ADVERTISEMENT

ಅಭ್ಯರ್ಥಿಗಳಿಂದ ಬಿರುಸಿನ ಸ್ಪರ್ಧೆ

ತೀರ್ಥಹಳ್ಳಿ ಕ್ಷೇತ್ರದಲ್ಲಿ 4,469 ಹೊಸ ಮತದಾರರು

​ಪ್ರಜಾವಾಣಿ ವಾರ್ತೆ
Published 6 ಮೇ 2018, 14:05 IST
Last Updated 6 ಮೇ 2018, 14:05 IST

ತೀರ್ಥಹಳ್ಳಿ: ಮತ ಚಲಾವಣೆ ದಿನ ಸಮೀಪಿಸುತ್ತಿದ್ದಂತೆ ಕಣದಲ್ಲಿರುವ ವಿವಿಧ ಪಕ್ಷಗಳ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಣದಲ್ಲಿ 8 ಅಭ್ಯರ್ಥಿಗಳಿದ್ದಾರೆ.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಸಮಾಜವಾದಿ ಹೋರಾಟಗಾರರ ನೆಲೆ ಎಂದು ಗುರುತಿಸಿ
ಕೊಂಡಿದೆ. ಹೋರಾಟ, ರಾಜಕೀಯ ರಂಗದಲ್ಲಿ ಶಾಂತವೇರಿ ಗೋಪಾಲಗೌಡ, ಕಡಿದಾಳು ಮಂಜಪ್ಪ ಅವರ ಹೆಸರನ್ನು ಇಂದಿಗೂ ಜನ ನೆನೆಪು ಮಾಡಿಕೊಳ್ಳುತ್ತಾರೆ. ಸಾಮಾಜಿಕ ಕಳಕಳಿಯುಳ್ಳ ಅನೇಕ ಹೋರಾಟಗಳಿಗೆ ಭದ್ರ ನೆಲೆಯನ್ನೂ ಒದಗಿಸಿದೆ. ಈಗ ಈ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಭೂಪ್ರದೇಶವನ್ನು ಈ ಕ್ಷೇತ್ರ ಒಳಗೊಂಡಿದ್ದರೂ, ಜಿಲ್ಲೆಯಲ್ಲಿ ಕಡಿಮೆ ಮತದಾರರನ್ನು ಒಳಗೊಂಡಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮಹಿಳಾ ಮತದಾರರನ್ನೂ ಒಳಗೊಂಡಿರುವುದು ಇನ್ನೊಂದು ವಿಶೇಷ. ನಿರ್ಣಾಯಕರಾಗಿರುವ ಮಹಿಳಾ ಮತದಾರರನ್ನು ತಮ್ಮ ಕಡೆ ಸೆಳೆದುಕೊಳ್ಳಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ.

ADVERTISEMENT

ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕನ್ನು 4,469 ಮತದಾರರು ಪಡೆದುಕೊಂಡಿದ್ದಾರೆ. ಇಡೀ ಕ್ಷೇತ್ರದಲ್ಲಿ ಮೂವರು ತೃತೀಯ ಲಿಂಗಿ ಮತದಾರರಿದ್ದಾರೆ.

ಕಾಂಗ್ರೆಸ್‌ನಿಂದ ಕಿಮ್ಮನೆ ರತ್ನಾಕರ, ಬಿಜೆಪಿಯಿಂದ ಆರಗ ಜ್ಞಾನೇಂದ್ರ, ಜೆಡಿಎಸ್‌ನಿಂದ ಆರ್.ಎಂ. ಮಂಜುನಾಥಗೌಡ ಹಾಗೂ ಎಂಇಪಿ ಪಕ್ಷದಿಂದ ಪುತ್ತಬ್ಬ, ಪಕ್ಷೇತರರಾಗಿ ನೆಂಪೆ ಶ್ರೀನಿವಾಸ್, ಟಿ.ಮುನೀರ್, ಗುಂಡುಗದ್ದೆ ಗ್ರಾಮದ ಕೆ. ರತ್ನಾಕರ, ಶ್ರೀಲತಾ ಶೆಟ್ಟಿ ಕಣದಲ್ಲಿ ಇದ್ದಾರೆ.

‘ಕಾಂಗ್ರೆಸ್ ಪಕ್ಷದಲ್ಲಿ ಕಳೆದ 40 ವರ್ಷಗಳಿಂದ ಕೆಲಸ ಮಾಡಿದ್ದೇನೆ.ನನ್ನ ಹಿರಿತನ ಗಮನಿಸಿ ಪಕ್ಷ ನನಗೇ ಟಿಕೆಟ್ ನೀಡಬೇಕಿತ್ತು. 35 ವರ್ಷಗಳಿಂದ ಟಿಕೆಟ್‌ಗಾಗಿ ಮನವಿ ಸಲ್ಲಿಸುತ್ತಿದ್ದರೂ ಪಕ್ಷ ಪರಿಗಣಿಸಿಲ್ಲ’ ಎಂದು ನೆಂಪೆ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.