ರಾಮನಗರ: ಗ್ರಾಮದಿಂದ ಸ್ಮಶಾನಕ್ಕೆ ತೆರಳುವ ನಕಾಶೆ ರಸ್ತೆಯು ಒತ್ತುವರಿಯಾಗಿದೆ. ಅದನ್ನು ತೆರವು ಮಾಡುವವರೆಗೆ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ತಾಲ್ಲೂಕಿನ ಪಾಲಾಬೋವಿದೊಡ್ಡಿ ಗ್ರಾಮಸ್ಥರು ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಇಟ್ಟು ಸೋಮವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಸೋಮವಾರ ಬೆಳಗ್ಗೆ ಗ್ರಾಮದ ಬೀರಯ್ಯ (90) ವಯೋಸಹಜವಾಗಿ ಸಾವನ್ನಪ್ಪಿದ್ದರು. ಗ್ರಾಮದಿಂದ 200 ಮೀಟರ್ ದೂರದಲ್ಲಿರುವ ಸ್ಮಶಾನಕ್ಕೆ ಮೃತದೇಹವನ್ನು ಹೊತ್ತೊಯ್ಯಲು ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ಆಕ್ರೋಶಗೊಂಡು ರಸ್ತೆ ತೆರವು ಮಾಡುವವರೆಗೆ ಅಂತ್ಯ ಸಂಸ್ಕಾರ ಮಾಡುವುದು ಬೇಡ ಎಂದು ತೀರ್ಮಾನಿಸಿ ಪ್ರತಿಭಟನೆ ನಡೆಸಿದರು.
ಗ್ರಾಮದ ಸ್ಮಶಾನಕ್ಕೆ ತೆರಳುವ ನಕಾಶೆ ರಸ್ತೆಯನ್ನು ಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ಆ ರಸ್ತೆಯು ಕಾಲುದಾರಿಯಂತಾಗಿದೆ. ಆ ಚಿಕ್ಕ ದಾರಿಯಲ್ಲಿ ಮೃತದೇಹ ಕೊಂಡೊಯ್ಯುವುದು ಸಾಧ್ಯವಿಲ್ಲ. ಇದರ ಬಗ್ಗೆ ಹಲವು ವರ್ಷಗಳಿಂದ ತಹಶೀಲ್ದಾರ್, ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಅಧಿಕಾರಿಗಳು ಸ್ಥಳಕ್ಕೆ ಬಂದು ಅದನ್ನು ತೆರವು ಮಾಡುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ರೆವಿನ್ಯೂ ಇನ್ ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಈಗ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ನಂತರ ರಸ್ತೆ ತೆರವು ಮಾಡಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ತಹಶೀಲ್ದಾರ್ ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದರು.
ನಂತರ ಸ್ಥಳಕ್ಕೆ ಬಂದ ತಹಶೀಲ್ದಾರ್ ತೇಜಶ್ವಿನಿ, ಗ್ರಾಮಸ್ಥರ ಮನವಿ ಆಲಿಸಿದರು. ನಂತರ ಸ್ಮಶಾನಕ್ಕೆ ಹೋಗುವ ನಕಾಶೆ ರಸ್ತೆಯನ್ನು ಪರಿಶೀಲಿಸಿದರು. ನಂತರ ಸರ್ವೆ ಅಧಿಕಾರಿಗಳಿಂದ ರಸ್ತೆ ಅಳತೆ ಮಾಡಿ ಗುರುತು ಕಲ್ಲು ನೆಡಲಾಯಿತು. ಇಂದು ಅಂತ್ಯಕ್ರಿಯೆ ನೆರವೇರಿಸಿ, ಒತ್ತುವರಿ ತೆರವು ಮಾಡಿ ರಸ್ತೆ ಮಾಡಿಕೊಡುವುದಾಗಿ ಪ್ರತಿಭಟನಾಕಾರರ ಮನವೊಲಿಸಿದರು. ನಂತರ ಗ್ರಾಮಸ್ಥರು ಮೃತವ್ಯಕ್ತಿ ಅಂತ್ಯ ಸಂಸ್ಕಾರ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.