ADVERTISEMENT

ಅವಧಿಯೊಳಗೆ ಕಾಮಗಾರಿ ಮುಗಿಸಲು ತಾಕೀತು

ಜಿ.ಪಂ. ಸಾಮಾನ್ಯ ಸಭೆ: ಅನುದಾನ ವಾಪಸ್‌ ಹೋದಲ್ಲಿ ಅಧಿಕಾರಿಗಳಿಂದ ದಂಡ ವಸೂಲಿಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 14:28 IST
Last Updated 5 ಫೆಬ್ರುವರಿ 2019, 14:28 IST
ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಾಸಕ ಎ.ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ, ಜಿ.ಪಂ. ಉಪಾಧ್ಯಕ್ಷೆ ಜಿ.ಡಿ. ವೀಣಾಕುಮಾರಿ, ಅಧ್ಯಕ್ಷ ಎಂ.ಎನ್. ನಾಗರಾಜು ಹಾಗೂ ಸಿಇಒ ಮುಲ್ಲೈ ಮುಹಿಲನ್‌ ಪಾಲ್ಗೊಂಡರು
ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಾಸಕ ಎ.ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ, ಜಿ.ಪಂ. ಉಪಾಧ್ಯಕ್ಷೆ ಜಿ.ಡಿ. ವೀಣಾಕುಮಾರಿ, ಅಧ್ಯಕ್ಷ ಎಂ.ಎನ್. ನಾಗರಾಜು ಹಾಗೂ ಸಿಇಒ ಮುಲ್ಲೈ ಮುಹಿಲನ್‌ ಪಾಲ್ಗೊಂಡರು   

ರಾಮನಗರ: ಪಿಆರ್‌ಇಡಿ ಸೇರಿದಂತೆ ಎಲ್ಲ ಇಲಾಖೆಗಳು ಮಾರ್ಚ್‌ 31ರ ಒಳಗೆ ತಮಗೆ ನೀಡಿರುವ ಅನುದಾನವನ್ನು ಬಳಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅನುದಾನ ವಾಪಸ್ ಹೋದಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದಲೇ ಅದನ್ನು ವಸೂಲಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್. ನಾಗರಾಜು ಎಚ್ಚರಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ 12ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ‘ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸಾಕಷ್ಟು ಕಾಮಗಾರಿಗಳು ಬಾಕಿ ಉಳಿದಿವೆ. ಅಧಿಕಾರಿಗಳ ಮಂದಗತಿಯ ಧೋರಣೆಯಿಂದಾಗಿ ಈ ಹಣಕಾಸು ವರ್ಷಾಂತ್ಯದೊಳಗೆ ಈ ಎಲ್ಲ ಕೆಲಸಗಳು ಪೂರ್ಣಗೊಳ್ಳುವುದು ಅನುಮಾನವಾಗಿದೆ’ ಎಂದು ಜಿ.ಪಂ. ಸದಸ್ಯ ಡಿ.ಕೆ. ಶಿವಕುಮಾರ್ ಸಭೆಯ ಗಮನಕ್ಕೆ ತಂದರು.

ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಸವಿತಾ ಈ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಮಾಹಿತಿ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಿವಕುಮಾರ್, ‘ಇನ್ನೂ ಸಾಕಷ್ಟು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯೇ ನಡೆದಿಲ್ಲ. ಹೀಗಿರುವಾಗ ಕೆಲಸ ಯಾವಾಗ ಮುಗಿಸುತ್ತೀರಿ’ ಎಂದು ಪ್ರಶ್ನಿಸಿದರು. ‘ಎಲ್ಲ ಕಾಮಗಾರಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಬಿಲ್‌ ಪಾವತಿಸಬೇಕಾದ ಕಾರಣ ತಡವಾಗುತ್ತಿದೆ’ ಎಂದು ಸವಿತಾ ಸಮಜಾಯಿಷಿ ನೀಡಿದರು. ‘ಪರಿಶೀಲಿಸಿ. ಆದರೆ ಸರ್ಕಾರಕ್ಕೆ ಹಣ ವಾಪಸ್ ಹೋದರೆ ನಿಮ್ಮ ಜೊತೆಗೆ ಜಿ.ಪಂ. ಅಧ್ಯಕ್ಷರು, ಸಿಇಒ ಸಹ ಪಾವತಿಸಬೇಕಾಗುತ್ತದೆ’ ಎಂದು ಶಿವಕುಮಾರ್ ಎಚ್ಚರಿಸಿದರು.

