ಮಾಗಡಿ: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸಲು ವಿರೋಧ ವ್ಯಕ್ತವಾಗದಂತೆ ರಾಮನಗರ ಮತ್ತು ತುಮಕೂರು ಜಿಲ್ಲೆಯ ನಾಯಕರ ಜೊತೆ ಚರ್ಚಿಸಬೇಕೆಂದು ಒತ್ತಾಯಿಸಿ ವೀರಶೈವ, ಲಿಂಗಾಯಿತ ಮಠಾಧೀಶರು ತುಮಕೂರು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ವೀರಶೈವ, ಲಿಂಗಾಯಿತ ಸಮಾಜದ ಗದ್ದಿಗೆ ಮಠದ ಮಹಾಂತ ಸ್ವಾಮೀಜಿ, ಜಗಣ್ಣಯ್ಯನ ಮಠದ ಚನ್ನಬಸವ ಸ್ವಾಮೀಜಿ, ಜಡೆದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಬಂಡೆ ಮಠದ ಮಹಾಲಿಂಗ ಸ್ವಾಮೀಜಿಗಳು ತುಮಕೂರು ಮಠ ಹಾಗೂ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳಿಗೆ ಮನವಿ ಸಲ್ಲಿಸಿದರು. ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಪೂರ್ಣಗೊಂಡರೆ, ಮಾಗಡಿ ತಾಲ್ಲೂಕಿಗೆ ಮುಕ್ಕಾಲು ಟಿಎಂಸಿ ನೀರು ಬರುವ ಹಿನ್ನೆಲೆ ಅದನ್ನು ತುಮಕೂರಿನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ರಾಮನಗರ ಮತ್ತು ತುಮಕೂರು ಜಿಲ್ಲೆಯ ಪ್ರಮುಖ ನಾಯಕರ ಜೊತೆ ಚರ್ಚಿಸಿ ಕಾಮಗಾರಿಗೆ ವಿರೋಧ ವ್ಯಕ್ತವಾಗದಂತೆ ಇಬ್ಬರೂ ಮಠಾಧ್ಯಕ್ಷರು ನೇತೃತ್ವ ವಹಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ನೀರು ರಾಷ್ಟ್ರೀಯ ಸಂಪತ್ತು. ಅದು ಎಲ್ಲರಿಗೂ ಅತ್ಯವಶ್ಯಕ. ಬೇರೆಯವರಿಗೆ ನೀರು ಕೊಡುವುದಿಲ್ಲ ಎಂದು ಹೇಳಲು ಬರುವುದಿಲ್ಲ. ಆದಿಚುಂಚನಗಿರಿ ಮಠಾಧ್ಯಕ್ಷರ ಜೊತೆ ನಾನು ಕೂಡ ಚರ್ಚಿಸಿ ಎರಡು ಜಿಲ್ಲೆಯ ನಾಯಕರ ಸಭೆ ಕರೆದು ಯೋಜನೆಗೆ ಅಡ್ಡಿಪಡಿಸದಂತೆ ತಿಳಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಹೇಮಾವತಿ ನೀರಿನ ವಿಚಾರವಾಗಿ ಮಾಹಿತಿ ಪಡೆದುಕೊಂಡು ಎರಡು ಜಿಲ್ಲೆಗಳ ನಾಯಕರನ್ನು ಸಭೆ ಕರೆದು ಚರ್ಚೆ ನಡೆಸಲಾಗುವುದು. ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಮೇಲೆ ಹಕ್ಕಿದೆ. ಈ ವಿಚಾರ ಶ್ರೀಗಳ ಜೊತೆ ಚರ್ಚಿಸಲಾಗುತ್ತದೆ ಎಂದರು.
ಈ ವೇಳೆ ವೀರಶೈವ ಮಹಾಸಭಾ ಅಧ್ಯಕ್ಷ ಶಿವರುದ್ರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪೊಲೀಸ್ ವಿಜಯಕುಮಾರ್, ತಟ್ಟೆಕೆರೆ ಶರ್ಮಾ, ಕಣ್ಣೂರ್ ಪ್ರಭು, ಜಗದೀಶ್, ಬೇಕರಿ ಶಿವರಾಜ್, ಈಶ ಸಿದ್ದಲಿಂಗಪ್ಪ, ರೋಹಿತ್ ಜಯದೇವ್, ಕುಮಾರ್, ಶಿವಪ್ರಸಾದ್, ಕಾಗಿಮಡು ಹೊನ್ನಪ್ಪ, ಮೋಟಗೊಂಡನಹಳ್ಳಿ ಶಿವಕುಮಾರ್, ಕಣ್ಣೂರು ಸಿದ್ದಲಿಂಗ ಮೂರ್ತಿ, ತಟವಾಳ್ ಮಂಜುನಾಥ್, ಗುಂಡಿಗೆರೆ ಲೋಕೇಶ್, ಉಡುವೆಗೆರೆ ಚಂದ್ರು ಸೇರಿದಂತೆ ಸಮುದಾಯದ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.