ADVERTISEMENT

ಅಂಬರಗುಡ್ಡ ಸೂಕ್ಷ್ಮ ತಾಣ; ಮರುಪರಿಷ್ಕರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2012, 9:48 IST
Last Updated 29 ನವೆಂಬರ್ 2012, 9:48 IST

ಶಿವಮೊಗ್ಗ: ಸಾಗರ ತಾಲ್ಲೂಕಿನ ಅಂಬರಗುಡ್ಡ ಪ್ರದೇಶದಲ್ಲಿನ ಕೆಲವು ಸಾಗುವಳಿ ಪ್ರದೇಶವನ್ನೂ ಸೇರಿಸಿ ಜೀವವೈವಿಧ್ಯ ಪರಂಪರಾಗತ ಸೂಕ್ಷ್ಮ ತಾಣವೆಂದು ಘೋಷಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಜನಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಸಿ. ಸುಬ್ರಹ್ಮಣ್ಯ ಭಟ್ ಸರ್ಕಾರವನ್ನು ಒತ್ತಾಯಿಸಿದರು.

ಕರೂರು ಹೋಬಳಿ ವ್ಯಾಪ್ತಿಯ ಅಂಬರಗುಡ್ಡ 3,857 ಎಕರೆ ಪ್ರದೇಶ ವ್ಯಾಪ್ತಿಯನ್ನು ಹೊಂದಿದೆ. ಇದರಲ್ಲಿ ಮರಾಠಿ ಗ್ರಾಮದ ಸರ್ವೇ ನಂ. 95, 116, 117, 125, 136, 141, 161, 205, 207 ಮತ್ತು ಅಡಗಳಲೆ ಗ್ರಾಮದ ಸರ್ವೇ ನಂ. 93, 96, ಕೊಡನವಳ್ಳಿ ಗ್ರಾಮದ ಸ.ನಂ. 16, 39ನ್ನು ಜೀವ ವೈವಿಧ್ಯ ಪರಂಪರಾಗತ ತಾಣ ಎಂದು ಘೋಷಿಸಲಾಗಿದೆ. ಈ ಸರ್ವೇ ನಂಬರ್‌ನ ಕೆಲ ಪ್ರದೇಶಗಳಲ್ಲಿ ರೈತರು ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಅಷ್ಟೇ ಅಲ್ಲದೇ, ಈ ಸರ್ವೇ ನಂಬರ್‌ಗಳಲ್ಲಿ ಶಾಲಾ, ವಸತಿ ಕಟ್ಟಡಗಳಿವೆ. ಈ ಪ್ರದೇಶವನ್ನು ಜೀವ ವೈವಿಧ್ಯ ಪರಂಪರಾಗತ ತಾಣ ಎಂದು ಘೋಷಿಸಿರುವುದರಿಂದ ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ. ಹಾಗಾಗಿ, ಈ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆದು, ಮರುಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.

2011ರ ನ. 18ರಲ್ಲೇ ಸರ್ಕಾರ ಈ ಆದೇಶ ಮಾಡಿದರೂ ಇಲ್ಲಿಯ ಗ್ರಾಮ ಪಂಚಾಯ್ತಿಗೆ, ಜನಪ್ರತಿನಿಧಿಗಳಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಈಚೆಗೆ ಬಗರ್‌ಹುಕುಂ ಹಕ್ಕು ಪತ್ರಕ್ಕೆ ಅರ್ಜಿ ಸಲ್ಲಿಸುತ್ತಿರುವಾಗ ಅಧಿಕಾರಿಗಳು ಈ ಪ್ರದೇಶ ಜೀವ ವೈವಿಧ್ಯ ಪರಂಪರಾಗತ ತಾಣ ವ್ಯಾಪ್ತಿಯಲ್ಲಿರುವುದರಿಂದ ಯಾವುದೇ ಹಕ್ಕುಪತ್ರ ನೀಡಲು ಬರುವುದಿಲ್ಲ ಎಂದಾಗ ಈ ಸಮಸ್ಯೆ ಅರಿವಿಗೆ ಬಂದಿದೆ ಎಂದು ವಿವರಿಸಿದರು.  

ಅಂಬರಗುಡ್ಡವನ್ನು ಜೀವವೈವಿಧ್ಯ ಪರಂಪರಾಗತ ಸೂಕ್ಷ್ಮ ತಾಣ ಎಂದು ಘೋಷಿಸಿದ್ದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅದರಲ್ಲಿರುವ ಬಗರ್‌ಹುಕುಂ ಸಾಗುವಳಿ ಹಾಗೂ ಜನವಸತಿ ಪ್ರದೇಶವನ್ನು ಹೊರತುಪಡಿಸಿ, ಈ ಆದೇಶ ಆಗಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಎಂ.ಡಿ. ಜೀನದತ್ ಜೈನ್,  ಟಿ.ಡಿ. ಜೀನದತ್ ಜೈನ್, ತಾ.ಪಂ. ಸದಸ್ಯ ಹರೀಶ್ ಗಂಟೆ, ಸುಧೀಂದ್ರ, ರವೀಂದ್ರ, ರಾಮಚಂದ್ರ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.