ADVERTISEMENT

ಅಪಾಯದ ಅಂಚಿನಲ್ಲಿ ಬೀಸನಗದ್ದೆ ಗ್ರಾಮ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 10:45 IST
Last Updated 9 ಆಗಸ್ಟ್ 2012, 10:45 IST

ಸಾಗರ: ತಾಲ್ಲೂಕಿನಲ್ಲಿ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬುಧವಾರವೂ ವರುಣನ ಆರ್ಭಟ ಮುಂದುವರಿಯಿತು.

ಸಾಗರ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಸವನಹೊಳೆ ಡ್ಯಾಂ ಮಳೆಯ ನೀರಿನಿಂದ ತುಂಬಿದ್ದು, ಜಲಾಶಯದಿಂದ ನೀರನ್ನು ಹೊರಕ್ಕೆ ಬಿಡಲಾಗಿದೆ.

ತಾಲ್ಲೂಕಿನ ವಿವಿಧೆಡೆ ಬತ್ತದ ಗದ್ದೆ ಹಾಗೂ ಅಡಿಕೆ ತೋಟಕ್ಕೆ ಮಳೆ ನೀರು ನುಗ್ಗಿದೆ. ಹೊಸಗದ್ದೆ ಗ್ರಾಮದಲ್ಲಿ ಸೇತುವೆ ಕೊಚ್ಚಿ ಹೋಗಿದೆ. ಯಡೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೇರುಬೀಸು ಹಾಗೂ ಗೌತಮಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಳಗೇರಿ ಗ್ರಾಮದಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ತಾಳಗುಪ್ಪ ಹೋಬಳಿಯ ಕಾನ್ಲೆ, ಸೈದೂರು, ತಡಗಳಲೆ, ಮಂಡಗಳಲೆ ಮೊದಲಾದ ಗ್ರಾಮಗಳಲ್ಲಿ ವರದಾ ನದಿಯ ಪ್ರವಾಹ ಮುಂದುವರಿದಿದ್ದು, ಮಂಗಳವಾರಕ್ಕಿಂತ ಬುಧವಾರ ಬತ್ತದ ಗದ್ದೆಗಳಲ್ಲಿ ನಿಂತಿದ್ದ ನೀರಿನ ಪ್ರಮಾಣ ಏರಿಕೆಯಾಗಿದೆ.

ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀಸನಗದ್ದೆ ಗ್ರಾಮ ಅಪಾಯದ ಅಂಚಿನಲ್ಲಿದ್ದು, ನೀರಿನ ಪ್ರಮಾಣ ಏರುತ್ತಿರುವುದರಿಂದ ನಡುಗಡ್ಡೆ ಆಗುವ ಸಾಧ್ಯತೆ ಇದೆ. ತಾಲ್ಲೂಕಿನ ಹಲವು ಭಾಗಗಳಲ್ಲಿ ರಸ್ತೆಯ ಮೇಲೆ ನೀರು ನಿಂತಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಬೆಳೆ ಹಾನಿ
ಹೊಸನಗರ:
ತಾಲ್ಲೂಕಿನ ಘಟ್ಟ, ಶರಾವತಿ, ವಾರಾಹಿ ಜಲಾನಯನ ಪ್ರದೇಶಗಳಲ್ಲಿ ವರುಣನ ಅಬ್ಬರ ಬುಧವಾರವೂ ಮುಂದುವರಿದಿರುವ ಬಗ್ಗೆ ವರದಿಯಾಗಿದೆ.ವಾರಾಹಿ ವಿದ್ಯುತ್ ಯೋಜನಾ ಪ್ರದೇಶ ಮಾಸ್ತಿಕಟ್ಟೆ-30.7 ಸೆಂ.ಮೀ., ಹುಲಿಕಲ್-25 ಸೆಂ.ಮೀ., ಯಡೂರು- 24.2 ಸೆಂ.ಮೀ. ಹಾಗೂ ಮಾಣಿ-17.6 ಸೆಂ.ಮೀ., ನಗರ-4 ಸೆಂ.ಮೀ. ಮಳೆಯಾಗಿದ ಪರಿಣಾಮ ಮಾಣಿ ಅಣೆಕಟ್ಟಿನ ಬುಧವಾರ ಬೆಳಿಗ್ಗೆ 8.30ರ ನೀರಿನಮಟ್ಟ 584 ಮೀ. ಆಗಿದೆ.

