ADVERTISEMENT

ವಿರುಪಾಕ್ಷಿಪುರ ಗ್ರಾಮದ ಕಥೆ–ವ್ಯಥೆ: ಇದು ಹೆಸರಿಗಷ್ಟೇ ಹೋಬಳಿ ಕೇಂದ್ರ!

ಸರ್ಕಾರಿ ಕಡತಕ್ಕಷ್ಟೇ ಸೀಮಿತ l ವನ್ಯಜೀವಿ ಹಾವಳಿ ಉಲ್ಬಣ

ಎಚ್.ಎಂ.ರಮೇಶ್
Published 29 ಜೂನ್ 2022, 3:08 IST
Last Updated 29 ಜೂನ್ 2022, 3:08 IST
ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಗ್ರಾಮ
ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಗ್ರಾಮ   

ಚನ್ನಪಟ್ಟಣ: ತಾಲ್ಲೂಕಿನ ಮೂರು ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಒಂದಾಗಿರುವ ವಿರುಪಾಕ್ಷಿಪುರ ಗ್ರಾಮ ಕೇವಲ ಹೆಸರಿಗೆ ಮಾತ್ರ ಹೋಬಳಿ ಕೇಂದ್ರ ಎಂಬಂತಾಗಿದೆ. ಇಲ್ಲಿ ಯಾವುದೇ ಸರ್ಕಾರಿ ಕಚೇರಿ ಇಲ್ಲ. ಗ್ರಾಮವು ಸರ್ಕಾರಿ ಕಡತಕ್ಕೆ ಮಾತ್ರ ಸೀಮಿತವಾಗಿದೆ.

ಸುತ್ತಮುತ್ತಲಿನ ಸುಮಾರು 59 ಕಂದಾಯ ಗ್ರಾಮಗಳಿಗೆ ಇದು ಹೋಬಳಿ ಕೇಂದ್ರವಾಗಿದೆ. ತಾಲ್ಲೂಕಿನ ಅತಿಹೆಚ್ಚು ಗ್ರಾಮಗಳಿಗೆ ಹೋಬಳಿ ಕೇಂದ್ರ ಎಂಬ ಹೆಸರು ಪಡೆದಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ.

ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿ ಚನ್ನಪಟ್ಟಣ– ಹಲಗೂರು ಮುಖ್ಯರಸ್ತೆಯಲ್ಲಿ ಇರುವ ಈ ಗ್ರಾಮಕ್ಕೆ ಮುಖ್ಯರಸ್ತೆಯಿಂದ ಒಂದೂವರೆ ಕಿ.ಮೀ. ನಡೆದು ಹೋಗಬೇಕು. 400ಕ್ಕೂ ಹೆಚ್ಚು ಮನೆಗಳುಳ್ಳ 1,600ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹಾದಿಯಲ್ಲಿ ಸಾಗಿದೆ. ಎಂದೋ ಹಾಕಿದ್ದ ಡಾಂಬರು ಕಿತ್ತುಹೋಗಿದ್ದ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದ ಜನಕ್ಕೆ ಈಗ ಹೊಸ ಡಾಂಬರು ಬಂದಿದೆ. ಗ್ರಾಮದ ಒಳಗಿನ ರಸ್ತೆಗಳು ಮಾತ್ರ ಕಾಂಕ್ರೀಟ್ ಭಾಗ್ಯ ಪಡೆದಿದ್ದರೂ ಅಲ್ಲಲ್ಲಿ ಕಿತ್ತು ಹೋಗಿದೆ.

ADVERTISEMENT

ಗ್ರಾಮದೊಳಗಿನ ಎಲ್ಲಾ ರಸ್ತೆಗಳ ಇಕ್ಕೆಲಗಳಲ್ಲಿ ಚರಂಡಿಗಳಿದ್ದರೂ ಹಳೆಯ ಕಾಲದಲ್ಲಿ ನಿರ್ಮಾಣಗೊಂಡ ಚರಂಡಿ ಎಂಬಂತಿವೆ. ಬಾಕ್ಸ್ ಚರಂಡಿ ವ್ಯವಸ್ಥೆಯಾಗಿಲ್ಲ. ಸ್ಥಳೀಯ ಗ್ರಾಮದ ರಸ್ತೆಗಳಿಗೆ ಹೊಸದಾಗಿ ಕಾಂಕ್ರೀಟ್ ಹಾಕುವ ಕೆಲಸ ನಡೆಯುತ್ತಿದೆ. ಚರಂಡಿಗಳ ನಿರ್ಮಾಣಕ್ಕೂ ಮುಂದಾಗಿದೆ. ಗ್ರಾಮದ ಕೆಲವು ರಸ್ತೆಗಳ ಮಧ್ಯೆ ಹುಲ್ಲು ಬೆಳೆದಿದೆ. ಕೆಲವು ರಸ್ತೆಗಳು ಕಿರಿದಾಗಿವೆ.

