ADVERTISEMENT

ಅಡಿಕೆ ತೋಟ: ಆಸಕ್ತಿ ಕಳೆದುಕೊಂಡ ರೈತರು !

ತೀರ್ಥಹಳ್ಳಿ: ಗುಟ್ಕಾ ನಿಷೇಧದ ಪರಿಣಾಮ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 8:19 IST
Last Updated 4 ಜೂನ್ 2013, 8:19 IST

ತೀರ್ಥಹಳ್ಳಿ: ರಾಜ್ಯದಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಯುವ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಗುಟ್ಕಾ ನಿಷೇಧದ ಬರೆ ಒಂದೆಡೆಯಾದರೆ, ಮುಂದಿನ ಫಸಲನ್ನು ಉಳಿಸಿಕೊಳ್ಳವುದು ಹೇಗೆ ಎಂಬ ಚಿಂತೆ ಮತ್ತೊಂದಡೆ.

ಮುಂಗಾರು ಆರಂಭವಾಗಿದ್ದು, ಮಳೆ ಒಂದೇ ಸಮ ಸುರಿದರೆ ಕೊಳೆರೋಗದಿಂದ ಮುಕ್ತಿ ಪಡೆಯುವುದು ಹೇಗೆ ಎಂದು  ರೈತರು ಆತಂಕಗೊಂಡಿದ್ದಾರೆ. ಈಗಾಗಲೇ ಅಡಿಕೆ ಮೆಳೆಗಳು ಕೀಟಗಳ ಹಾವಳಿಯಿಂದ ಉದು ರುವುದನ್ನ ತಡೆಗಟ್ಟಲು ಎರಡು ಮೂರು ಬಾರಿ ಕೀಟನಾಶಕ ಸಿಂಪಡಣೆ ಮಾಡಿದ್ದಾರೆ.

ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಡುವ ಕೊಳೆ ರೋಗದಿಂದ ಕಂಗಾಲಾಗಿರುವ  ರೈತರು ಬೆಳೆಯನ್ನು ಉಳಿಸಿಕೊಳ್ಳಲು  ಹೆಣಗಾಡುತ್ತಿದ್ದಾರೆ.

ಒಂದು ಎಕರೆ ಅಡಿಕೆ ತೋಟಕ್ಕೆ ಕನಿಷ್ಠ 7ರಿಂದ 8 ಸಾವಿರದಷ್ಟು ಹಣ ಖರ್ಚು ಮಾಡಬೇಕಾಗಿದೆ. ಕೂಲಿಯಾಳು ಸಮಸ್ಯೆ, ಅಡಿಕೆ ಮರವನ್ನೇರಿ ಔಷಧಿ ಸಿಂಪಡಿಸುವ ಕುಶಲಕರ್ಮಿಗಳ ಕೊರತೆಯಿಂದ ನಲುಗಿರುವ ರೈತರು ಪರ್ಯಾಯ ಮಾರ್ಗ ಕಂಡುಕೊಳ್ಳವಲ್ಲಿ ವಿಫಲರಾಗಿದ್ದಾರೆ.

ನೀರಿನ ನಿರ್ವಹಣೆ, ಕೊಳೆ ರೋಗಕ್ಕೆ ಔಷಧಿ ಸಿಂಪಡಣೆ, ನಂತರ ಬಲಿತ ಅಡಿಕೆಯನ್ನು ಮರದಿಂದ ಕಿತ್ತು ಸುಲಿದು ಸಂಸ್ಕರಿಸುವ ಹೊತ್ತಿಗೆ ಹೈರಾಣಾಗುವ ಬೆಳೆಗಾರರಿಗೆ ಈಗ ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿರುವುದು ಅಡಿಕೆ ಬೆಳೆಯ ಕುರಿತು ರೈತರಲ್ಲಿ ಉತ್ಸಾಹವನ್ನು ಕುಗ್ಗಿಸಿದೆ.

ಮಂಗಗಳ ಹಾವಳಿ: ಮಂಗಗಳು ಅಡಿಕೆ ಮೆಳೆಯನ್ನು ಹಾಳು ಮಾಡುತ್ತಿವೆ. ಅಡಿಕೆ ಮೆಳೆಗಳು ಬೆಳೆಯುವ ಹಂತದಲ್ಲಿ ಅತ್ಯಂತ ಸೂಕ್ಷ್ಮವಾಗಿ ಇರುವುದರಿಂದ ಮಂಗಗಳ ಉಗುರು ತಾಕಿದ ಅಡಿಕೆ ಕಾಯಿ ಬೆಳೆಯುವ ಹಂತದಲ್ಲಿ ಉದುರುತ್ತವೆ. ಒಮ್ಮೆ ಮಂಗಗಳು ದಾಳಿಯಿಟ್ಟರೆ ಎರಡು ಮೂರು ಕ್ವಿಂಟಲ್‌ನಷ್ಟು ಬೆಳೆ ನಷ್ಟವಾಗುತ್ತದೆ.

ಕಳೆದ ಎಂಟು-ಹತ್ತು ವರ್ಷಗಳಿಂದ ಈಚೆಗೆ ಮಂಗಳು ಅಡಿಕೆ ಮೆಳೆಗೆ ದಾಳಿ ಇಡುವ ಪ್ರವೃತ್ತಿ ಬೆಳೆಸಿಕೊಂಡಿವೆ.   ಮಂಗಗಳ ಹಾವಳಿ ತಡೆಗಟ್ಟಲು ಯಾವುದೇ  ಮಾರ್ಗಗಳು  ಇಲ್ಲದೆ ಕೈ ಚೆಲ್ಲಿ ಕುಳಿತಿದ್ದಾರೆ. ಮಂಗಗಳ ಹಾವಳಿಯಿಂದ ಬೆಳೆ ಹಾನಿಗೆ ಅರಣ್ಯ ಇಲಾಖೆಯಿಂದ ರೈತರಿಗೆ ಪರಿಹಾರವೂ ಸಿಕ್ಕಿಲ್ಲ.

ತೀರ್ಥಹಳ್ಳಿ  ಅಡಿಕೆಗೆ ತನ್ನದೇ ಆದ ಮಾನ್ಯತೆ ಇದೆ. ಅತ್ಯಂತ ಮುತುವರ್ಜಿಯಿಂದ ಅಡಿಕೆ ಸಿದ್ಧಗೊಳಿಸಿ ಮಾರುಕಟ್ಟೆಗೆ ಕಳುಹಿಸಿ ವ್ಯಾಪಾರ ಮಾಡುವ ರೈತರು ತಾವು ಬೆಳೆದ ಗುಣಮಟ್ಟದ ಅಡಿಕೆ ಸಿದ್ಧಪಡಿಸಿರುವುದಕ್ಕಾಗಿಯೇ ಸಂಭ್ರಮಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.