ADVERTISEMENT

ಅಸಮರ್ಪಕ ನೀರು ಪೂರೈಕೆ: ಖಾಲಿ ಕೊಡ ಪ್ರದರ್ಶಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 10:00 IST
Last Updated 21 ಅಕ್ಟೋಬರ್ 2011, 10:00 IST

ಸಾಗರ: ನಗರದ ಚಂದ್ರಮಾವಿನ ಕೊಪ್ಪಲು ಬಡಾವಣೆಯಲ್ಲಿ ಅಸಮರ್ಪಕ ನೀರಿನ ಪೂರೈಕೆ ಖಂಡಿಸಿ ಅಲ್ಲಿನ ನಾಗರಿಕ ಸಮಿತಿ ಸದಸ್ಯರು  ಗುರುವಾರ ನಗರಸಭೆ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಬಡಾವಣೆಯ ನಾಗರಿಕ ಸಮಿತಿ ಪ್ರಮುಖರಾದ ಅನ್ವರ್ ಮಾತನಾಡಿ, ಚಂದ್ರಮಾವಿನಕೊಪ್ಪಲು ಬಡಾವಣೆಗೆ ನಗರಸಭೆ ವತಿಯಿಂದ ಸರಬರಾಜು ಆಗುತ್ತಿರುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಪ್ರತಿದಿನ ಕೇವಲ ಒಂದು ಗಂಟೆ ಮಾತ್ರ ನೀರು ಬಿಡುತ್ತಿದ್ದು, ಕೆಲವು ಮನೆಗಳಿಗೆ ಎರಡು ಅಥವಾ ಮೂರು ಬಕೆಟ್ ನೀರು ಸಹ ದೊರಕುತ್ತಿಲ್ಲ ಎಂದು ಹೇಳಿದರು.

ಅಸಮರ್ಪಕ ಪೂರೈಕೆ ಜತೆಗೆ ಬರುತ್ತಿರುವ ನೀರು ಶುದ್ಧವಾಗಿಲ್ಲ. ನೀರಿನ ಶುದ್ಧತೆಯ ಬಗ್ಗೆ ನಗರಸಭೆ ಗಮನಹರಿಸುತ್ತಿಲ್ಲ. ಇದರಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು.

ನೀರು ಪೂರೈಕೆ ವ್ಯವಸ್ಥೆಯನ್ನು ಸರಿಮಾಡುವಂತೆ ಸಂಬಂಧಪಟ್ಟ ಎಂಜಿನಿಯರ್ ರಾಮಪ್ಪ ಅವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ನಗರಸಭಾ ಸದಸ್ಯರ ಮಾತಿಗೂ ಅವರು ಬೆಲೆ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಈ ಹಂತದಲ್ಲಿ ನಗರಸಭೆ ಅಧ್ಯಕ್ಷ ರಾಧಾಕೃಷ್ಣ ಬೇಂಗ್ರೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಜತೆಗೆ ಖುದ್ದಾಗಿ ಚಂದ್ರಮಾವಿನಕೊಪ್ಪಲು ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರಿಗೆ ಆಗಿರುವ ತೊಂದರೆಯನ್ನು ಸರಿಪಡಿಸುವುದಾಗಿ ಅವರು ಭರವಸೆ ನೀಡಿದರು.

ಚಂದ್ರಮಾವಿನ ಕೊಪ್ಪಲು ಬಡಾವಣೆಯ ರಾಜೇಶ್ವರಿ, ಸಲ್ಮಾ, ಪಾತಿಮಾ, ಲತಾ, ಕವಿತಾ, ಕರ್ನಾಟಕ ರಕ್ಷಣಾ ವೇದಿಕೆಯ ಕೆ. ಮಂಜುನಾಥ್, ಕಾಂಗ್ರೆಸ್‌ನ ಡಿ. ದಿನೇಶ್, ಅಬ್ದುಲ್ ಹಮೀದ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.