ಸರ್ಕಾರಿ ಕಚೇರಿಗಳಿಲ್ಲ: ವಿರುಪಾಕ್ಷಿಪುರ ಗ್ರಾಮವು ಹೋಬಳಿ ಕೇಂದ್ರವಾದರೂ ಗ್ರಾಮದಲ್ಲಿ ಯಾವುದೇ ಸರ್ಕಾರಿ ಕಚೇರಿಗಳಿಲ್ಲ. ಹೋಬಳಿಯ ಆಡಳಿತ ನೋಡಿಕೊಳ್ಳುವ ನಾಡ ಕಚೇರಿ ಕೋಡಂಬಹಳ್ಳಿ ಬಳಿಯ ಶವಣಯ್ಯನದೊಡ್ಡಿ ಗ್ರಾಮಕ್ಕೆ ಸ್ಥಳಾಂತರವಾಗಿದೆ.

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರವೂ ಇಲ್ಲ. ಇವು ಸಹ ಶವಣಯ್ಯನದೊಡ್ಡಿಯಲ್ಲಿವೆ. ಜೊತೆಗೆ, ಬೆಸ್ಕಾಂ ಕಚೇರಿ, ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡಗಳು ಸಹ ಶವಣಯ್ಯನದೊಡ್ಡಿಯಲ್ಲಿ ನಿರ್ಮಾಣವಾಗಿವೆ.

‘ಮೊದಲು ನಾಡ ಕಚೇರಿ ನಮ್ಮ ಗ್ರಾಮದಲ್ಲಿಯೇ ಇತ್ತು. ಆದರೆ, ಜನರು ಇಲ್ಲಿಗೆ ಬರಲು ಸೂಕ್ತವಾದ ಸಾರಿಗೆ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಅದನ್ನು ಸ್ಥಳಾಂತರ ಮಾಡಲಾಯಿತು. ಕೆಲವರ ಒತ್ತಾಯದಿಂದ ನಾಡ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದೆ’ ಎಂದು ಗ್ರಾಮಸ್ಥರಾದ ಸಿದ್ದೇಗೌಡ, ವಿ.ಎಸ್. ನಾಗೇಶ್ ಆರೋಪಿಸುತ್ತಾರೆ.

ಕಲ್ಯಾಣಿ ನಿರ್ಮಾಣ: ಗ್ರಾಮದ ಶಿವನ ದೇವಾಲಯದ (ವಿರುಪಾಕ್ಷ ದೇವಾಲಯ) ಎದುರು ಇರುವ ಜಾಗದಲ್ಲಿ ಗ್ರಾ.ಪಂ.ನಿಂದ ನರೇಗಾ ಯೋಜನೆಯಡಿ ಕಲ್ಯಾಣಿ ನಿರ್ಮಿಸಲಾಗುತ್ತಿದ್ದು, ಆಕರ್ಷಣೀಯವಾಗಿದೆ. ಕಲ್ಯಾಣಿಯ ಸುತ್ತಲೂ ಉದ್ಯಾನ ನಿರ್ಮಾಣ ಮಾಡಲಾಗಿದೆ.

‘ನರೇಗಾ ಯೋಜನೆಯಡಿ ₹ 10 ಲಕ್ಷ ಅಂದಾಜು ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನದ ಮುಂಭಾಗ ಕಲ್ಯಾಣಿ ಹಾಗೂ ಆಕರ್ಷಕ ಉದ್ಯಾನ ಇದ್ದರೆ ಬರುವ ಭಕ್ತರಿಗೆ ಅನುಕೂಲವಾಗುತ್ತದೆ’ ಎಂದು ಗ್ರಾ.ಪಂ. ಸದಸ್ಯೆ ಬಿ.ಪಿ. ಉಮಾ ತಿಳಿಸಿದರು.

ಶಾಲಾ ಆವರಣದಲ್ಲಿ ಪಾರ್ಕ್: ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾ.ಪಂ.ನಿಂದ ಪಾರ್ಕ್ ನಿರ್ಮಾಣ ಮಾಡಲಾಗಿದೆ.

ಶಾಲೆ ಹಾಗೂ ಅಂಗನವಾಡಿ ಕೇಂದ್ರ ಒಂದೇ ಆವರಣದಲ್ಲಿದ್ದು, ಕಲಿಕೆಗೆ ಸೂಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಪಾರ್ಕ್ ನಿರ್ಮಾಣ ಮಾಡಿ, ಮಕ್ಕಳು ಓಡಾಡುವ ಜಾಗಕ್ಕೆ ಪಾರ್ಕಿಂಗ್ ಟೈಲ್ಸ್ ಹಾಕಲಾಗಿದೆ. ಶಾಲೆಯ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿ, ಆಟದ ಮೈದಾನದ ಸ್ವಚ್ಛತೆ ಮಾಡಲಾಗುವುದು. ಶಾಲೆಗೆ ಹೋಗುವ ರಸ್ತೆಯ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ಗ್ರಾ.ಪಂ. ಅಧ್ಯಕ್ಷ ಟಿ. ಸುರೇಶ್ ತಿಳಿಸುತ್ತಾರೆ.

ಒಟ್ಟಾರೆ ಹೋಬಳಿ ಕೇಂದ್ರವಾಗಿದ್ದರೂ ವಿರುಪಾಕ್ಷಿಪುರ ಮತ್ತಷ್ಟು ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ. ಗ್ರಾ.ಪಂ.ನಿಂದ ಅಭಿವೃದ್ಧಿ ಕಾರ್ಯಗಳು ಒಂದೊಂದಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಯಾಗಲಿ ಎಂಬುದು ಇಲ್ಲಿನ ಜನರ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.