ಹಾರೋಹಳ್ಳಿ: ದೇಶದ ಶೇ 40ರಷ್ಟು ಗರ್ಭಿಣಿಯರಲ್ಲಿ ಪೌಷ್ಟಿಕಾಂಶದ ಕೊರತೆ ಕಾಡುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್ ಮಂಜುನಾಥ್ ಹೇಳಿದರು.
ಹಾರೋಹಳ್ಳಿ ತಾಲ್ಲೂಕಿನ ಕೆಬ್ಬೆದೊಡ್ಡಿಯಲ್ಲಿ ಮರಿ ಎಕೋ ಇಂಡಸ್ಟ್ರೀಸ್ ಸಾಮಾಜಿಕ ಚಟುವಟಿಕೆಯಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಹೊಸಕೋಟೆ ಗ್ರಾಮದ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಕ್ಕಳ ಆರೋಗ್ಯ ಬಹಳ ಮುಖ್ಯವಾಗಿದೆ. ಈ ಉದ್ದೇಶದಿಂದಲೇ ಕೇಂದ್ರ ಸರಕಾರ ಪೋಷಣ್ ಅಭಿಯಾನ ಜಾರಿಗೆ ತಂದಿದೆ. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವುದು ಮುಖ್ಯ ಎಂದರು.
ಅಂಗನವಾಡಿ ಕೇಂದ್ರವಾಗಲಿ, ಶುದ್ಧ ಕುಡಿಯುವ ನೀರಿನ ಘಟಕವಾಗಲಿ ನಿರ್ಮಿಸುವುದು ಮುಖ್ಯವಲ್ಲ, ಅದನ್ನು ನಿರ್ವಹಣೆ ಮಾಡುವುದು ಬಹಳ ಮುಖ್ಯ. ನೀರಿನ ಘಟಕವು ಹಾನಿಕಾರಕ ಮಾಲಿನ್ಯಕಾರಕಗಳು ಮತ್ತು ಅಪೇಕ್ಷಣೀಯ ಖನಿಜಗಳನ್ನು ತೆಗೆದುಹಾಕುತ್ತದೆ. ಹಾಗಾಗಿ ಸ್ಥಳೀಯರು ಇದರ ಸದುಪಯೋಗ ಪಡಿಸಿಕೊಂಡು ಘಟಕವನ್ನು ಸ್ವಚ್ಛಚಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ಗೌತಮ್ ಗೌಡ, ಮುರಳೀಧರ್, ಮರಿಡಿ ಸಂಸ್ಥೆಯ ರಾಜೀವ್ ಕುಮಾರ್, ಗಬ್ಬಾಡಿ ಜಯರಾಮ್ ಸೇರಿದಂತೆ ಕೆಬ್ಬೆದೊಡ್ಡಿ ಗ್ರಾಮಸ್ಥರು, ಹೊಸಕೋಟೆ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.