ADVERTISEMENT

ಅರಣ್ಯ ಸಚಿವ ವಿಜಯಶಂಕರ್.ತಾವರೆಕೊಪ್ಪ ಬಳಿ ಕಬ್ಬನ್ ಪಾರ್ಕ್ ಮಾದರಿ ಉದ್ಯಾನ.

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 12:55 IST
Last Updated 13 ಮಾರ್ಚ್ 2011, 12:55 IST

ಶಿವಮೊಗ್ಗ: ಜಿಲ್ಲೆಯ ತಾವರೆಕೊಪ್ಪ ಹುಲಿ-ಸಿಂಹಧಾಮ ಬಳಿ 250 ಎಕರೆ ಅರಣ್ಯ ಪ್ರದೇಶದಲ್ಲಿ ಬೆಂಗಳೂರಿನ ಕಬ್ಬನ್‌ಪಾರ್ಕ್ ಮಾದರಿಯ ಉದ್ಯಾನವೊಂದನ್ನು ನಿರ್ಮಿಸಲಾಗುವುದು ಎಂದು ಅರಣ್ಯ ಮತ್ತು ಸಣ್ಣ ಕೈಗಾರಿಕೆಗಳ ಸಚಿವ ಸಿ.ಎಚ್. ವಿಜಯಶಂಕರ್ ಪ್ರಕಟಿಸಿದರು.

ಅಧಿಕಾರಿಗಳ ಸೂಚನೆ ಮೇರೆಗೆ ಈ ಜಾಗ ಆಯ್ಕೆ ಮಾಡಿಕೊಂಡಿದ್ದು, ಇಲ್ಲಿ ನೀಲಗಿರಿ ಹಾಗೂ ಅಕೇಶಿಯ ಹೊರತುಪಡಿಸಿ ಉಳಿದೆಲ್ಲ ಜಾತಿಯ ಮರಗಿಡಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಅಭಿವೃದ್ಧಿ ಪಡಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಉದ್ಯಾನ ನಿರ್ಮಾಣ ಕಾರ್ಯ ಈ ವರ್ಷದ ಮೇ ಅಥವಾ ಜೂನ್ ತಿಂಗಳಿನಿಂದ ಆರಂಭಿಸಲಾಗುವುದು ಎಂದರು.

ಸಾರ್ವಜನಿಕರ ವಿಹಾರಕ್ಕಾಗಿ ಈ ರೀತಿಯ ನೈಸರ್ಗಿಕ ತಾಣಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರಿಗೆ ಅರಣ್ಯದ ಪರಿಸರವನ್ನು ಸಾರ್ವಜನಿಕರಿಗೆ ಪರಿಚಯಿಸಲು ಇದು ಸಹಕಾರಿಯಾಗಲಿದೆ ಎಂದರು.ರಾಜ್ಯದ ಆಯ್ದ ದೇವವನಗಳ ಹಸಿರೀಕರಣಕ್ಕೆ ಇಲಾಖೆಯು ಚಿಂತಿಸಿದ್ದು, ಅಂತಹ ಬೆಟ್ಟಗಳ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವುದರೊಂದಿಗೆ ಪ್ರತ್ಯೇಕ ನರ್ಸರಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ಸಿರಿಗೆರೆಯ ಮಲೆಶಂಕರ ಬೆಟ್ಟದಲ್ಲಿ ಸಸಿಗಳನ್ನು ನೆಡಲು ಈ ವರ್ಷವೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಇನ್ನೊಂದು ಬೆಟ್ಟ ಪ್ರದೇಶದ ಪ್ರಸ್ತಾವಕ್ಕೆ ಈ ಸಾಲಿನಲ್ಲಿ ಅವಕಾಶ ನೀಡಲಾಗುವುದು ಎಂದರು.‘ಕೃಷಿ-ಅರಣ್ಯ ಅಭಿವೃದ್ಧಿ ಯೋಜನೆ’ ಹೆಸರಡಿ ರೈತರನ್ನು ಇಲಾಖೆಯ ಯೋಜನೆಯೊಂದಿಗೆ ಸೇರಿಸುವ ಉದ್ದೇಶ ಹೊಂದಿದ್ದು, ರೈತ ಬೆಳೆಯಲು ಬಯಸುವ ಸಸಿಗಳನ್ನು ನರ್ಸರಿಗಳಲ್ಲಿ ಬೆಳೆದು ಅವರಿಗೆ ತಲುಪಿಸಲಾಗುವುದು.