ADVERTISEMENT

‘ಕೆಲವು ಗುತ್ತಿಗೆದಾರರಿಗೆ ವರ್ಷದಿಂದ ಬಿಲ್‌ ಪಾವತಿ ಮಾಡಿಲ್ಲ. ಹೀಗಾಗಿ ಯಾರೂ ಕೆಲಸ ಮಾಡಲು ಮುಂದೆ ಬರುತ್ತಿಲ್ಲ’ ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

‘ಸವಿತಾ ಎರಡೂ ಇಲಾಖೆಗಳ ಹೊಣೆ ನಿರ್ವಹಿಸುತ್ತಿರುವ ಕಾರಣ ವಿಳಂಬ ಆಗುತ್ತಿದೆ. ಅವರಿಗೆ ಮಾತೃ ಇಲಾಖೆ ಪಂಚಾಯತ್‌ರಾಜ್‌ ಉಸ್ತುವಾರಿಯನ್ನು ಮಾತ್ರ ನೀಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗಕ್ಕೆ ಮತ್ತೊಬ್ಬರು ಮುಖ್ಯ ಎಂಜಿನಿಯರ್‌ಗೆ ಉಸ್ತುವಾರಿ ಕೊಡಿ’ ಎಂದು ಆಗ್ರಹಿಸಿದರು. ಇದಕ್ಕೆ ಉಪಾಧ್ಯಕ್ಷೆ ಜಿ.ಡಿ. ವೀಣಾಕುಮಾರಿ ಸಹ ಧ್ವನಿಗೂಡಿಸಿದರು. ಕುಡಿಯುವ ನೀರು ಪೂರೈಕೆ ಇಲಾಖೆಗೆ ತಾತ್ಕಾಲಿಕವಾಗಿ ಇ.ಇ. ನೇಮಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.

‘ಚನ್ನಪಟ್ಟಣ ತಾಲ್ಲೂಕಿನಲ್ಲಿ 7 ಕಡೆ ಶುದ್ಧ ನೀರು ಘಟಕ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕೆಲವು ಕಡೆ ಒಂದು ಕ್ಯಾನ್‌ ನೀರಿಗೆ ₨5 ದರ ವಿಧಿಸಲಾಗುತ್ತಿದೆ. ಇದಕ್ಕೆ ಏಕರೂಪದ ಕಾನೂನು ತರಬೇಕು’ ಎಂದು ಸದಸ್ಯ ಗಂಗಾಧರ್‌ ಆಗ್ರಹಿಸಿದರು.

ಆಂಬುಲೆನ್ಸ್ ಸದ್ದು: ಆರೋಗ್ಯ ಇಲಾಖೆಯಿಂದ ಒದಗಿಸಲಾಗುತ್ತಿರುವ ಆಂಬುಲೆನ್ಸ್‌ಗಳ ಸೇವೆ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

‘ಕೋಡಿಹಳ್ಳಿಗೆ ಆಂಬುಲೆನ್ಸ್ ಇಲ್ಲ. ಆದರೆ ದಾಖಲೆಗಳಲ್ಲಿ ಮಾತ್ರ ಇಲ್ಲಿ ವಾಹನ ಓಡುತ್ತಿದೆ’ ಎಂದು ಸದಸ್ಯ ಬಸಪ್ಪ ಸಭೆಯ ಗಮನ ಸೆಳೆದರು. ‘ತಿಂಗಳ ಹಿಂದಷ್ಟೇ ಹೊಸತಾಗಿ ನೀಡಿರುವ ಆಂಬುಲೆನ್ಸ್ ಈಗಾಗಲೇ 22 ಸಾವಿರ ಕಿ.ಮೀ. ಓಡಿದೆ. ಇದು ಹೇಗೆ ಸಾಧ್ಯ’ ಎಂದು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್ ಡಿಎಚ್‌ಒ ಅಮರ್‌ನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇನ್ನೂ ಹಲವು ಸದಸ್ಯರು ಇದೇ ಆರೋಪ ಮಾಡಿದರು.

