ADVERTISEMENT

ಮಾಗಡಿ | ಬಸ್‌ ಕೊರತೆ: ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 6:18 IST
Last Updated 27 ಜುಲೈ 2023, 6:18 IST
ಬಸ್‌ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಬಸ್‌ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಮಾಗಡಿ: ಬಸ್ ಕೊರತೆ ಖಂಡಿಸಿ ತಾಲ್ಲೂಕಿನ ನೇತೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಗುರುವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು. ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು ಎಂದು ಆಗ್ರಹಿಸಿದರು.

ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯಿಂದಾಗಿ, ಬಸ್‌ಗಳು ತುಂಬಿ ತುಳುಕುತ್ತಿವೆ. ಇದರಿಂದಾಗಿ, ನಿತ್ಯ ಶಾಲಾ–ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್‌ಗಳಲ್ಲಿ ಜಾಗವೇ ಸಿಗುತ್ತಿಲ್ಲ. ಸಿಕ್ಕರೂ ಡೋರ್ ಬಳಿ ನೇತಾಡಿಕೊಂಡು ಹೋಗಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ - ಏಳಗೇಹಳ್ಳಿ ಮಾರ್ಗದಲ್ಲಿ ಶಾಲಾ ಸಮಯದಲ್ಲಿ ಒಂದು ಬಸ್ ಮಾತ್ರ ಸಂಚರಿಸುತ್ತದೆ. ಅದನ್ನು ಬಿಟ್ಟರೆ, ಬೇರಾವುದೇ ವಾಹನಗಳ ವ್ಯವಸ್ಥೆ ಇಲ್ಲ. ಬಸ್‌ನಲ್ಲಿ ಜಾಗವಿಲ್ಲದಿರುವುದರಿಂದ ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ತಪ್ಪಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನೆ ಕೈಬಿಟ್ಟು ಬಸ್ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಮನವೊಲಿಸಲು ಬಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಮಾಗಡಿ ಬಸ್ ಡಿಪೊ ಮ್ಯಾನೇಜರ್ ಮತ್ತು ತಹಶೀಲ್ದಾರ್ ಬಂದು ನಮ್ಮ ಅಳಲು ಆಲಿಸಿ ಪರಿಹಾರ ಸೂಚಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ವಿಷಯ ತಿಳಿದ ಮಾಗಡಿ ತಹಶೀಲ್ದಾರ್ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕರೆ ಮಾಡಿ ಮಾತನಾಡಿದರು. ನಂತರ ಗ್ರಾಮಸ್ಥರ ಜೊತೆಗೂ ಮಾತನಾಡಿ ಬಸ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ, ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.