನ್ನು ₹9.30ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.

ಅಗಲಕೋಟೆ ಕೆರೆ ದುರಸ್ತಿಪಡಿಸಲಾಗುವುದು. ಕೆರೆ ಏರಿ ಮೇಲಿರುವ ಚಾರಿತ್ರಿಕ ಶಂಕರ ಲಿಂಗೇಶ್ವರ ದೇವಾಲಯನು ಜೀರ್ಣೋದ್ಧಾರ ಪಡಿಸಲು ಪ್ರವಾಸೋದ್ಯಮ ಇಲಾಖೆ ವತಿಯಿಂದ ₹25 ಲಕ್ಷ ಹಣ ಮಂಜೂರಾಗಿದೆ. ಶ್ರೀಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಡೆ ಅವರ ಸಹಕಾರದೊಂದಿಗೆ ದುರಸ್ತಿ ನಡೆಸಲಾಗುವುದು ಎಂದು ತಿಳಿಸಿದರು.

ಸ್ವಯಂ ಪ್ರೇರಣೆ: ಪಟ್ಟಣದಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿದೆ. ಹರಡದಂತೆ ತಡೆಗಟ್ಟಲು ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದ ಜಾಗರೂಕತೆ ವಹಿಸಬೇಕು. ಅಂತರಕಾಯ್ದುಕೊಳ್ಳುವುದು ಬಹುಮುಖ್ಯ ಎಂದರು.

ಯುದ್ಧ ಬೇಡ: ವಿಶ್ವದಾದ್ಯಂತ ಕೊರೊನಾ ಸೋಂಕು ವಿರುದ್ಧ ಎಲ್ಲ ದೇಶಗಳು ಹೋರಾಡುತ್ತಿರುವಾಗ ಚೀನಾ ಗಡಿ ಕ್ಯಾತೆ ತೆಗೆದು ವೀರ ಯೋಧರನ್ನು ಬಲಿಪಡೆದಿರುವುದು ಖಂಡನೀಯ ಎಂದರು.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಜೆಡಿಎಸ್‌ ಮುಖಂಡ ಜುಟ್ಟನಹಳ್ಳಿ ಜಯರಾಮಯ್ಯ ಮಾರೇಗೌಡ, ತಮ್ಮಣ್ಣಗೌಡ, ಎಪಿಎಂಸಿ ಸದಸ್ಯ ಮಂಜುನಾಥ, ಸಾತನೂರು ಗ್ರಾ.ಪಂ.ಅಧ್ಯಕ್ಷ ಮೂರ್ತಿ, ಚಕ್ರಬಾವಿ ಯೋಗಾನರಸಿಂಹಣ್ಣ, ಅಗಲಕೋಟೆ ಗಂಗಣ್ಣ, ಮಧು, ಗುಂಡ, ಜಗಧೀಶ್‌, ದಂಡಿಗೆಪುರದ ಕುಮಾರ್, ಕೊಟ್ಟಗಾರಹಳ್ಳಿ ಮೂಡ್ಲಯ್ಯ, ಉಮೇಶ್‌, ಗೆಜಗಾರುಗುಪ್ಪೆ ರಂಗಸ್ವಾಮಿ, ಬೆಸ್ತರಪಾಳ್ಯದ ಚೆನ್ನಪ್ಪ, ಬಾಳೇನಹಳ್ಳಿಶಿವಲಿಂಗಯ್ಯ, ಸಾತನೂರು ಕಿಟ್ಟಿ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.