ADVERTISEMENT

ಶೌರ್ಯ ಕ್ರೀಡೆಯಿಂದ ಯುವಜನತೆ ದೂರ

ಕರ್ನಾಟಕ ಜಾನಪದ ಪರಿಷತ್ತಿನ ಅದ್ಯಕ್ಷ ಟಿ. ತಿಮ್ಮೇಗೌಡ ಬೇಸರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 13:31 IST
Last Updated 29 ಡಿಸೆಂಬರ್ 2019, 13:31 IST
ಛತ್ತೀಸ್ ಗಡದ ಪಂತಿ ನೃತ್ಯ
ಛತ್ತೀಸ್ ಗಡದ ಪಂತಿ ನೃತ್ಯ   

ರಾಮನಗರ: ಯುವ ಸಮುದಾಯ ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಆಟ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿ ಶೌರ್ಯ ಮೆರೆಯುವಂಥ ಕ್ರೀಡೆಗಳಿಂದ ದೂರವಾಗುತ್ತಿದ್ದಾರೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅದ್ಯಕ್ಷ ಟಿ. ತಿಮ್ಮೇಗೌಡ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ ಹಾಗೂ ಕರ್ನಾಟಕ ಸಾಹಸ ಕಲಾ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ 'ರಾಷ್ಟ್ರೀಯ ಶೌರ್ಯಕಲಾ ಮಹೋತ್ಸವ'ದಲ್ಲಿ ಅವರು ಮಾತನಾಡಿದರು.

ಈಚಿನ ದಿನಗಳಲ್ಲಿ ಯುವಸಮುದಾಯ ಫೇಸ್‌ ಬುಕ್, ವಾಟ್ಸ್ ಆ್ಯಪ್, ಮೊಬೈಲ್ ಗೇಮ್ಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದು ದೇಶದ ಪ್ರಗತಿ ಹಾಗೂ ವೈಯಕ್ತಿಕ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಯುವಕರು ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಬಹಮುಖಿ ಪ್ರತಿಭಾವಂತರಾಗಬೇಕು ಎಂದು ತಿಳಿಸಿದರು.

ADVERTISEMENT

ವಿದ್ವಾಂಸ ಡಾ.ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ ಯುವ ಜನತೆ ದೇಹ ಮತ್ತು ಮನಸ್ಸಿನ ನಡುವೆ ಸಮತೋಲನ ಕಾಯ್ದು ಕೊಳ್ಳುವಲ್ಲಿ ಸಾಹಸ ಕಲೆಗಳು ಪ್ರಮುಖ ಪಾತ್ರವಹಿಸುತ್ತವೆ. ದೇಹ ಮತ್ತು ಮನಸ್ಸು ಎರಡೂ ಒಟ್ಟಿಗೆ ವಿಕಸವಾಗಬೇಕು. ಆದರೆ, ಇಂದಿನ ಯುವ ಪೀಳಿಗೆ ಕೇವಲ ಮನಸ್ಸಿನ ವಿಕಾಸಕ್ಕೆ ಒತ್ತು ನೀಡುತ್ತಿದ್ದು, ಉತ್ತಮ ದೇಹದಾರ್ಢ್ಯ ಕಾಯ್ದುಕೊಳ್ಳುವುದನ್ನು ಮರೆಯುತ್ತಿದೆ ಎಂದರು.

ಮನಸ್ಸಿನ ವಿಕಾಸವಾದರೂ ಅದನ್ನು ಒಳ್ಳೆಯ ಕಾರ್ಯಕ್ಕೆ ಬಳಸುವುದು ಕಡಿಮೆಯಾಗಿದೆ. ಅಂತೆಯೇ ಔಷಧಿ, ಆಸ್ಪತ್ರೆ, ಮದ್ಯದ ಅಂಗಡಿಯ ಎದುರು ಹೆಚ್ಚು ಮಂದಿ ನೆರೆದಿರುತ್ತಾರೆ. ಈ ರೀತಿಯ ವರ್ತನೆ ದೂರವಾಗಲು ಸಾಹಸ ಕಲೆ ಇಲ್ಲವೆ ಇನ್ನಿತರ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಛತ್ತೀಸ್ ಗಡದ 'ಪಂತಿ ನೃತ್ಯ', ಆಂಧ್ರಪ್ರದೇಶದ 'ಕರ್ರಾಸಾಮು', 'ವೀರ ನಾಟ್ಯಂ', ಕೇರಳದ 'ಕೋಲ್ ಕಳಿ', 'ಕಲರಿ ಪಯನ್', ಪುದುಚೇರಿಯ 'ಸೆಲಬಂ ಕಲಾಳಕಚೈ', ತಮಿಳುನಾಡಿನ 'ಸೆಲಂಬಾಟಂ', ಕರ್ನಾಟಕದ ಡೊಳ್ಳು ಕುಣಿತ, ಮಲ್ಲಕಂಬ ಹಾಗೂ ದೊಣ್ಣೆವರಸೆ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ಭಾನುವಾರ ಬೆಳಿಗ್ಗೆ ನಿಧನರಾದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕರ್ನಾಟಕ ಸಾಹಸ ಕಲಾ ಅಕಾಡೆಮಿ ಅಧ್ಯಕ್ಷ ಹಾಸನ ರಘು, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು, ದೆಹಲಿಯ ಆಲ್ಲ ಇಂಡಿಯಾ ಪೋಕ್ ಅಂಡ್ ಟ್ರೈಬಲ್ ಆರ್ಟ್ ಪರಿಷತ್ ಅಧ್ಯಕ್ಷ ನಿರ್ಮಲ್ ವೈದ್ಯ, ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಸಿ.ಎನ್. ರುದ್ರಪ್ಪ, ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.