ಪ್ರತಿ ಸಸಿ ಸಂರಕ್ಷಣೆಗೆ ಒಂದು ವರ್ಷಕ್ಕೆ ರೂ10, 2 ವರ್ಷಕ್ಕೆ ರೂ 15 ಹಾಗೂ ರೂ3 ವರ್ಷಕ್ಕೆ 20 ಸಹಾಯಧನ ನೀಡಲಾಗುವುದು. ನರ್ಸರಿ ಮತ್ತು ಪ್ಲಾಂಟೇಶನ್‌ನನ್ನು ಪ್ರತ್ಯೇಕಗೊಳಿಸಿರಲಿಲ್ಲ. ಈ ವರ್ಷದಿಂದ ಈ ಎರಡೂ ವಿಭಾಗಗಳಿಗೆ ಪ್ರತ್ಯೇಕ ಅಸ್ತಿತ್ವ ನೀಡಿ, ವರ್ಷದ 12 ತಿಂಗಳೂ ನರ್ಸರಿ ಹಾಗೂ ಪ್ಲಾಂಟೇಶನ್‌ಗಳು ಕಾರ್ಯ ನಿರ್ವಹಿಸುವಂತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಮಾಹಿತಿ ಇಲ್ಲ  
ಅರಣ್ಯ ಇಲಾಖೆ ಜಮೀನು ಸಾರ್ವಜನಿಕ ಉದ್ದೇಶಗಳಿಗೆ ನೀಡಿದ ಉದಾಹರಣೆಗಳಿವೆ. ಆದರೆ, ಇದಕ್ಕೆ ಸಮಾನಾಂತರ ಜಮೀನು ನೀಡಬೇಕೆಂಬ ಕಾನೂನು ಇದೆ. ಬಿ.ಆರ್. ಪ್ರಾಜೆಕ್ಟ್ ರಸ್ತೆಯಲ್ಲಿರುವ ಸೂರ್ಯ ರೋಷನಿ ಕಂಪೆನಿ ಅರಣ್ಯ ಜಮೀನು ಒತ್ತುವರಿ ಮಾಡಿಕೊಂಡ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.

ತೀರ್ಥಹಳ್ಳಿ ಬಳಿಯ ಕಾಫಿ ಕಾನೂನು ಕುರಿತಂತೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರು ಇದುವರೆಗೂ ವರದಿ ನೀಡಿಲ್ಲ. ಆ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ಅಭಿನಂದನೆ
ಇಲಾಖೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರ, ್ಙ 150 ಕೋಟಿಗೂ  ಹೆಚ್ಚಿನ ಅನುದಾನ ಮೀಸಲಿಟ್ಟಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಚಿವರು ಅಭಿನಂದಿಸಿದರು.ಜಿಲ್ಲೆಯಲ್ಲಿ ಕೃಷಿ ಹಾಗೂ ಕೃಷಿಗೆ ಪೂರಕವಾದ ಕೈಗಾರಿಕೆ ಆರಂಭಕ್ಕೆ ಇನ್ನು 25 ದಿವಸದ ಒಳಗೆ ನೀಲನಕ್ಷೆ ತಯಾರಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಟಿ.ಜೆ. ರವಿಕುಮಾರ್, ವೆಂಕಟೇಸನ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಬಾಲ್ಯಾನಾಯ್ಕ, ಉಪ ನಿರ್ದೇಶಕ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಶ್ವ ಕನ್ನಡ ಸಮ್ಮೇಳನ ಪ್ರಯುಕ್ತ ‘ಕನ್ನಡ ಜಾಗೃತಿ’
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಇಲ್ಲಿನ ಜೆಎನ್‌ಎನ್‌ಇ ಕಾಲೇಜಿನ ಎಂಬಿಎ ವಿಭಾಗದಲ್ಲಿ ‘ಕನ್ನಡ ಜಾಗೃತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಕೆ.ಎಸ್. ನಟೇಶ್ ಮಾತನಾಡಿ,  ಯುವಜನಾಂಗ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕು ಎಂದರು. ವಿಭಾಗದ ನಿರ್ದೇಶಕ ಡಾ.ಎಂ.ಜಿ. ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಸಂತೋಷಕುಮಾರ್ ಸ್ವಾಗತಿಸಿದರು. ಸಿ. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಮುಖ್ಯಾಂಶಗಳು
4ಮಲೆಶಂಕರ ಬೆಟ್ಟಕ್ಕೆ ಹಸಿರು ಹೊದಿಕೆ

4 ಸಸಿ ಸಂರಕ್ಷಣೆಗೆ ಸಬ್ಸಿಡಿ

4 ಕೈಗಾರಿಕಾ ಅಭಿವೃದ್ಧಿಗೆ ನೀಲನಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.