ADVERTISEMENT

ಜಾನಪದ ಪೂಜಾ ಕುಣಿತದಲ್ಲಿ ಸೈ ಎನಿಸಿಕೊಂಡ ಶಿವಣ್ಣ

ನಾಳೆ ವಿಶ್ವ ಜಾನಪದ ದಿನಾಚರಣೆ; ಕಲೆಯ ಉಳಿವಿಗೆ ಶ್ರಮಿಸುತ್ತಿರುವ ಕಲಾವಿದ

ಎಸ್.ರುದ್ರೇಶ್ವರ
Published 21 ಆಗಸ್ಟ್ 2018, 12:12 IST
Last Updated 21 ಆಗಸ್ಟ್ 2018, 12:12 IST
ಪೂಜಾ ಕುಣಿತದ ಪ್ರದರ್ಶನ ನೀಡುತ್ತಿರುವ ಅಂಕನಹಳ್ಳಿ ಶಿವಣ್ಣ (ಸಂಗ್ರಹ ಚಿತ್ರ)
ಪೂಜಾ ಕುಣಿತದ ಪ್ರದರ್ಶನ ನೀಡುತ್ತಿರುವ ಅಂಕನಹಳ್ಳಿ ಶಿವಣ್ಣ (ಸಂಗ್ರಹ ಚಿತ್ರ)   

ರಾಮನಗರ: ‘ಜಗ್ಗುಣಕ ಣಕ್ಕ ಣಕ್ಕ, ಜಗ್ಗುಣಕ್ಕ ಣಕ್ಕ ಣಕ್ಕ’ ಎನ್ನುವ ತಮಟೆಯ ಸದ್ದಿಗೆ ತಲೆದೂಗದವರು ಇಲ್ಲ.ತಮಟೆಯ ನಾದ ಎಂತಹವರನ್ನೂ ಕುಣಿಯುವಂತೆ ಪ್ರೇರೇಪಿಸುತ್ತದೆ. ತಮಟೆಯ ಹಿಮ್ಮೇಳದ ಜತೆಗೆ ಬರುವ ಪೂಜಾ ಕುಣಿತವು ಜನಪದ ಕಲೆಗಳಲ್ಲಿಯೇ ಗಂಡು ಕಲೆ ಎಂದೇ ಪ್ರಸಿದ್ಧಿ ಪಡೆದಿದೆ.

ಪೂಜಾ ಕುಣಿತವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ಸಾಧನೆ ಮೆರೆದವರು ಕೆಲವರಿದ್ದಾರೆ. ಅಂತಹವರಲ್ಲಿ ಇಲ್ಲಿನ ಕೂಟಗಲ್‌ ಹೋಬಳಿಯ ಅಂಕನಹಳ್ಳಿ ಶಿವಣ್ಣ ಒಬ್ಬರು. 30 ರಿಂದ 40 ಕೆ.ಜಿ. ಯಷ್ಟು ಭಾರವಾದ ದೇವರ ಪೂಜೆಯನ್ನು ಹೊತ್ತು ದೇಹದ ಸಮತೋಲನ ಕಾಪಾಡಿಕೊಂಡು, ಲೋಟ, ಮಡಿಕೆ, ಏಣಿಯ ಮೇಲೆ ನಡೆಯುವ ಇವರ ಸಾಹಸ ಪ್ರದರ್ಶನ ಮೈನವಿರೇಳಿಸುತ್ತದೆ.

ಪೂಜೆಯ ಪಟವನ್ನು ಹೊತ್ತು ತಮಟೆ ಬಡಿಯುವುದು, ಮಕ್ಕಳನ್ನು ಎತ್ತಿಕೊಂಡು ಕಂಕುಳಲ್ಲಿರಿಸುವುದು, ಕಣ್ಣಿನ ರೆಪ್ಪೆಯ ಮೂಲಕ ನೆಲದ ಮೇಲಿನ ನೋಟು ತೆಗೆಯುವುದು ಸೇರಿದಂತೆ ಹಲವು ಸಾಹಸ ಪ್ರದರ್ಶನ ಮಾಡುತ್ತಾರೆ.

ADVERTISEMENT

ಕಲೆ ಹಾಗೂ ಸಂಸಾರದ ನೊಗ ಎರಡನ್ನು ಒಟ್ಟಿಗೆ ಹೊರುವ ಮೂಲಕ ಸಮತೋಲನ ಕಾಯ್ದುಕೊಂಡಿದ್ದಾರೆ. ರಾಷ್ಟ್ರದ, ರಾಜ್ಯದ ಪ್ರಮುಖ ಎಲ್ಲಾ ಉತ್ಸವಗಳಲ್ಲೂ ಇವರು ಪ್ರದರ್ಶನ ನೀಡಿದ್ದಾರೆ.

