ADVERTISEMENT

ಇನ್ನೊಮ್ಮೆ ಬರಲು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 13:33 IST
Last Updated 29 ಡಿಸೆಂಬರ್ 2019, 13:33 IST
ಅಗ್ರಹಾರದಲ್ಲಿ ಪ್ರಭಾಂಜನ ಮತ್ತು ಶೈಲಜಾ ದಂಪತಿ ಮನೆಗೆ ಬಂದಿದ್ದ ಪೇಜಾವರ ಹಿರಿಯ ಶ್ರೀಗಳು (ಸಂಗ್ರಹ ಚಿತ್ರ)
ಅಗ್ರಹಾರದಲ್ಲಿ ಪ್ರಭಾಂಜನ ಮತ್ತು ಶೈಲಜಾ ದಂಪತಿ ಮನೆಗೆ ಬಂದಿದ್ದ ಪೇಜಾವರ ಹಿರಿಯ ಶ್ರೀಗಳು (ಸಂಗ್ರಹ ಚಿತ್ರ)   

ರಾಮನಗರ: 'ನಿಮ್ಮ ಮನೆಗೆ ಇನ್ನೊಮ್ಮೆ ಬರಲು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಪೇಜಾವರ ಶಾಖಾ ಮಠಕ್ಕೆ ನೀವು ಆಗಾಗ ಬರುತ್ತಿರಿ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಒಂದೂವರೆ ವರ್ಷದ ಹಿಂದೆ ಹೇಳಿ ಹೋಗಿದ್ದರು. ಈಗ ಅವರೇ ಕೃಷ್ಣೈಕ್ಯರಾಗಿರುವುದು ನಮಗೆ ತಾಯಿಯನ್ನೇ ಕಳೆದುಕೊಂಡಷ್ಟು ದುಃಖವಾಗಿದೆ’ ಎಂದು ಭಾವುಕರಾದರು ಇಲ್ಲಿನ ಅಗ್ರಹಾರ ನಿವಾಸಿಗಳಾದ ಪ್ರಭಾಂಜನ ಮತ್ತು ಶೈಲಜಾ ದಂಪತಿ.

2018 ರ ಜೂನ್ 12ರಂದು ತಮ್ಮ ಮನೆಗೆ ಭೇಟಿ ನೀಡಿದ್ದ ನೆಚ್ಚಿನ ಯತಿಗಳ ನಿರ್ಗಮನನನ್ನು ತಾಳಿಕೊಳ್ಳಲಾರದ ಈ ಭಕ್ತ ದಂಪತಿ ನೋವನ್ನು ಹೊರಹಾಕಿದ್ದು ಹೀಗೆ.

ಶ್ರೀಗಳ ಜತೆಗಿನ ಒಡನಾಟದ ಬಗ್ಗೆ ಅನುಭವ ಹಂಚಿಕೊಂಡ ಪ್ರಭಾಂಜನ, ‘ಪೇಜಾವರ ಹಿರಿಯ ಶ್ರೀಗಳು ಮತ್ತು ನಮ್ಮ ಕುಟುಂಬಕ್ಕೂ 40 ವರ್ಷಗಳ ಒಡನಾಟವಿದೆ. ನನಗೆ ಬುದ್ಧಿ ತಿಳಿದಾಗಿನಿಂದಲೂ ಅವರನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮ ತಾಯಿಯ ತಂದೆ ವೇದಾಂತಿ ಶೇಷಾಚಾರ್ಯರು ಪೇಜಾವರ ಯತಿಗಳ ಒಡನಾಡಿಯಾಗಿದ್ದರು. ಅವರ ಮೂಲಕ ಶ್ರೀಗಳ ಸಂಪರ್ಕಕ್ಕೆ ಬಂದ ನಮ್ಮ ಕುಟುಂಬ, ಇಂದಿಗೂ ಆ ಮಠದ ಭಕ್ತರಾಗಿ ನಡೆದುಕೊಳ್ಳುತ್ತಿದೆ’ ಎಂದರು.

