ADVERTISEMENT

ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಎಸ್‌.ಎಂ.ಕೃಷ್ಣಮೂರ್ತಿ

ಶ್ರೀ ಶಾರದ ಪ್ರೌಢಶಾಲೆ ಆವರಣದಲ್ಲಿ ‘ಪರೀಕ್ಷಾ ಸುಗ್ಗಿ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 12:15 IST
Last Updated 13 ಫೆಬ್ರುವರಿ 2020, 12:15 IST
ಕೋಡಿಹಳ್ಳಿ ಶಾರದ ಶಾಲೆಯಲ್ಲಿ ನಡೆದ ಪರೀಕ್ಷಾ ಸುಗ್ಗಿ ಕಾರ್ಯಕ್ರಮವನ್ನು ಎಸ್‌.ಎಂ.ಕೃಷ್ಣಮೂರ್ತಿ ಉದ್ಘಾಟಿಸಿದರು
ಕೋಡಿಹಳ್ಳಿ ಶಾರದ ಶಾಲೆಯಲ್ಲಿ ನಡೆದ ಪರೀಕ್ಷಾ ಸುಗ್ಗಿ ಕಾರ್ಯಕ್ರಮವನ್ನು ಎಸ್‌.ಎಂ.ಕೃಷ್ಣಮೂರ್ತಿ ಉದ್ಘಾಟಿಸಿದರು   

ಕೋಡಿಹಳ್ಳಿ (ಕನಕಪುರ): ‘ವರ್ಷವಿಡೀ ಓದಿರುವುದನ್ನು ಒರೆಗೆ ಹಚ್ಚುವ ಸಲುವಾಗಿ ವರ್ಷದ ಕೊನೆಯಲ್ಲಿ ಪರೀಕ್ಷೆ ನಡೆಸುತ್ತಾರೆ. ಅದಕ್ಕೆ ವಿದ್ಯಾರ್ಥಿಗಳು ಹೆದರುವ ಅವಶ್ಯಕತೆಯಿಲ್ಲ. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್‌.ಎಂ.ಕೃಷ್ಣಮೂರ್ತಿ ತಿಳಿಸಿದರು.

ಇಲ್ಲಿನ ಕೋಡಿಹಳ್ಳಿ ಗ್ರಾಮದಲ್ಲಿನ ಶ್ರೀ ಶಾರದ ಪ್ರೌಢಶಾಲೆ ಆವರಣದಲ್ಲಿ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಶಿಕ್ಷಣ ಇಲಾಖೆ ಮತ್ತು ಸಹ ಶಿಕ್ಷಕರ ಸಂಘ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಬುಧವಾರ ಆಯೋಜನೆ ಮಾಡಿದ್ದ ‘ಪರೀಕ್ಷಾ ಸುಗ್ಗಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಕೆಲಸದ ಅರ್ಹತೆ ಅಳತೆ ಮಾಡಲು ಒಂದು ಮಾನದಂಡವಿರುತ್ತದೆ. ಅದರಂತೆ ಶಿಕ್ಷಕರು ವರ್ಷವಿಡೀ ಕಲಿಸಿರುವ ವಿದ್ಯೆಯನ್ನು ಎಷ್ಟರ ಮಟ್ಟಿಗೆ ಕಲಿತು ಮನಸ್ಸಿನಲ್ಲಿ ಉಳಿಸಿಕೊಂಡಿದ್ದೀರಿ ಎಂಬುದನ್ನು ಅರಿಯಲು ಶಿಕ್ಷಣೆ ಇಲಾಖೆ ಪರೀಕ್ಷೆ ನಡೆಸುತ್ತದೆ. ಖುಷಿಯಿಂದ ಪರೀಕ್ಷೆ ಬರೆಯಿರಿ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಎಸ್‌.ಶಿವರಾಮ್‌ ಪರೀಕ್ಷೆಯ ಗೊಂದಲ ಮತ್ತು ಪರೀಕ್ಷಾ ಸಿದ್ದತೆ ಬಗ್ಗೆ ಮಕ್ಕಳಿಗೆ ತಿಳಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

‘ನಿಮ್ಮನ್ನು ಶಾಲೆಗೆ ಕಳಿಸಿ ಹಲವು ರೀತಿಯಲ್ಲಿ ನಿಮ್ಮ ಭವಿಷ್ಯದ ಬಗ್ಗೆ ಕನಸು ಕಾಣುತ್ತಿರುವ ಪೋಷಕರಿಗೆ ಹೆಮ್ಮೆಯ ಮಗ, ಮಗಳಾಗಿ ಉತ್ತಮ ಸಾಧನೆ ಮಾಡುವ ಮೂಲಕ ಅವರ ಕನಸುಗಳನ್ನು ಸಾಕಾರಗೊಳಿಸಬೇಕು’ ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ, ಶಾರದ ಶಾಲೆಯ ಕಾರ್ಯದರ್ಶಿ ಬಸವರಾಜು, ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ್‌, ಕೋಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್‌, ಡಿಕೆಎಸ್‌ ಟ್ರಸ್ಟ್‌ ಅಧ್ಯಕ್ಷ ವಿಶ್ವನಾಥ್‌, ಅಪ್ಸಾ ಸುರಕ್ಷಾ ಕೇಂದ್ರದ ಬಸವರಾಜು ಇದ್ದರು.

ಕೋಡಿಹಳ್ಳಿ ಹೋಬಳಿ ಮತ್ತು ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲೆಗಳ 400 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.