ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಬಿಡದಾಳೆ ಗ್ರಾಮದಲ್ಲಿ ಗುಂಪು ಕಟ್ಟಿಕೊಂಡು ಜಮೀನಿಗೆ ನುಗ್ಗಿ ಜಮೀನಿನಲ್ಲಿದ್ದವರಿಗೆ ಬೆದರಿಕೆ ಹಾಕಿ, ಅಶೀಲ್ಲವಾಗಿ ನಡೆದುಕೊಂಡಿರುವ ಆರೋಪಿಗಳ ವಿರುದ್ಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಡಿದಾಳೆ ಗ್ರಾಮದಲ್ಲಿ ವಾಸವಿರುವ ಬೀನೂ ಮೋನ್ ಎಂಬುವವರ ಮೇಲೆ ಅದೇ ಗ್ರಾಮದ ಬಿ.ಜಿ.ಸದಾಶಿವ, ಬಸವರಾಜು, ಉಮಾಶಂಕರ್, ಶ್ರೀಧರ್, ಸುಶೀಲಮ್ಮ, ಸಿದ್ದರಾಜು ಸೇರಿದಂತೆ ಹಲವರು ಗಲಾಟೆ ಮಾಡಿದ್ದಾರೆ.
ಬೀನೂ ಮೋನ್ ಮೂರು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಇವರ ಜಮೀನಿಗೆ ಬಿ.ಜಿ.ಸದಾಶಿವ ಅವರು 20 ಜನರ ಗುಂಪು ಕಟ್ಟಿಕೊಂಡು ಜಮೀನಿನ ಕಾಂಪೌಂಡ್ ದಾಟಿ ಅತಿಕ್ರಮ ಪ್ರವೇಶ ಮಾಡಿ ಏ.1 ರಂದು ಗಲಾಟೆ ಮಾಡಿದ್ದಾರೆ.
ಈ ವೇಳೆ ಬಸವರಾಜು ಎಂಬುವರು ಜಮೀನಲ್ಲಿ ಕೆಲಸ ಮಾಡುವ ಮಹಿಳೆಯರ ಮುಂದೆ ಅಶ್ಲೀಲವಾಗಿ ವರ್ತಿಸಿ, ಬೆದರಿಕೆ ಹಾಕಿದ್ದಾರೆ. ಇದಕ್ಕೆಲ್ಲಾ ಬಿ.ಜಿ.ಸದಾಶಿವ ಅವರೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಮ್ಮ ಜಮೀನನ್ನು ಕಬಳಿಸುವ ದುರುದ್ದೇಶದಿಂದ ಸದಾಶಿವ ಅವರು ಈ ರೀತಿಯ ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಸವರಾಜು ಅವರು ಎರಡು ವರ್ಷಗಳ ಹಿಂದೆ ಕುಡಿದು ಬಿಳಿದಾಳೆ ಗ್ರಾಮದ ಸಮೀಪ ನನ್ನ ಬೈಕಿಗೆ ಡಿಕ್ಕಿ ಹೊಡೆದಿದ್ದರು. ಆಗ ಅವರಿಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದೆವು. ಆದರೆ, ಈಗ ಆ ಅಪಘಾತವನ್ನು ಕಾರಣವಾಗಿಟ್ಟುಕೊಂಡು ಬಿ.ಜಿ.ಸದಾಶಿವ ಅವರ ಜತೆ ಸುಮಾರು 20 ಜನರ ಗುಂಪು ಕಟ್ಟಿಕೊಂಡು ಬಂದು ತನಗೆ ₹7.5 ಲಕ್ಷ ಕೊಡಬೇಕೆಂದು ಗಲಾಟೆ ಮಾಡಿದ್ದಾರೆ. ಜತೆಗೆ ನನಗೆ ಮತ್ತು ನನ್ನ ಜಮೀನಿನಲ್ಲಿ ಕೆಲಸ ಮಾಡುವವರಿಗೆ ಬೆದರಿಕೆ ಹಾಕಿದ್ದಾರೆ. ನಮಗೆ ತೊಂದರೆ ಕೊಡುವುದು ಇವರ ಉದ್ದೇಶವಾಗಿದ್ದು ನಮಗೆ ರಕ್ಷಣೆ ನೀಡಬೇಕೆಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.
ಮಹಿಳೆ ದೂರಿನ ಹಿನ್ನಲೆಯಲ್ಲಿ ಕೋಡಿಹಳ್ಳಿ ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.