‘ವಾಹನಗಳನ್ನು ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ನಿರ್ವಹಿಸಲಾಗುತ್ತಿದೆ. ಅಲ್ಲಿಂದಲೇ ಬಿಲ್ ಪಾವತಿಯಾಗುತ್ತಿದೆ’ ಎಂದು ಡಿಎಚ್‌ಒ ಮಾಹಿತಿ ನೀಡಿದರು.

‘ಏನನ್ನು ಕೇಳಿದರೂ ರಾಜ್ಯಮಟ್ಟದಲ್ಲಿ ತೀರ್ಮಾನ ಆಗಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಹಾಗಿದ್ದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇರುವುದಾದರೂ ಏತಕ್ಕೆ?’ ಎಂದು ಕನಕಪುರ ತಾ.ಪಂ. ಅಧ್ಯಕ್ಷ ಧನಂಜಯ ಪ್ರಶ್ನಿಸಿದರು.

ಇದಕ್ಕೆ ಕೆರಳಿದ ಸದಸ್ಯರು ‘ಇಲ್ಲಿ ಸೇವೆಯೇ ಒದಗಿಸುತ್ತಿಲ್ಲ ಎಂದ ಮೇಲೆ ಹೇಗೆ ಬಿಲ್ ಪಾವತಿ ಮಾಡುತ್ತೀರಿ’ ಎಂದು ಪ್ರಶ್ನಿಸಿದರು. ಈ ಬಗ್ಗೆ ಕೇಂದ್ರ ಇಲಾಖೆಗೆ ಪತ್ರ ಬರೆದು ಮಾಹಿತಿ ನೀಡುವಂತೆ ಸಿಇಒ ಡಿಎಚ್‌ಒಗೆ ಸೂಚಿಸಿದರು.
‘ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ವೇತನ ಅನ್ಯಾಯ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅದರ ಮಾಹಿತಿಯನ್ನು ಇತರ ಇಲಾಖೆಗಳ ಜೊತೆ ಹಂಚಿಕೊಳ್ಳಿ’ ಎಂದು ತಿಳಿಸಿದರು.

ನಡಾವಳಿ ಪುಸ್ತಕ ಇಡಿ: ‘ಇಲ್ಲಿನ ಸಭೆಗಳಲ್ಲಿ ಸಾಕಷ್ಟು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆದರೆ ಅದರಲ್ಲಿ ಎಷ್ಟು ನಿರ್ಣಯಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ನಡಾವಳಿ ಪುಸ್ತಕ ಇಟ್ಟಿದ್ದೀರಾ?’ ಎಂದು ಸದಸ್ಯ ಎಚ್‌.ಎನ್‌. ಅಶೋಕ್‌ ಪ್ರಶ್ನಿಸಿದರು. ‘ಮಾಗಡಿ ತಾಲ್ಲೂಕಿನಲ್ಲಿ ₨2 ಕೋಟಿ ಮೊತ್ತದ ಆಸ್ಪತ್ರೆ ಪೀಠೋಪಕರಣ ಖರೀದಿ ಹಗರಣದ ತನಿಖೆ ಏನಾಯಿತು?’ ಎಂದು ಕೇಳಿದರು.

‘ಪ್ರಕರಣದ ತನಿಖೆಗಾಗಿ ಉಪ ವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ. ತನಿಖೆ ಆರಂಭಗೊಂಡಿದೆ’ ಎಂದು ಸಿಇಒ ಉತ್ತರಿಸಿದರು.