ತಾಲ್ಲೂಕಿನ ನಗರ, ಹುಂಚಾ, ಕಸಬಾ ಹಾಗೂ ಅರೆಮಲೆನಾಡು ಕೆರೆಹಳ್ಳಿ ಹೋಬಳಿಯಲ್ಲಿ ಸಹ ಉತ್ತಮ ಮಳೆಯಾದ ಪರಿಣಾಮ ಬತ್ತದ ನಾಟಿ ಕೆಲಸಗಳು ಭರದಿಂದ ಸಾಗುತ್ತಿದೆ.ಒಂದೇ ಸಮನೆ ಸುರಿಯುತ್ತಿರುವ ಮಳೆಯ ಪರಿಣಾಮ ಶರಾವತಿ, ಶರ್ಮನಾವತಿ, ಕುಮದ್ವತಿ, ವಾರಾಹಿ, ಚಕ್ರಾ, ಸಾವೆಹಕ್ಕಲು ನದಿ ತಟದ ಕೃಷಿ ಜಮೀನಿಗೆ ನೀರು ಹಾಗೂ ಮರಳು ನುಗ್ಗಿ ಹಾನಿ ಉಂಟುಮಾಡಿರುವುದು ವರದಿಯಾಗಿದೆ.

ತಗ್ಗಿದ ಮಳೆ: ಸಹಜ ಸ್ಥಿತಿಗೆ ಸಂಚಾರ, ಜನಜೀವನ
ತೀರ್ಥಹಳ್ಳಿ:
ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಕೊಂಚ ತಗ್ಗಿದೆ. ತುಂಬಿ ಹರಿಯುತ್ತಿದ್ದ ನದಿಗಳಲ್ಲಿ ನೀರಿನಮಟ್ಟ ಕಡಿಮೆಯಾಗುತ್ತಿದೆ. ರಸ್ತೆ ಸಂಪರ್ಕ ಸಹಜ ಸ್ಥತಿಗೆ ಬರುತ್ತಿದೆ. ಬಹುತೇಕ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಹಜ ಸ್ಥಿತಿಗೆ ಮರಳುತ್ತಿದೆ.

ನದಿಗಳಲ್ಲಿ ನೀರಿನಮಟ್ಟ ಕಡಿಮೆ ಆದರೂ ಹಲವೆಡೆ ಬತ್ತದ ಗದ್ದೆಗಳು, ಅಡಿಕೆ ತೋಟಗಳು ಜಲಾವೃತಗೊಂಡಿವೆ, ತಗ್ಗುಪ್ರದೇಶದ ಜಮೀನಿನಲ್ಲಿ ನೀರು ಒಂದೇ ಸಮನೆ ನಿಂತಿರುವುದರಿಂದ ಸಸಿನಾಟಿ ಮಾಡಿರುವ ಬತ್ತದ ಗದ್ದೆಗಳು ಕೊಳೆಯುತ್ತಿವೆ. ಅಡಿಕೆ ತೋಟಗಳೂ ಕೂಡ ನೆರೆನೀರಿನಿಂದ ಇನ್ನೂ ಮುಕ್ತಿ ಕಂಡಿಲ್ಲ ಎಂದು ರೈತರು ತಿಳಿಸಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಸ್ಥಳೀಯ ರಜೆ ನೀಡಲಾಗಿತ್ತು. ಹಲವೆಡೆ ಜಮೀನಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಜಮೀನಿನಲ್ಲಿ ಹೂಳು ತುಂಬಿದೆ. ಬಾಂಡ್ಯದಲ್ಲಿ ಹಳ್ಳದ ದಂಡೆ ಒಡೆದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮಳೆಯಿಂದಾಗಿ ನೆಕ್ಕರಗೋಡು, ಮುಳುಬಾಗಿಲು, ಕೋಣಂದೂರಿನಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿದೆ ಎಂದು ಶಿರಸ್ತೇದಾರ್ ರಾಜಪ್ಪ ತಿಳಿಸಿದ್ದಾರೆ. ಆಗುಂಬೆಯಲ್ಲಿ ಬುಧವಾರ 9.3 ಸೆಂ.ಮೀ. ಹಾಗೂ ತೀರ್ಥಹಳ್ಳಿಯಲ್ಲಿ 13.4 ಸೆಂ.ಮೀ. ಮಳೆ ಬಿದ್ದ ಬಗ್ಗೆ ವರದಿಯಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.