ADVERTISEMENT

ಮತದಾರರ ಪಟ್ಟಿಯಲ್ಲಿ ಲೋಪ: ಆರೋಪ

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ: ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:14 IST
Last Updated 5 ಡಿಸೆಂಬರ್ 2021, 5:14 IST
ಶಾಸಕ ಎ.ಮಂಜುನಾಥ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು
ಶಾಸಕ ಎ.ಮಂಜುನಾಥ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು   

ರಾಮನಗರ: ಬಿಡದಿ ಪುರಸಭೆ ವ್ಯಾಪ್ತಿಯಲ್ಲಿನ ವಾರ್ಡ್‌ಗಳಲ್ಲಿ ಮತದಾರರ ಪಟ್ಟಿಯಲ್ಲಿ ಲೋಪವಾಗಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮಾಗಡಿ ಶಾಸಕ ಎ.ಮಂಜುನಾಥ ಶನಿವಾರ ಜಿಲ್ಲಾಧಿಕಾರಿ ಕೆ. ರಾಕೇಶ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

‘ಕೆಲ ವಾರ್ಡ್‌ಗಳಲ್ಲಿ ಒಂದು ವಾರ್ಡ್‌ನ ಮತದಾರರನ್ನು ಮತ್ತೊಂದು ವಾರ್ಡ್‌ನ ಮತಗಟ್ಟೆಗೆ ಸ್ಥಳಾಂತರಿಸಲಾಗಿದೆ. ಆಗಿರುವ ಲೋಪವನ್ನು ರದ್ದುಪಡಿಸಿ ಮತದಾರರಿಗೆ ತಾವಿರುವ ಮತಗಟ್ಟೆಯಲ್ಲೇ ಮತದಾನಕ್ಕೆ ಅವಕಾಶ ನೀಡಬೇಕು’ ಎಂದು ಶಾಸಕರು ಕೋರಿದರು.

ಈ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಮಂಜುನಾಥ ‘ಪುರಸಭೆಯ 10, 11, 12 ಹಾಗೂ 13ನೇ ವಾರ್ಡ್‌ನ ಮತಗಟ್ಟೆಯಲ್ಲಿದ್ದ ಸುಮಾರು 100 ರಿಂದ 150 ಮತದಾರರ ಹೆಸರನ್ನು ಮತ್ತೊಂದು ವಾರ್ಡ್‌ನ ಮತಗಟ್ಟೆಗೆ ಸ್ಥಳಾಂತರ ಮಾಡಿದ್ದಾರೆ. ಚುನಾವಣೆ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಲಾಗಿದೆ. ಅನೇಕ ವರ್ಷಗಳಿಂದ ಒಂದೇ ಕಡೆ ವಾಸಿಸುತ್ತಿದ್ದವರ ಹೆಸರನ್ನು ಸಹ ಪಟ್ಟಿಯಿಂದ ತೆಗೆದಿದ್ದು, ಕೆಲವರ ಹೆಸರನ್ನು ಮತ್ತೊಂದು ವಾರ್ಡ್‌ನ ಮತಗಟ್ಟೆಗೆ ಸ್ಥಳಾಂತರಿಸಿದ್ದಾರೆ’ ಎಂದು ದೂರಿದರು.

ADVERTISEMENT

‘ಪುರಸಭೆ ಕಂದಾಯ ಅಧಿಕಾರಿ ನಾಗರಾಜು ಮತ್ತಿತರರ ಪಿತೂರಿಯಿಂದ ಈ ಕೃತ್ಯ ನಡೆದಿರುವ ಅನುಮಾನ ಇದೆ. ಈ ವಿಚಾರವನ್ನು ಎರಡು ದಿನಗಳ ಹಿಂದೆಯೇ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಅವರು ತನಿಖೆ ನಡೆಸಿ ನ್ಯಾಯ ದೊರಕಿಸುವ ಭರವಸೆ ನೀಡಿದ್ದರು. ಇಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಇದರಲ್ಲಿ ಶಾಮಿಲಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಜತೆಗೆ ಮತದಾರರ ಪಟ್ಟಿ ಸರಿಪಡಿಸಬೇಕೆಂದು ಒತ್ತಾಯಿಸಲಾಗಿದೆ’ ಎಂದರು.

ಮುಖಂಡರಾದ ನರಸಿಂಹಯ್ಯ, ಸಿದ್ದರಾಜು, ರಾಕೇಶ್, ರಮೇಶ್ ಕುಮಾರ್, ದೇವರಾಜು, ಸೋಮೇಗೌಡ, ರಮೇಶ್ , ಖಲೀಲ್ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.