ADVERTISEMENT

ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಯೋಗೇಶ್ವರ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 8:24 IST
Last Updated 9 ಮಾರ್ಚ್ 2022, 8:24 IST
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ನಡೆದ ದೇವತಾ ಉತ್ಸವದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ನಡೆದ ದೇವತಾ ಉತ್ಸವದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು   

ಚನ್ನಪಟ್ಟಣ: ‘ಎಚ್‌.ಡಿ. ಕುಮಾರಸ್ವಾಮಿ ಅವರು ನನ್ನ ಬಗ್ಗೆ ಲಂಚದ ಆರೋಪ ಮಾಡುವುದು ಅವರ ಗೌರವಕ್ಕೆ ತಕ್ಕುದಲ್ಲ. ಮತ್ತೆ ಲಂಚ ಆರೋಪ ಮಾಡಿದರೆ ಬಹಿರಂಗ ಚರ್ಚೆಗೆ ಕರೆಯುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಿರುಗೇಟು ನೀಡಿದರು.

ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ಮಂಗಳವಾರ ಚೌಡೇಶ್ವರಿ, ಹಟ್ಟಿಮಾರಮ್ಮ ಹಾಗೂ ರಾಕಾಸಮ್ಮ ದೇವರ ಪೂಜಾ ಉತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಾಲ್ಲೂಕಿಗೆ ಯೋಗೇಶ್ವರ್ ₹ 50 ಕೋಟಿ ಅನುದಾನ ತರುತ್ತಿರುವುದು ಲಂಚ ಹೊಡೆಯಲು ಎಂದು ಕುಮಾರಸ್ವಾಮಿ ಸೋಮವಾರ ಚಕ್ಕೆರೆ ಗ್ರಾಮದಲ್ಲಿ ನೀಡಿದ್ದ ಹೇಳಿಕೆಗೆ ಕಿಡಿಕಾರಿದ ಅವರು, ‘ನಿಮ್ಮ ಬಗ್ಗೆ ಅಲ್ಪಸ್ವಲ್ಪ ಗೌರವ ಇದೆ. ಅದನ್ನು ಉಳಿಸಿಕೊಳ್ಳಿ. ನನ್ನ ಬಗ್ಗೆ ಲಂಚದ ಆರೋಪ ಮಾಡುವುದು ನಿಮ್ಮ ಯೋಗ್ಯತೆಗೆ ಸರಿಯಾದುದಲ್ಲ’ ಎಂದು ಹೇಳಿದರು.

ADVERTISEMENT

‘ನಾನು ಸಹ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಾಲಿಗೆ ಬಿಗಿ ಹಿಡಿದು ಮಾತನಾಡಿ. ಯಾವಾಗಲೋ ತಾಲ್ಲೂಕಿಗೆ ಬಂದು ಡೈಲಾಗ್ ಹೊಡೆದು ಹೋಗಬೇಡಿ. ಅಧಿಕಾರವಿದ್ದಾಗ ತಾಲ್ಲೂಕಿನ ಅಭಿವೃದ್ಧಿಯತ್ತ ಗಮನಹರಿಸದೆ ಅಧಿಕಾರ ಹೋದ ಮೇಲೆ ಇನ್ನೊಬ್ಬರ ಮೇಲೆ ಮನಬಂದಂತೆ ವ್ಯರ್ಥ ಆರೋಪ ಮಾಡುವುದನ್ನು ಬಿಡಿ. ನಾನು ಅಭಿವೃದ್ಧಿ ಮಾಡಿದ್ದೇನೆ ಎಂದು ತಾಲ್ಲೂಕಿಗೆ ಸ್ಕೋಪ್ ತೆಗೆದುಕೊಳ್ಳಲು ಬರಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ 20 ವರ್ಷಗಳಿಂದ ತಾಲ್ಲೂಕಿನ ಶಾಸಕನಾಗಿ, ಸಚಿವನಾಗಿ ನನ್ನ ಇತಿಮಿತಿಯಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಆತ್ಮತೃಪ್ತಿಯಿದೆ. ನನ್ನ ಕೆಲಸಕ್ಕೆ ಬೇರೆ ಯಾರಿಂದಲೂ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ’ ಎಂದರು.

‘ನಾನು ಸಾರ್ವಜನಿಕ ಬದುಕಿನಲ್ಲಿ ಹಲವಾರು ಚುನಾವಣೆಗಳನ್ನು ಎದುರಿಸಿದ್ದೇನೆ. ಸೋಲು, ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ ಸಾರ್ವಜನಿಕ ಸೇವೆಯನ್ನು ಸದಾಕಾಲ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ತಾಲ್ಲೂಕಿನ ಜನತೆ ಮುಂದಿನ ದಿನಗಳಲ್ಲಿ ನಿಮ್ಮ ಹೇಳಿಕೆಗಳಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಹೇಳಿದರು.

‘ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಚನ್ನಪಟ್ಟಣ ತಾಲ್ಲೂಕು ಇಡೀ ರಾಜ್ಯಕ್ಕೆ ಮಾದರಿಯಾಗುತ್ತದೆ ಎಂದು ನಂಬಿ ತಾಲ್ಲೂಕಿನ ಜನತೆ ಮತ ಹಾಕಿದ್ದರು. ಅವರನ್ನು ಆಯ್ಕೆ ಮಾಡಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರೇ ಇದೀಗ ನಿರಾಶೆಯಿಂದ ಜೆಡಿಎಸ್ ಪಕ್ಷ ತೊರೆಯುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ಗೆ ಸ್ಪಷ್ಟ ತಿರಸ್ಕಾರವಿದೆ. ಇದನ್ನು ನೋಡಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. ನಾನು ಚನ್ನಪಟ್ಟಣಕ್ಕೆ ಬರುತ್ತಿರುವುದನ್ನು ನೋಡಿ ಅವರು ದಿನಾ ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ’ ಎಂದು ಟೀಕಿಸಿದರು.

ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ, ಗ್ರಾ.ಪಂ. ಸದಸ್ಯ ರಾಜಣ್ಣ, ಮುಖಂಡರಾದ ಅಕ್ಕೂರು ಶೇಖರ್, ರಮೇಶ್, ರಾಮಣ್ಣ, ಬೇವೂರು ವಿಜಿ, ಪ್ರೇಮ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.