
ರಾಮನಗರ ತಾಲ್ಲೂಕಿನ ಬಿಡದಿಯ ನಾಮ್‌ಧಾರಿ ಸೀಡ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು–ನೆರವು ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಚ್. ಅಣ್ಣಯ್ಯ ಮಾತನಾಡಿದರು.
ರಾಮನಗರ: ‘ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಲಿಂಗ ತಾರತಮ್ಯ ಮಾಡಬಾರದು. ಮುಕ್ತ ಮನಸ್ಸಿನಿಂದ ಅವರು ಕೆಲಸ ಮಾಡುವ ಉತ್ತಮ ವಾತಾವರಣ ಕಲ್ಪಿಸಿ ಕೊಡಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಚ್. ಅಣ್ಣಯ್ಯ ಹೇಳಿದರು.
ತಾಲ್ಲೂಕಿನ ಬಿಡದಿಯ ನಾಮ್‌ಧಾರಿ ಸೀಡ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು–ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಅದರಂತೆ, ಮಹಿಳೆಯರು ಕೆಲಸ ಮಾಡುವ ಎಲ್ಲಾ ಸ್ಥಳಗಳಲ್ಲೂ ಮಹಿಳೆಯರಿಗೆ ಸಮಾನವಾದ ನ್ಯಾಯ ದೊರಕಿಸಿ ಕೊಡಲು ಕಾನೂನುಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬ ಮಹಿಳೆಯು ಕಾನೂನುಗಳ ಅರಿವಿನೊಂದಿಗೆ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್ ಮಾತನಾಡಿ, ‘ಮಹಿಳೆಯರಿಗಾಗಿ ಇರುವ ಕಾನೂನುಗಳ ಅರಿವನ್ನು ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ತಿಳಿದುಕೊಳ್ಳಬೇಕು. ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳು ಹಾಗೂ ಆ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಕಡ್ಡಾಯವಾಗಿ ಸಮಿತಿ ರಚಿಸಬೇಕು’ ಎಂದು ಹೇಳಿದರು.
‘ತಾವು ಎದುರಿಸುವ ಕಿರುಕುಳ, ದೌರ್ಜನ್ಯ ಹಾಗೂ ಇತರ ಸಮಸ್ಯೆಗಳನ್ನು ಮಹಿಳೆಯರು ಧೈರ್ಯದಿಂದ ಸಮಿತಿ ಮುಂದೆ ಹೇಳಿಕೊಂಡು ದೂರು ಸಲ್ಲಿಸಬಹುದು. ಸಂತ್ರಸ್ತರು ಕಾನೂನು ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ: 15100 ಗೆ ಕರೆ ಮಾಡಿ ಸೂಕ್ತ ಕಾನೂನು ಸಲಹೆಗಳನ್ನು ಪಡೆಯಬಹುದು’ ಎಂದು ಸಲಹೆ ನೀಡಿದರು.
ಹಿರಿಯ ವಕೀಲ ಹಾಗೂ ಮಧ್ಯಸ್ಥಿಕೆಗಾರ ವೆಂಕಟೇಶ್ ಬಿ.ಸಿ ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ಶ್ರೀವತ್ಸ, ಕಾರ್ಯದರ್ಶಿ ತಿಮ್ಮೇಗೌಡ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ನಾಗೇಂದ್ರ ಎಚ್.ಆರ್., ನಾಮ್‌ಧಾರಿ ಸೀಡ್ಸ್ ಪ್ರೈವೇಟ್‌ನ ಪಿಒಎಸ್‌ಎಚ್‌ನ ವ್ಯವಸ್ಥಾಪಕಿ ಹಾಗೂ ಅಧ್ಯಕ್ಷೆ ಕಾವೇರಿ ಸುಬ್ರಮಣಿ, ಮಹಿಳಾ ಕಾರ್ಮಿಕರು ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.