ADVERTISEMENT

ವೃತ್ತಿಯಲ್ಲಿ ಸಾಪ್ಟವೇರ್ ಎಂಜಿನಿಯರ್ ಆಗಿರುವ ಪ್ರಭಾಂಜನ ಹಾಗೂ ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಅಧ್ಯಾಪಕಿ ಶೈಲಜಾ ದಂಪತಿ 2018ರ ಜೂನ್‍ ತಿಂಗಳಿನಲ್ಲಿ ಮನೆಯ ಗೃಹ ಪ್ರವೇಶಕ್ಕೆ ವಿಶ್ವೇಶ ತೀರ್ಥರನ್ನು ಆಹ್ವಾನಿಸಿದ್ದರು. ಗೃಹಪ್ರವೇಶ ದಿನದ ಬದಲು ಅವರು ಕುಟುಂಬದ ಸದಸ್ಯರನ್ನು ಹರಸಿದ್ದರು.

ಒಂದೂವರೆ ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿದ್ದ ಶ್ರೀಗಳು, ಅರ್ಧಗಂಟೆಗೂ ಹೆಚ್ಚು ಕಾಲ 'ನ್ಯಾಯ ಸುಧಾ' ಪ್ರವಚನ ನೀಡಿ ಹರಸಿದ್ದರು. ಅವರು ಹೊರಟು ನಿಂತಾಗ ನಮ್ಮ ಕಣ್ಣಾಲಿಗಳು ತುಂಬಿ ಬಂದಿದ್ದವು ಎಂದರು.

ಕಡೆಗೋಲು ಕೃಷ್ಣನ ನೆನಪಿನ ಕಾಣಿಕೆ: 1989ರಲ್ಲಿ ಉಡುಪಿಯಲ್ಲಿ ಗುಬ್ಬಿ ಚನ್ನಬಸವೇಶ್ವರ ನಾಟಕ ಕಂಪನಿಯಿಂದ 'ಅಣ್ಣ ತಮ್ಮ' ನಾಟಕ ಪ್ರದರ್ಶನ ಮಾಡುತ್ತಿದ್ದೆವು. ಆಗ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಕಲಾವಿದರನ್ನು ಮಠಕ್ಕೆ ಕರೆಸಿಕೊಂಡು 'ಕಡೆಗೋಲು ಕೃಷ್ಣನ ವಿಗ್ರಹ’ ನೀಡಿದ್ದರು ಎಂದು ರಂಗಭೂಮಿಯ ಹಿರಿಯ ಕಲಾವಿದೆ ಎನ್. ಶಾಂತಮ್ಮ ನೆನಪು ಮಾಡಿಕೊಂಡರು.

ಮಗುವಿನಂತಹ ನಗು: ‘ಹಿಂದೆ ಕೋದಂಡ ರಾಮಚಂದ್ರ ಛತ್ರ ಎಂದು ಕರೆಯುತ್ತಿದ್ದ ಈಗಿನ ಕನ್ನಿಕಾ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮಕ್ಕೆ ಅವರು ಬಂದಿದ್ದರು. ತೆಳ್ಳಗೆ, ಬೆಳ್ಳಗೆ, ಪಾದರಸದಂತಹ ಚುರುಕಿನ ವ್ಯಕ್ತಿತ್ವ ಹೊಂದಿದ್ದ ಅವರು, ಸರಳ, ನಿರಾಡಂಬರರಾಗಿ ಬದುಕಿನುದ್ದಕ್ಕೂ ಜೀವಿಸಿದವರು. ಮಗುವಿನಂತಹ ನಗು, ಹೊಳೆವ ಕಣ್ಣುಗಳು, ಪ್ರೀತಿ, ಸಹಾನುಭೂತಿ ತುಂಬಿದ ಹೃದಯ ನಮ್ಮ ಮನಸ್ಸಿನಲ್ಲಿ ಈಗಲೂ ಉಳಿದುಕೊಂಡಿದೆ’ ಎಂದು ಸಾಂಸ್ಕೃತಿಕ ಸಂಘಟಕಿ ಜೆ. ಶಾಂತಾಬಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.