ಬಿಡದಿಯ ಅಮೃತ ಎಂಜಿನಿಯರಿಂಗ್ ಕಾಲೇಜಿನಲ್ಲಿ 3 ದಿನಗಳ ಕಾರ್ಯಾಗಾರ.
ಬಿಡದಿ (ರಾಮನಗರ): ‘ವೇದಗಳು ಕೇವಲ ಧಾರ್ಮಿಕ ಗ್ರಂಥಗಳಲ್ಲ. ಅವುಗಳಲ್ಲಿ ವೈಜ್ಞಾನಿಕ ಚಿಂತನೆಗಳ ಜೊತೆಗೆ ಗಣತಶಾಸ್ತ್ರೀಯ ಅಂಶಗಳೂ ಇವೆ. ಶುಲ್ಬ ಸೂತ್ರಗಳು ಎಂಬ ಪುರಾತನ ಗ್ರಂಥಗಳು ಗ್ರಂಥಗಳು ಪೈಥಾಗೊರಿಯನ್ ಸೂತ್ರ, ವೃತ್ತ ಮತ್ತು ಚತುರ್ಭುಜದ ಪ್ರಮಾಣಿಕ ಗಣಿತದ ನಿಯಮಗಳನ್ನು ವಿವರಿಸುತ್ತವೆ’ ಎಂದು ಕಂಪ್ಯೂಟರ್ ವಿಜ್ಞಾನಿ ಮತ್ತು ಗಣಿತ ತಜ್ಞ ಪ್ರೊ.ಸಿ.ಕೆ. ರಾಜು ಅಭಿಪ್ರಾಯಪಟ್ಟರು.
ಇಲ್ಲಿನ ಅಮೃತ ಎಂಜಿನಿಯರಿಂಗ್ ಮತ್ತು ನಿರ್ವಹಣಾ ವಿಜ್ಞಾನಗಳ ಸಂಸ್ಥೆಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ದೆಹಲಿಯ ಕೌಟಿಲ್ಯ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಇಂಟೆಲೆಕ್ಚುವಲ್ ಟ್ರೆಡಿಷನ್ ಸಹಯೋಗದಲ್ಲಿ ಕಾಲೇಜಿನಲ್ಲಿ ಬುಧವಾರದಿಂದ ಹಮ್ಮಿಕೊಂಡಿರುವ ಮೂರು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇತಿಹಾಸ, ಅಭಿವೃದ್ಧಿ ಮತ್ತು ಸಮಕಾಲೀನ ಅನ್ವಯಗಳು’ ವಿಷಯ ಕುರಿತು ಕಾರ್ಯಾಗಾರದಲ್ಲಿ ‘ವೇದ ಪರಂಪರೆಯಲ್ಲಿ ಗಣಿತಶಾಸ್ತ್ರ ಮತ್ತು ಭಾರತೀಯ ಜ್ಞಾನ ವ್ಯವಸ್ಥೆ’ ಕುರಿತು ವಿಚಾರ ಮಂಡಿಸಿದ ರಾಜು, ‘ವೇದಗಳಲ್ಲಿ ಒಂದು ಭಾಗವಾದ ಜ್ಯೋತಿಷ್ಯಶಾಸ್ತ್ರದಲ್ಲಿ ಗಣಿತಶಾಸ್ತ್ರವನ್ನು ಬಳಸಿ ನಕ್ಷತ್ರಗಳು ಮತ್ತು ಗ್ರಹಗಳ ಚಲನೆಗಳನ್ನು ಲೆಕ್ಕ ಹಾಕಲು ಬಳಸಲಾಗುತ್ತಿತ್ತು’ ಎಂದರು.
‘ಭಾರತೀಯ ಗಣಿತಜ್ಞಾನ ಮತ್ತು ಪಾಶ್ಚಾತ್ಯ ಗಣಿತಕ್ಕೂ ತುಂಬಾ ವ್ಯತ್ಯಾಸವಿದೆ. ಪಾಶ್ಚಾತ್ಯ ಗಣಿತವು ನಿರ್ದಿಷ್ಟವಾಗಿ ಯೂರೋಪಿಯನ್ ತತ್ವಗಳ ಮೇಲೆ ಆಧಾರಿತವಾಗಿದೆ. ಭಾರತೀಯ ಗಣಿತ ಹೆಚ್ಚು ಪ್ರಾಯೋಗಿಕವಾಗಿತ್ತು. ಪಾಶ್ಚಾತ್ಯ ಗಣಿತ ಯೂಕ್ಲಿಡಿಯನ್ ಭೌಮಿತಿಯ ಮೇಲೆ ಭದ್ರಗೊಂಡಿದ್ದರೆ, ಭಾರತೀಯ ಗಣಿತವು ಅನಂತ-ಗಣಿತ ಮುಂತಾದ ತಂತ್ರಗಳನ್ನು ಶತಮಾನಗಳ ಹಿಂದೆಯೇ ಬಳಸಿತ್ತು’ ಎಂದು ಹೇಳಿದರು.
