ADVERTISEMENT

ಅನಾಥ ಮಕ್ಕಳಿಗೆ ಸೂಕ್ತ ರಕ್ಷಣೆಯ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಮೇ 2012, 6:25 IST
Last Updated 23 ಮೇ 2012, 6:25 IST

ಶಿವಮೊಗ್ಗ: ತಂದೆ, ತಾಯಿ ಇಲ್ಲದ ಮಕ್ಕಳಿಗೆ, ತಾಯಿ ಇದ್ದು ತಂದೆ ಇಲ್ಲದ ಮಕ್ಕಳಿಗೆ ಬಾಲ ಅಪರಾಧ ಕಾಯ್ದೆಯಡಿಯಲ್ಲಿ ನಮ್ಮಲ್ಲಿ ರಕ್ಷಣೆ, ಊಟ, ವಸತಿ, ವಸ್ತ್ರಗಳ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕಿ ಲಕ್ಷ್ಮೀಕಾಂತ್ ತಿಳಿಸಿದರು.

ನಗರದ ಅಭಯ ಸಂಸ್ಥೆ ಅಂತರರಾಷ್ಟ್ರೀಯ ಏಡ್ಸ್ ಕ್ಯಾಂಡಲ್ ಲೈಟ್ ಸ್ಮರಣೆಯ ಅಂಗವಾಗಿ ಮಂಗಳವಾರ ಸರ್ಕಾರಿ ಅಧಿಕಾರಿಗಳು ಹಾಗೂ ಏಡ್ಸ್‌ನಿಂದ ಅನಾಥರಾದ ಮತ್ತು ತೊಂದರೆಗೊಳಗಾದ ಮಕ್ಕಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಇಲಾಖೆ ಪ್ರತಿ ಶನಿವಾರ ನಡೆಸುವ ಬಾಲಮಂದಿರದ ಸಭೆಗೆ ಆಗಮಿಸಿ, ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು. ನಿಮಗೆ ಪ್ರತ್ಯೇಕ ಆದ್ಯತೆ ನೀಡುತ್ತೇವೆ ಎಂದ ಅವರು, 18 ವರ್ಷಕ್ಕಿಂತ ಮೇಲ್ಪಟ್ಟ  ಮಕ್ಕಳಿಗೆ ಆದ್ಯತೆಯ ಮೇರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಮಂಜುನಾಥ್ ಮಾತನಾಡಿ, ಈಗಾಗಲೇ ಅನ್ನ ಅಂತ್ಯದೋಯ ಚೀಟಿಯನ್ನು 41,963 ಕುಟುಂಬಗಳಿಗೆ ನೀಡಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ 29 ಕೆ.ಜಿ ಅಕ್ಕಿ ಹಾಗೂ 6 ಕೆ.ಜಿ ಗೋಧಿ ವಿತರಿಸಲಾಗುತ್ತದೆ. ಅರ್ಹ ಎಚ್‌ಐವಿಯೊಂದಿಗೆ ಜೀವನ ನಡೆಸುತ್ತಿರುವ ಕುಟುಂಬಗಳಿಗೆ ಈ ಕಾರ್ಯಕ್ರಮದಡಿಯಲ್ಲಿ ಸೌಲಭ್ಯ ನೀಡಲು ಜಿಲ್ಲಾಧಿಕಾರಿಗಳಿಗೆ ತಾವು ಮನವಿ ಮಾಡುವುದಾಗಿ ಭರವಸೆ ನೀಡಿದರು.

ಶಿಕ್ಷಣ ಇಲಾಖೆ ಅಧಿಕಾರಿ ಶಿವಕುಮಾರ್ ಮಾತನಾಡಿ, ಎಚ್‌ಐವಿಯೊಂದಿಗೆ ಜೀವನ ನಡೆಸುವ ಮಕ್ಕಳಿಗೆ ಶಾಲೆಗಳಲ್ಲಿ ಕಳಂಕ ಹಾಗು ತಾರತಮ್ಯ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳನ್ನು ಇಲಾಖೆಯ ಗಮನಕ್ಕೆ ತರುವ ಕೆಲಸವನ್ನು ಸರ್ಕಾರೇತರ ಸಂಘ-ಸಂಸ್ಥೆಗಳು ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಎಚ್‌ಐವಿ-ಏಡ್ಸ್‌ನಿಂದ ಅನಾಥರಾದ ಮತ್ತು ತೊಂದರೆಗೊಳಗಾದ ಮಕ್ಕಳು ತಮ್ಮ ಸಮಸ್ಯೆಯನ್ನು ಹಂಚಿಕೊಂಡರು.ಪಲ್ಲವಿ (ಎಲ್ಲರ ಹೆಸರನ್ನೂ ಬದಲಾಯಿಸಲಾಗಿದೆ) ಮಾತನಾಡಿ, `ದ್ವಿತೀಯ ಪಿಯು. ತಂದೆ ಇಲ್ಲ, ತಾಯಿ ನನ್ನನ್ನು ಹಾಗೂ ತಮ್ಮನನ್ನು ಮನೆ ಕೆಲಸ ಮಾಡಿ ಸಾಕುತ್ತಿದ್ದಾಳೆ. ಅವಳ ಅರೋಗ್ಯದಲ್ಲಿ ಸಮಸ್ಯೆ ಇದೆ. ನನಗೆ ಕಣ್ಣಿನ ತೊಂದರೆ ಇದೆ.

