ರಾಮನಗರ: ‘ಕಾರ್ಮಿಕರು ತಮ್ಮ ಹಕ್ಕುಗಳನ್ನು ಅರಿತು ಜಾಗೃತರಾದಾಗ ಮಾತ್ರ, ಅವುಗಳನ್ನು ಪಡೆದುಕೊಳ್ಳಲು ಸಾಧ್ಯ. ಇಲ್ಲದಿದ್ದರೆ, ಹೆಸರಿಗಷ್ಟೇ ಅವು ಕಾಗದದ ಮೇಲೆ ಉಳಿಯುತ್ತವೆ. ಕಾರ್ಮಿಕರು ಜಾಗೃತರಾಗದ ಹೊರತು ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ’ ಎಂದು ಸ್ಪಂದನ ಅಧ್ಯಕ್ಷ ಇಶ್ರತ್ ನಿಸಾರ್ ಅಭಿಪ್ರಾಯಪಟ್ಟರು.
ನಗರದ ಸ್ಪಂದನ ಸಂಸ್ಥೆಯಲ್ಲಿ ನಡೆದ ಬೀಡಿ ಕಾರ್ಮಿಕರ ಸಂಘಟನೆ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನಿಷ್ಠ ಕೂಲಿ ಕೊಡಿ ಎಂದು ಮಾಲೀಕನನ್ನು ಒಬ್ಬ ಕೇಳುವುದಕ್ಕೂ, ಜೊತೆಯಲ್ಲಿ ಕೆಲಸ ಮಾಡುವ ಹತ್ತಾರು ಕಾರ್ಮಿಕರು ಒಟ್ಟಾಗಿ ಕೇಳುವುದಕ್ಕೂ ವ್ಯತ್ಯಾಸವಿದೆ. ಕಾರ್ಮಿಕರು ಒಗ್ಗಟ್ಟಾಗಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿದಾಗ ಸೌಲಭ್ಯಗಳು ಸಿಗುತ್ತವೆ’ ಎಂದರು.
‘ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಪರಸ್ಪರ ಹೆಗಲು ಕೊಟ್ಟು ಹೋರಾಡಬೇಕು. ಕಾರ್ಮಿಕ ಪರವಾದ ಕಾಯ್ದೆಗಳನ್ನು ತಿಳಿದುಕೊಳ್ಳಬೇಕು. ಬೀಡಿ ಕಾರ್ಮಿಕರಲ್ಲಿ ಬಹುತೇಕರು ವಿವಿಧ ಕಾರಣಗಳಿಗಾಗಿ ಅನಕ್ಷರಸ್ಥರಾಗಿದ್ದಾರೆ. ಆದರೆ, ತಮ್ಮ ಮಕ್ಕಳನ್ನು ಅನಕ್ಷರಸ್ಥರಾಗಲು ಬಿಡದೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದ ಮೂಲಕ ಉತ್ತಮ ಬದುಕು ಕಟ್ಟಿಕೊಡಲು ಮಾರ್ಗ ತೋರಿಸಬೇಕು’ ಎಂದು ಸಲಹೆ ನೀಡಿದರು.
ಕಾರ್ಮಿಕ ಮುಖಂಡ ರಾಘವೇಂದ್ರ ಮಾತನಾಡಿ, ‘ಬೀಡಿ ಮಂಡಳಿ ಮತ್ತು ಕಾರ್ಮಿಕರಿಗೆ ಇರುವ ಕನಿಷ್ಠ ವೇತನದ ಕುರಿತು ಎಲ್ಲೂರ ಅರಿಯಬೇಕು. ಹಕ್ಕುಗಳನ್ನು ಪಡೆಯುವುದ್ಕಕಾಗಿ ಸಂಘಟಿತರಾಗಬೇಕು. ಒಳ್ಳೆಯ ಉದ್ದೇಶಕ್ಕಾಗಿ ಎಲ್ಲರೂ ಒಗ್ಗೂಡಿ ಹೋರಾಡಬೇಕು. ಅದಕ್ಕಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರದ ಐದು ವಾರ್ಡ್‌ಗಳಿಂದ ಹತ್ತು ಕಾರ್ಮಿಕ ನಾಯಕಿಯರನ್ನು ಆಯ್ಕೆ ಮಾಡಿ, ಅವರ ಜವಾಬ್ದಾರಿಗಳನ್ನು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಮಾಲಿನಿ ಅಂತರ್ಜನಂ, ಇಬ್ರಾಹಿಂ, ಅಶ್ವತ್ಥ, ಕಾವ್ಯ, ಪದ್ಮ, ಮಹಾಲಕ್ಷ್ಮಿ, ಜಯಶ್ರೀ, ಲತಾ, ಮೇಘನ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.