ADVERTISEMENT

ಕೋವಿಡ್‌-19 | ಕನಕಪುರದಲ್ಲಿ ಜುಲೈ1ರ ವರೆಗೆ ಸ್ವಯಂಪ್ರೇರಣೆಯ ಲಾಕ್‌ಡೌನ್‌

ಬೆಳಿಗ್ಗೆ 8ರಿಂದ 11ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ * ಜುಲೈ1ರವರೆಗೆ ಜಾರಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 13:18 IST
Last Updated 21 ಜೂನ್ 2020, 13:18 IST
ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಮಾತನಾಡಿದರು
ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಮಾತನಾಡಿದರು   

ಕನಕಪುರ: ತಾಲ್ಲೂಕಿನಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು ನಿಯಂತ್ರಣಕ್ಕಾಗಿ ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಸ್ವಯಂಪ್ರೇರಣೆಯಿಂದ ಜುಲೈ 1ರವರೆಗೆ ಲಾಕ್‌ಡೌನ್‌ ಜಾರಿ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಭಾನುವಾರ ಕೊರೊನಾ ನಿಯಂತ್ರಣ ಸಂಬಂಧಿಸಿದಂತೆ ತುರ್ತು ಸಭೆ ನಡೆಸಿದ ಅವರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಲಾಕ್‌ಡೌನ್‌ ತೀರ್ಮಾನ ಪ್ರಕಟಿಸಿದರು.

ಸಭೆಯಲ್ಲಿ ವ್ಯಾಪಾರಿಗಳು, ವರ್ತಕರು, ಸಂಘ ಸಂಸ್ಥೆ ಪ್ರತಿನಿಧಿಗಳು, ನಗರಸಭೆ ಸದಸ್ಯರು, ವಿವಿಧ ಪಕ್ಷದ ರಾಜಕೀಯ ಮುಖಂಡರು ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸಿದರು.

ADVERTISEMENT

ರಾಜ್ಯಕ್ಕೆ ಕೊರೊನಾ ಪ್ರವೇಶಿಸಿದಾಗ ರಾಮನಗರ ಜಿಲ್ಲೆಯಲ್ಲಿ ಯಾವುದೇ ಸೋಂಕಿಲ್ಲದೆ ಕೊರೊನಾ ಮುಕ್ತ ಹಸಿರು ಜಿಲ್ಲೆಯಾಗಿತ್ತು. ಪಾದರಾಯನಪುರದವರನ್ನು ಇಲ್ಲಿನ ಜೈಲಿಗೆ ಕರೆತಂದಾಗ ಅದರ ವಿರುದ್ಧ ಹೋರಾಟ ನಡೆಸಿ ಜಿಲ್ಲೆಗೆ ಕೊರೊನಾ ಬಾರದಂತೆ ತಡೆಗಟ್ಟಲಾಯಿತು. ಆದರೆ, ನಂತರದ ದಿನಗಳಲ್ಲಿ ಚೂಡಾಮಣಿ ಬಟ್ಟೆ ಅಂಗಡಿ ಮತ್ತು ನವೋದಯ ಖಾಸಗಿ ಆಸ್ಪತ್ರೆಯಿಂದ ಇಡೀ ತಾಲ್ಲೂಕಿಗೆ ಸೋಂಕು ಹರಡಿ ಸಮುದಾಯಕ್ಕೂ ವ್ಯಾಪಿಸಿದೆ. ಇದನ್ನು ನಿಯಂತ್ರಿಸುವುದು ತಾಲ್ಲೂಕಿಗೆ ಸವಾಲಾಗಿದೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಅಂತರ ಕಾಯ್ದುಕೊಳ್ಳುವುದು, ಮನೆಯಿಂದ ಹೊರಗಡೆ ಬಾರದಿರುವುದು, ಸೋಂಕು ತಡೆಗಟ್ಟಲು ಇರುವ ಏಕೈಕ ಮಾರ್ಗವಾಗಿದೆ ಎಂದರು.

ಸಭೆಯಲ್ಲಿದ್ದ ಕೆಲವರು ಮಾತನಾಡಿ, ಅಗತ್ಯ ಸೇವೆ ಹೊರತುಪಡಿಸಿ ಉಳಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಣೆಯಿಂದ ಬಂದ್‌ ಮಾಡಲು ತೀರ್ಮಾನಿಸಲಾಗಿದೆ. ಅವಶ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 8 ರಿಂದ 11ರವರೆಗೆ ಅವಕಾಶ ಕೊಡಬೇಕು. ವ್ಯಾಪಾರಸ್ಥರು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಸ್ಯಾನಿಟೈಸರ್‌ ಉಪಯೋಗಿಸಬೇಕು. ತಪ್ಪಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಬೇಕೆಂದು ಸಲಹೆ ನೀಡಿದರು.

ಲಾಕ್‌ಡೌನ್‌ ತೀರ್ಮಾನ ತಾಲ್ಲೂಕಿನ ನಾಗರಿಕರದ್ದು, ಅಧಿಕಾರಿಗಳ ಮೇಲೆ ಒತ್ತಡ ಹಾಕಬಾರದು. ಸರ್ಕಾರದ ನಿಯಮ ಪಾಲಿಸಲು ಅವಕಾಶ ಮಾಡಿಕೊಡಬೇಕು. 10 ದಿನಗಳ ಲಾಕ್‌ಡೌನ್‌ ತೆರವಾದ ಮೇಲೆ ವ್ಯಾಪಾರ ವಹಿವಾಟು ನಡೆಸುವವರು, ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸೂಚಿಸಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿರುವುದರಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕು ಮತ್ತು ರೋಗದ ಚೈನ್‌ ಲಿಂಕ್‌ ತುಂಡರಿಸಬೇಕು. ಆಗ ಮಾತ್ರ ರೋಗ ತಡೆಗಟ್ಟಬಹುದಾಗಿದೆ ಎಂದರು.

ಡಿಎಚ್‌ಒ ನಿರಂಜನ ಡಾ.ಬಿ.ಎಸ್‌.ನಿರಂಜನ್‌ ಮಾತನಾಡಿ, ಆಸ್ಪತ್ರೆ ಮತ್ತು ಬಟ್ಟೆ ಅಂಗಡಿಯವರಿಂದಲೇ ತಾಲ್ಲೂಕಿನಲ್ಲಿ ರೋಗ ಉಲ್ಬಣಿಸಿದೆ. 10 ದಿನಗಳ ಲಾಕ್‌ಡೌನ್‌ ಸಮಯದಲ್ಲಿ ಯಾರು ಕೂಡ ಹೊರಗೆ ವಿನಾಕಾರಣ ಸಂಚಾರ ಮಾಡಬಾರದು ಎಂದು ಮನವಿ ಮಾಡಿದರು.

ವಿಧಾನಪರಿಷತ್‌ ಸದಸ್ಯ ಎಸ್‌.ರವಿ, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಗನ್ನಾಥ್‌, ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕುರುಬಳ್ಳಿ ಶಂಕರ್‌, ಜಿಲ್ಲಾಧಿಕಾರಿ ಅರ್ಚನಾ, ಎಸ್‌.ಪಿ.ಅನೂಪ್‌ಶೆಟ್ಟಿ, ನಗರಸಭೆ ಆಯುಕ್ತ ಕೆ.ಮಾಯಣ್ಣಗೌಡ ಸೇರಿದಂತೆ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು, ವಿವಿಧ ಸಂಘಟನೆ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.