ADVERTISEMENT

ಕನಕಪುರ: ಶಾಸಕರ ಹೆಸರು ಹೇಳಿಕೊಂಡು ದೌರ್ಜನ್ಯ: ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಆರೋಪ

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ನಂದಿನಿಗೌಡ ಆರೋಪ l ನ್ಯಾಯಕ್ಕಾಗಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 4:48 IST
Last Updated 16 ನವೆಂಬರ್ 2020, 4:48 IST
ಸುದ್ದಿಗೋಷ್ಟಿಯಲ್ಲಿ ನಂದಿನಿಗೌಡ ದೌರ್ಜನ್ಯ ಕುರಿತು ಮಾಹಿತಿ ನೀಡಿದರು
ಸುದ್ದಿಗೋಷ್ಟಿಯಲ್ಲಿ ನಂದಿನಿಗೌಡ ದೌರ್ಜನ್ಯ ಕುರಿತು ಮಾಹಿತಿ ನೀಡಿದರು   

ಕನಕಪುರ: ’ಮನೆ ಮಾಲೀಕ ಮತ್ತು ಅವರ ಬೆಂಬಲಿಗರು ಮನೆ ಖಾಲಿ ಮಾಡಿಸುವ ಉದ್ದೇಶದಿಂದ ಮನೆಯೊಳಗೆ ಅಕ್ರಮವಾಗಿ ನುಗ್ಗಿ ಎಳೆದಾಡಿ ಅವಮಾನಿಸಿದ್ದಾರೆ. ಮನೆ ಬಾಗಿಲು ಒಡೆದು ಒಳನುಗ್ಗಿ ದೌರ್ಜನ್ಯ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಹಾಳು ಮಾಡಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ನಂದಿನಿಗೌಡ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಚನ್ನಬಸಪ್ಪ ಲೇಔಟ್‌ನಲ್ಲಿರುವ ಹರಿಲಾಡ್ಸ್‌ ಮಾಲೀಕ ನಾಗೇಶ್‌ ಅವರ ಪತ್ನಿ ಲತಾ ಅವರಿಗೆ ಸೇರಿದ ಮನೆ ಬಾಡಿಗೆ ಪಡೆದು ವಾಸವಾಗಿರುವುದಾಗಿ ತಿಳಿಸಿದರು.

’ನವೆಂಬರ್‌ 8ರಂದು ಲತಾ ನಾಗೇಶ್‌ ಸೇರಿದಂತೆ 8-10 ಮಂದಿ ಬೆಂಬಲಿಗರು ಮನೆ ಬಾಗಿಲು ಒಡೆದು ಒಳನುಗ್ಗಿದರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದೆ ಎಳೆದಾಡಿ ಮನೆಯಿಂದ ಆಚೆ ಹಾಕಿದರು. ಬಟ್ಟೆ ಹರಿದು ಅವಮಾನಗೊಳಿಸಿದ್ದಾರೆ‘ ಎಂದು ದೂರಿದರು.

ADVERTISEMENT

’ತಾಲ್ಲೂಕಿನಲ್ಲಿ ಮಹಿಳೆಯರಿಗೆ, ಬಡವರಿಗೆ ರಕ್ಷಣೆ ಇಲ್ಲದಂತಾಗಿದೆ. ಒಂಟಿ ಮಹಿಳೆಯಾದ ನನ್ನ ಮೇಲೆ ದೌರ್ಜನ್ಯ ನಡೆಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಜನಪ್ರತಿನಿಧಿಯಾದ ನಮಗೆ ಈ ಸ್ಥಿತಿಯಾದರೆ ಇನ್ನು ಸಾಮಾನ್ಯ ಜನರ ಪಾಡೇನು’ ಎಂದು ಪ್ರಶ್ನಿಸಿ
ದರು.

ಸಮಯಕ್ಕೆ ಸರಿಯಾಗಿ ಮನೆ ಬಾಡಿಗೆ ಕೊಡುತ್ತಿದ್ದು 2018ರಲ್ಲಿ ನಡೆದ ಚುನಾವಣೆ ನಂತರ ಬೇರೆ ಕಡೆ ಚಿಕ್ಕದಾದ ಮನೆಗೆ ಹೋಗಲು ನಿರ್ಧರಿಸಿದಾಗ ಮನೆ ಖಾಲಿ ಮಾಡುವುದಾಗಿ ಮಾಲೀಕರಿಗೆ ಮಾಹಿತಿ ನೀಡಿದಾಗ ಖಾಲಿ ಮಾಡದಂತೆ ಅವರೇ ಸೂಚಿಸಿದರು. 2020ಜನವರಿಯಲ್ಲಿ ಬಂದು ದಿಢೀರ್‌ ಮನೆ ಖಾಲಿ ಮಾಡುವಂತೆ ಒತ್ತಡ ಹೇರಿ ಗಲಾಟೆ ಮಾಡಿದರು ಎಂದು ಆರೋಪಿಸಿದರು.

ಕಾಲಾವಕಾಶ ಕೇಳಿದರೂ ಅವಮಾನಿಸಿ ಹಲ್ಲೆ ನಡೆಸಿದರು. ಇದರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಬೇಕಾಯಿತು. ಮನೆ ಬಾಡಿಗೆ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಪಾವತಿಸುವುದು ಬೇಡ ಎಂದು ಫೆಬ್ರುವರಿಯಿಂದ ಕಟ್ಟುತ್ತಿಲ್ಲ ಎಂದು ಹೇಳಿದರು.

ಪ್ರಕರಣ ನ್ಯಾಯಲಯದಲ್ಲಿ ಇರುವಾಗಲೇ ಮನೆಗೆ ನುಗ್ಗಿ ಹಲ್ಲೆ ಮಾಡಿ ದೌರ್ಜನ್ಯ ನಡೆಸಿ ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆ. ಇವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ನ್ಯಾಯ ನೀಡಬೇಕೆಂದು ಆಗ್ರಹಿಸಿದರು.

’ತಾಲ್ಲೂಕಿನಲ್ಲಿ ಕಾಂಗ್ರೆಸ್‌ ದೌರ್ಜನ್ಯ ಎಲ್ಲೆ ಮೀರಿದೆ. ಶಾಸಕರು ಮತ್ತು ಸಂಸದರ ಹೆಸರು ಹೇಳಿಕೊಂಡು ಅವರ ಹಿಂಬಾಲಕರು ಅಮಾಯಕ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ರೌಡಿಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ‘ ಎಂದು ದೂರಿದರು.

ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾದರೂ ಪೊಲೀಸರು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿ ನ್ಯಾಯ ಒದಗಿಸಬೇಕು. ನೊಂದವರು, ಬಡ
ವರು, ಅಸಹಾಯಕರಿಗೆ ಕಾನೂನಿನ ಮೇಲೆ ನಂಬಿಕೆ ವಿಶ್ವಾಸ ಮೂಡುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಟೌನ್‌ ಪೊಲೀಸರು ಒತ್ತಡ ಮಣಿದು ಯಾವುದೇ ಕ್ರಮಕೈಗೊಂಡಿಲ್ಲ. ನ್ಯಾಯಕ್ಕಾಗಿ ಉನ್ನತ ಅಧಿಕಾರಿಗಳಿಗೆ ದೂರು ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.