ADVERTISEMENT

ಆರೋಗ್ಯ ಇಲಾಖೆಯಲ್ಲಿನ ಹುದ್ದೆ ಭರ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:42 IST
Last Updated 7 ಸೆಪ್ಟೆಂಬರ್ 2013, 5:42 IST

ಸಾಗರ:  ತಾಲ್ಲೂಕಿನ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರ ಸಂಘದ ವತಿಯಿಂದ ಶುಕ್ರವಾರ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರ ಹಲವು ಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದು ಇದರ ಫಲಾನುಭವಿಗಳಿಗೆ ಅರ್ಹತಾ ಪತ್ರವನ್ನು ದೈನಂದಿನ ಕೆಲಸಗಳ ಜೊತೆಗೆ ವಿತರಿಸಬೇಕಾದ ಹೆಚ್ಚುವರಿ ಜವಾಬ್ದಾರಿ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಇದೆ. ಈ ಹಿನ್ನೆಲೆಯಲ್ಲಿ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಾಲ್ಲೂಕು ಆಸ್ಪತ್ರೆಯ ಮಂಜುರಾದ 120 ಹುದ್ದೆಗಳಲ್ಲಿ 57 ಹುದ್ದೆಗಳು ಖಾಲಿ ಇವೆ. ಇತರ ಆಸ್ಪತ್ರೆಗಳ 239 ಹುದ್ದೆಗಳ ಪೈಕಿ 113 ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

   ಸಿಬ್ಬಂದಿ ಕೊರತೆಯ ನಡುವೆಯೂ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ, ಪೊಲೀಸರಿಗೆ ಸುಳ್ಳು ದೂರು ದಾಖಲಿಸುವ ಪ್ರಕರಣಗಳು ನಡೆಯುತ್ತಿವೆ. ಆವಿನಹಳ್ಳಿ ಗ್ರಾಮದ ಪ್ರಯೋಗಶಾಲೆ ತಂತ್ರಜ್ಞ ರಾಮಮೂರ್ತಿ ಅವರ ಮೇಲೆ ಹಲ್ಲೆ ನಡೆದಿದ್ದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇಂತಹ ಸನ್ನಿವೇಶವನ್ನು ತಪ್ಪಿಸಿ ನೌಕರರು ನೆಮ್ಮದಿಯಿಂದ ಕೆಲಸ ಮಾಡುವಂಥ ವಾತಾವರಣ ಸೃಷ್ಟಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ, ನೌಕರರ ಸಂಘದ ಪದಾಧಿಕಾರಿಗಳಾದ ಡಾ.ಹರ್ಷವರ್ಧನ್, ಡಾ.ಎ.ಜಿ. ಶ್ರೀನಿವಾಸ್, ಮ.ಸ. ನಂಜುಂಡಸ್ವಾಮಿ, ರಾಘವೇಂದ್ರ, ಡಾ.ಬಿ.ಜಿ.ಸಂಗಮ್, ಡಾ.ಕೆ.ಪಿ.ಅಚ್ಯುತ್, ಬಿ.ಎಸ್.ಪ್ರಭಾಕರ್, ವೈ.ಮೋಹನ್, ಎಸ್.ಭಾರತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.