ಮೂರನೇ ತರಗತಿಯವರೆಗೆ ಓದಿರುವ ಇವರು 14ನೇ ವಯಸ್ಸಿಗೆ ಪೂಜಾ ಕುಣಿತವನ್ನು ಕಲಿತರು. ಒಮ್ಮೆ ನಾಗವಾರ ಶಿವಲಿಂಗಯ್ಯ ಅವರು ಇವರ ಊರಿನಲ್ಲಿ ಪೂಜಾ ಕುಣಿತವನ್ನು ಪ್ರದರ್ಶಿಸಿದ್ದು ಇವರ ಮೇಲೆ ಪ್ರಭಾವ ಬೀರಿತು. ನಂತರದ ದಿನಗಳಲ್ಲಿ ಅಭ್ಯಾಸ ಪ್ರಾರಂಭಿಸಿದರು. ರಾಗಿ ಮಾಡುವ ಕಣದಲ್ಲಿ ಮಡಕೆ, ಒನಕೆಯ ಮೂಲಕ, ನಂತರ ಮಕ್ಕಳನ್ನು ಎತ್ತಿಕೊಂಡು ಅಭ್ಯಾಸ ಮಾಡಿದರು. ಮೊದಲ ಪ್ರದರ್ಶನಕ್ಕೆ ₹10 ತೆಗೆದುಕೊಂಡಿದ್ದ ಇವರು ಈಗ ಒಂದು ಪ್ರದರ್ಶನಕ್ಕೆ ₹2 ಸಾವಿರ ತೆಗೆದುಕೊಳ್ಳುತ್ತಾರೆ.

‘ಜಾನಪದ ಲೋಕದ ನಿರ್ಮಾತೃ ಎಚ್.ಎಲ್. ನಾಗೇಗೌಡರ ಪರಿಚಯವಾದುದು ನನ್ನ ಪೂಜಾ ಕುಣಿತದ ಪ್ರದರ್ಶನಕ್ಕೆ ತಿರುವು ನೀಡಿತು’ ಎನ್ನುತ್ತಾರೆ ಅಂಕನಹಳ್ಳಿ ಶಿವಣ್ಣ.

‘45 ವರ್ಷಗಳಿಂದ ಪೂಜಾ ಕುಣಿತ ಪ್ರದರ್ಶನವನ್ನು ರಾಷ್ಟ್ರ ಮಟ್ಟದಲ್ಲಿ ಹಲವು ಕಡೆ ನೀಡಿದ್ದೇನೆ. ಸಾವಿರಾರು ಜನರಿಗೆ ಕಲಿಸಿಕೊಟ್ಟಿದ್ದೇನೆ. ಯುವ ಸಮುದಾಯಕ್ಕೆ ಜನಪದ ಕಲೆಗಳನ್ನು ಕಲಿಯಲು ಆಸಕ್ತಿ ಇದೆ. ಆದರೆ ಕಲಿಸುವವರ ಕೊರತೆ ಇದೆ’ ಎನ್ನುವುದು ಇವರ ವಾದ.

‘ಜನಪದ ಕಲೆಗಳನ್ನು ಕಲಿತರೆ ಭವಿಷ್ಯವಿಲ್ಲ, ಜೀವನ ನಡೆಸಲು ಸಾಧ್ಯವಿಲ್ಲ ಎಂದು ಬಿಂಬಿಸಲಾಗುತ್ತಿದೆ. ಈಗಲೂ ನಾನು ಜನಪದ ಕಲೆಗಳ ಪ್ರದರ್ಶನದ ಮೂಲಕ ಉತ್ತಮವಾದ ಜೀವವನ್ನು ನಡೆಸುತ್ತಿದ್ದೇನೆ’ ಎನ್ನುತ್ತಾರೆ ಅವರು.

‘ನನಗೆ ಜನಪದ ಕಲಾವಿದನೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಪೂಜಾ ಕುಣಿತದ ಪ್ರದರ್ಶನ ನೀಡುವುದರಿಂದ ಎಲ್ಲರೂ ನನ್ನನ್ನು ‘ಪೂಜೆ ಶಿವಣ್ಣ’ ಎಂದು ಗುರುತಿಸುತ್ತಾರೆ. ರಾಜಸ್ಥಾನ, ಹೈದರಾಬಾದ್, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದೇನೆ’ ಎಂದು ತಿಳಿಸಿದರು.

‌ತರಬೇತಿ: ಪೂಜಾ ಕುಣಿತವನ್ನು ಕಲಿಯಲು ಆಸಕ್ತಿ ಇರುವವರಿಗೆ ತರಬೇತಿ ನೀಡುತ್ತೇನೆ. ಜಾನಪದ ಲೋಕದಲ್ಲಿ ಈಗಲೂ ತರಬೇತಿ ನೀಡುತ್ತಿದ್ದೇನೆ ಎಂದು ತಿಳಿಸಿದರು.

*******************
ಅಂಕನಹಳ್ಳಿ ಶಿವಣ್ಣರ ಹೆಜ್ಜೆಯ ಗತ್ತು, ದೇಹವನ್ನು ಕುಣಿತಕ್ಕೆ ಬಾಗಿ ಬಳುಕಿಸಿ ಚಂದಕಟ್ಟುವ ರೀತಿ, ಭಾವಕ್ಕೆ ಹೊಂದಿಸುವ ಕ್ರಮ ಮೆಚ್ಚುವಂತಹದ್ದು
ಕುರುವ ಬಸವರಾಜ್‌, ಜಾನಪದ ವಿದ್ವಾಂಸ

ಕಲಿಯುವ ಹಂಬಲವಿದ್ದರೆ ಕಲೆ ಒಲಿಯುತ್ತದೆ. ಮೊದಲು ಕಷ್ಟ ಎನಿಸಿದರೂ ನಂತರ ಪ್ರತಿಫಲ ಲಭಿಸುತ್ತದೆ
– ಅಂಕನಹಳ್ಳಿ ಶಿವಣ್ಣ,ಪೂಜಾ ಕುಣಿತದ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.