‘ಭಾರತದ ನೀಲಕಂಠ ಸೋಮಯಾಜಿ, ಭಾಸ್ಕರಾಚಾರ್ಯ ಮತ್ತು ಆರ್ಯಭಟರು ಪರಿಗಣಿಸಿದ ಅನಂತ-ಗಣಿತದ ಕಲ್ಪನೆಗಳು ಪಾಶ್ಚಾತ್ಯ ಗಣಿತದ ಮೂಲಾಧಾರಗಳಾಗಿವೆ. ಭಾರತೀಯ ಜ್ಞಾನ ಪರಂಪರೆಯಲ್ಲಿ ಗಣಿತಶಾಸ್ತ್ರವು ವೇದ, ತಂತ್ರ ಮತ್ತು ಖಗೋಳಶಾಸ್ತ್ರದ ಅವಿಭಾಜ್ಯ ಭಾಗವಾಗಿದೆ. ಸಂಖ್ಯಾ ಪದ್ಧತಿ, ಶೂನ್ಯ ಮತ್ತು ದಶಮಲ ವ್ಯವಸ್ಥೆ ಸೇರಿದಂತೆ ಇತರ ತತ್ವಗಳು ಭಾರತದ ಕೊಡುಗೆಗಳಾಗಿವೆ’ ಎಂದು ತಿಳಿಸಿದರು.
ದೆಹಲಿ ವಿಶ್ವವಿದ್ಯಾಲಯದ ನಿರ್ವಹಣಾ ಅಧ್ಯಯನಗಳ ವಿಭಾಗದ ಪ್ರಾಧ್ಯಾಪಕ ಡಾ. ರಮೇಶ್ ಕುಮಾರ್, ಕೌಟಿಲ್ಯ ಇಂಟರ್‌ನ್ಯಾಷನಲ್ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕ ಅಜಿತ್ ಕುಮಾರ್ ತಿವಾರಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಸಂತೋಷ್ ಎಂ. ಮುರಣಾಳ ಹಾಗೂ ಡೀನ್ ಡಾ. ರಾಜೇಶ್ವರ್ ಕಾಡದೇವರಮಠ ಇದ್ದರು.
‘ವೇದ ವಿಜ್ಞಾನ ಮತ್ತು ರಾಮಾಯಣ-ಮಹಾಭಾರತದ ಐತಿಹಾಸಿಕ ಸನ್ನಿವೇಶ ಮತ್ತು ಭಾರತೀಯ ಜ್ಞಾನ ವ್ಯವಸ್ಥೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ವೇದ ಪಂಡಿತ ಡಾ. ರವಿ ಪ್ರಕಾಶ್ ಆರ್ಯ ‘ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವು ಕೇವಲ ಪೌರಾಣಿಕ ಕಥೆಗಳಲ್ಲ. ಅವು ಐತಿಹಾಸಿಕ ಸಾಕ್ಷ್ಯಾಧಾರಿತ ಗ್ರಂಥಗಳಾಗಿವೆ. ಇವುಗಳಲ್ಲಿ ಬರುವ ಪೌರಾಣಿಕ ಸ್ಥಳಗಳು ಮತ್ತು ವೃತ್ತಾಂತಗಳ ಹಿಂದಿರುವ ವೈಜ್ಞಾನಿಕ ಹಾಗೂ ಐತಿಹಾಸಿಕ ಅಂಶಗಳು ಪುರಾವೆಗಳ ಮೂಲಕ ಸಾಬೀತಾಗಿವೆ. ಮಹಾಭಾರತದ ಯುದ್ಧ ಮತ್ತು ರಾಮಾಯಣದ ಘಟನೆಗಳನ್ನು ಜ್ಯೋತಿಷ್ಯಶಾಸ್ತ್ರ ಹಾಗೂ ಇತಿಹಾಸದ ಆಧಾರದ ಮೇಲೆ ಪರೀಕ್ಷಿಸಲಾಗುತ್ತಿದೆ. ಪ್ರಾಚೀನ ಋಷಿಗಳ ಸಂಶೋಧನೆಗಳು ಆಧುನಿಕ ವಿಜ್ಞಾನಕ್ಕೆ ಪೂರಕವಾಗಿವೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.