ADVERTISEMENT

‘ಪ್ರಾದೇಶಿಕ ಭಾಷೆಗಳ ಕಡೆಗಣಿಸಿಲ್ಲ’

ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್‌ ಬೇಸರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:49 IST
Last Updated 25 ಜುಲೈ 2019, 19:49 IST
ವಿಚಾರಸಂಕಿರಣದಲ್ಲಿ ಎಂ.ಆರ್. ದೊರೆಸ್ವಾಮಿ ಹಾಗೂ ಡಾ.ಕೆ. ಕಸ್ತೂರಿ ರಂಗನ್‌ ಚರ್ಚಿಸಿದರು– ಪ್ರಜಾವಾಣಿ ಚಿತ್ರ
ವಿಚಾರಸಂಕಿರಣದಲ್ಲಿ ಎಂ.ಆರ್. ದೊರೆಸ್ವಾಮಿ ಹಾಗೂ ಡಾ.ಕೆ. ಕಸ್ತೂರಿ ರಂಗನ್‌ ಚರ್ಚಿಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನೇ ಅಳವಡಿಸಿಕೊಂಡಿದ್ದು, ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಲಾಗಿದೆ. ಆದರೆ, ಈ ವಿಚಾರವಾಗಿ ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿದರು’ ಎಂದುರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್‌ ಬೇಸರ ವ್ಯಕ್ತಪಡಿಸಿದರು.

ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ‘ಉನ್ನತ ಶಿಕ್ಷಣದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘1968ರಲ್ಲಿ ಜಾರಿಗೆ ಬಂದ ತ್ರಿಭಾಷಾ ಸೂತ್ರದ ಅನ್ವಯವಿದ್ಯಾರ್ಥಿಗಳು ಇಂಗ್ಲಿಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ನೂತನ ನೀತಿಯ ಕರಡಿನಲ್ಲಿ ಸಹ ಇದೇ ಸೂತ್ರವನ್ನು ಅಳವಡಿಕೆ ಮಾಡಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು. ಯಾವುದೇ ಪ್ರಾದೇಶಿಕ ಭಾಷೆಯನ್ನು ಕಡೆಗಣಿಸುವ ಕೆಲಸವಾಗಿಲ್ಲ. ಸಂಸ್ಕೃತ, ಪಾಲಿ, ತಮಿಳು ಸೇರಿದಂತೆ ನಾನಾ ಭಾಷೆಗಳಿಗೆ ಒತ್ತು ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ವಿದ್ಯಾರ್ಥಿಗಳಲ್ಲಿ ಕೌಶಲ ವೃದ್ಧಿಸುವ ಜತೆಗೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಲ್ಪಿಸಲು ನೂತನ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಸಮಾನ ಶಿಕ್ಷಣದ ಆಶಯವನ್ನು ನೂತನ ನೀತಿ ಒಳಗೊಂಡಿದ್ದು, 2030 ಹೊತ್ತಿಗೆ ಎಲ್ಲರ ಕಲಿಕಾಮಟ್ಟ ದ್ವಿಗುಣಗೊಳ್ಳಬೇಕೆಂಬ ಉದ್ದೇಶ ಹೊಂದಿದೆ.ವಿದ್ಯಾರ್ಥಿಗಳು ಕಲಿತ ವಿಷಯದ ಮೂಲಕ ಕೌಶಲ ವೃದ್ಧಿಸಿಕೊಂಡು ಉದ್ಯೋಗ ಸೃಷ್ಟಿಸಿಕೊಳ್ಳಬೇಕು. ಪಿಯುಸಿ ಮುಗಿದ ತಕ್ಷಣ ಕೆಲಸಕ್ಕೆ ಹೋಗುವಂತಹ ವಾತಾವರಣ ನಿರ್ಮಾಣವಾಗಬೇಕು’ ಎಂದರು. ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್. ದೊರೆಸ್ವಾಮಿ, ‘ಬ್ರಿಟಿಷರು ಬಿಟ್ಟು ಹೋದ ಶಿಕ್ಷಣ ಪದ್ಧತಿಗೆ ನಾವು ಅಂಟಿಕೊಂಡಿರುವುದು ವಿಪರ್ಯಾಸ. ಇನ್ನಾದರೂ ಕೆಲ ಬದಲಾವಣೆ ಮಾಡಿ, ಮಕ್ಕಳ ಪ್ರಗತಿಗೆ ಸಹಾಯಕವಾದ ಶಿಕ್ಷಣ ಪದ್ಧತಿ ಅನುಷ್ಠಾನ ಮಾಡಬೇಕು. ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಕೂಡ ಆದ್ಯತೆ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.