ಅಮ್ಮನಲ್ಲಿ ಹಣವಿಲ್ಲ. ನನಗೆ ಓದಲು ಬಹಳ ಇಷ್ಟ. ಆದರೆ, ತಾಯಿ ತನ್ನ ಜತೆ ಕೆಲಸಕ್ಕೆ ಕರೆಯುತ್ತಾಳೆ. ಆದರೆ, ಸರ್ಕಾರವಾಗಲಿ ಹಾಗೂ ಸ್ವಯಂ ಸಂಸ್ಥೆಗಳಾಗಲಿ 18 ವರ್ಷವಾದ ನಂತರ ನಮಗೆ ಯಾವುದೇ ಸೌಲಭ್ಯ ಇಲ್ಲ ಎಂದು ಹೇಳಿ ಮನೆಗೆ ಕಳುಹಿಸುತ್ತಾರೆ. ಈಗ ನಾವು ಎಲ್ಲಿಗೆ ಹೋಗಬೇಕು?~ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಳು.

ರಾಜಿ,  `ಎಸ್ಸೆಸ್ಸೆಲ್ಸಿ, ನನಗೆ ತಂದೆ ಇಲ್ಲ, ತಾಯಿ ಕೂಲಿ ಕೆಲಸ ಮಾಡುತ್ತಾಳೆ. ನಮ್ಮ ರೇಷನ್ ಕಾರ್ಡಗೆ ಬರೀ 4 ಕೆಜಿ ಅಕ್ಕಿ ಮಾತ್ರ ಸಿಗುತ್ತದೆ. ಇದರಿಂದ ನಾವು ಒಂದು ದಿನ ಊಟ ಮಾಡಿದರೆ ಎರಡು ದಿನ ಉಪವಾಸ  ಇರಬೇಕಾಗುತ್ತದೆ. ನಮಗೆ ಇನ್ನೂ ಹೆಚ್ಚು ಸೌಲಭ್ಯ ಒದಗಿಸಿಕೊಡಲು ಸಾಧ್ಯ ಇಲ್ಲವೇ ಎಂದು ಅಧಿಕಾರಿಗಳನ್ನು ಕೇಳಿದಳು.

5ನೇ ತರಗತಿ  ಓದುತ್ತಿರುವ ಮಾಲಿನಿ, ಶಾಲೆಯಲ್ಲಿ ಉಂಟಾಗುವ ಕಳಂಕದ ಕುರಿತು ಅನುಭವ ಹಂಚಿಕೊಂಡಳು. `ಶಾಲೆಗೆ ಹೋದರೆ ಟೀಚರ್ ನನಗೆ ಕಾಯಿಲೆಯಿದೆ ಎಂದು ನನ್ನನ್ನು ಮುಟ್ಟಲು ಹಿಂಜರಿಯುತ್ತಾರೆ. ಇದರಿಂದ ನನಗೆ ಸಾಕಷ್ಟು ಬೇಸರವಾಗುತ್ತದೆ. ನಾನು ಕೂಡ ಬೇರೆ ಮಕ್ಕಳು ಬದುಕುವ ಹಾಗೆ ಬದುಕಲು ಸಾಧ್ಯವಿಲ್ಲವೇ?~ ಎಂದು ಪ್ರಶ್ನಿಸಿದಳು.

8ನೇ ತರಗತಿಯ ವರುಣ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಮಗೆ ಹಣ ನೀಡುತ್ತೇವೆ ಎಂದು ನಮ್ಮಲ್ಲಿ ಹಲವು ದಾಖಲಾತಿಗಳನ್ನು ಪಡೆದು ಕೊಂಡಿದ್ದರು. ಆದರೆ, ಇದುವರೆಗೂ ನಮಗೆ ಯಾವುದೇ ಸವಲತ್ತು ಸಿಕ್ಕಿಲ್ಲ ಎಂದರು.

ಸಂವಾದದಲ್ಲಿ ಜಿಲ್ಲೆಯ ಸುಮಾರು 35 ಮಕ್ಕಳು ಭಾಗವಹಿಸಿದ್ದರು. ಗೋಪಿನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಭದ್ರಾವತಿ ಸತೀಶ ಸ್ವಾಗತಿಸಿದರು. ಚಿದಾನಂದ ವಂದಿಸಿದರು. ಮೇರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.