‘ಆರೋಗ್ಯ ರಕ್ಷಾ ಸಮಿತಿಯ ಅನುದಾನವು ದುರ್ಬಳಕೆ ಆಗುತ್ತಿದೆ. ಜಾಲಮಂಗಲ ಆಸ್ಪತ್ರೆಯಲ್ಲಿ ಯಾವುದೇ ಸಭೆ ನಡೆಸದಿದ್ದರೂ ₨3.48 ಲಕ್ಷ ಖರ್ಚು ಮಾಡಲಾಗಿದೆ’ ಎಂದು ರಾಮನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್‌ ನಟರಾಜು ಆರೋಪಿಸಿದರು.

ಪರಿಷತ್‌ನಲ್ಲಿ ಧ್ವನಿ: ‘ಕಡಿಮೆ ವೇತನದ ಕಾರಣಕ್ಕೆ ವೈದ್ಯರು ಸರ್ಕಾರಿ ಸೇವೆಗೆ ಬರುತ್ತಿಲ್ಲ ಎಂಬ ಅಂಶ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ. ಪರಿಷತ್‌ನಲ್ಲೂ ಚರ್ಚಿಸುತ್ತೇನೆ’ ಎಂದು ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ ಭರವಸೆ ನೀಡಿದರು.

‘ಚನ್ನಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ಇದ್ದು, ಅಲ್ಲಿಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದು ಬೇಸರದ ಸಂಗತಿ. ಅಧಿಕಾರಿಗಳು ಕೂಡಲೇ ಕೊಳವೆ ಬಾವಿ ಕೊರೆಯಿಸಬೇಕು’ ಎಂದು ಸೂಚಿಸಿದರು.

ಬಾಕ್ಸ್ ಐಟಂ–1
‘ಲಿಂಗ ಪತ್ತೆ ದಂದೆ ಅವ್ಯಾಹತ’
‘ಚನ್ನಪಟ್ಟಣದ ಕೆಲವು ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣದ ಲಿಂಗ ಪತ್ತೆ ಕಾರ್ಯ ನಡೆದಿದ್ದು, ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ’ ಎಂದು ಸದಸ್ಯ ಡಿ.ಕೆ. ಶಿವಕುಮಾರ್ ಆರೋಪಿಸಿದರು.

‘ಸರ್ಕಾರಿ ಆಸ್ಪತ್ರೆಗಳ ವೈದ್ಯರು ಸ್ಕ್ಯಾನಿಂಗ್‌, ಡಯಾಲಿಸಿಸ್‌ಗೆ ಖಾಸಗಿ ಕೇಂದ್ರಗಳಿಗೆ ಬರೆದುಕೊಡುತ್ತಿದ್ದಾರೆ. ಅಧಿಕಾರಿಗಳು ದಿಢೀರ್ ದಾಳಿ ಮಾಡಿದರೆ ಸತ್ಯಾಂಶ ತಿಳಿಯುತ್ತದೆ’ ಎಂದು ಸಲಹೆ ನೀಡಿದರು.

ಬಾಕ್ಸ್ ಐಟಂ–2
‘ಪ್ರಜಾವಾಣಿ’ ವರದಿ ಪ್ರಸ್ತಾಪ
ಶಾಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಹಿಂದುಳಿರುವ ಕುರಿತು ‘ಪ್ರಜಾವಾಣಿ’ಯ ಮಂಗಳವಾರದ ಸಂಚಿಕೆಯಲ್ಲಿ ಪ್ರಕಟವಾದ ವರದಿಯನ್ನು ತಾ.ಪಂ. ಅಧ್ಯಕ್ಷ ಗಾಣಕಲ್‌ ನಟರಾಜು ಸಭೆಯಲ್ಲಿ ಪ್ರಸ್ತಾಪಿಸಿ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಗಂಗಮಾರೇಗೌಡ ‘ಇಲಾಖೆಯಲ್ಲಿನ ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಗಳಿಂದಾಗಿ ತಪ್ಪು ಮಾಹಿತಿ ಹಾಗೆಯೇ ಉಳಿದುಕೊಂಡಿದೆ. ಜಿಲ್ಲೆಯಲ್ಲಿ 36 ಮಕ್ಕಳು ಮಾತ್ರ ಶಾಲೆಯಿಂದ ಹೊರಗೆ ಉಳಿದಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.