ADVERTISEMENT

ಆರೋಪ ಸಾಬೀತುಪಡಿಸಿ

ಸಾರ್ವಜನಿಕ ಚರ್ಚೆಗೆ ಬರಲಿ- ಈಶ್ವರಪ್ಪಗೆ ಬಿಎಸ್‌ವೈ ಆಹ್ವಾನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 9:05 IST
Last Updated 3 ಏಪ್ರಿಲ್ 2013, 9:05 IST

ಶಿವಮೊಗ್ಗ: `ನಾನು ಈಗ ಆರೋಪಿ ಎಂದು ಯಾರಾದರೂ ಸಾಬೀತುಪಡಿಸಿದರೆ ನಾಳೆಯೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು.

ನಗರದ ಎನ್‌ಇಎಸ್ ಮೈದಾನದಲ್ಲಿ ಕೆಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಾಯುಕ್ತ ನ್ಯಾಯಾಲಯದ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ಬಿದ್ದು ಹೋಗಿದೆ. ಸದ್ಯಕ್ಕೆ ಎಲ್ಲಾ ಆರೋಪಗಳಿಂದ ಮುಕ್ತನಾಗಿದ್ದೇನೆ. ನಾನು ಇನ್ನೂ ಆರೋಪಿ ಎಂದು ನೀವು ಹೇಳುವುದಾದರೆ 10 ಜನ ಬುದ್ಧಿವಂತ ವಕೀಲರು ಕರೆಸಿ, ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಕೆ.ಎಸ್. ಈಶ್ವರಪ್ಪ ಅವರನ್ನು ಆಹ್ವಾನಿಸಿದರು.

ಇದೇ ಸ್ಥಳದಲ್ಲಿ ನಿಂತು ಬಿಜೆಪಿ ಮುಖಂಡರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಹಾಗಾಗಿ ಇದೇ ಸ್ಥಳದಲ್ಲಿ ನಿಂತು ಉತ್ತರ ಕೊಡಲು ಇಲ್ಲೇ ಸಭೆ ಆಯೋಜಿಸಿದ್ದೇವೆ ಎಂದರು.

ಪದೇಪದೇ ಆರೋಪಿ ಎನ್ನುವ ಮೂಲಕ ಪಕ್ಷದಿಂದ ಹೊರ ಹೋಗುವಂತೆ ಸಂಚು ಮಾಡಿದಿರಿ. ಈಗಲೂ ಅದನ್ನೇ ಹೇಳುತ್ತಿದ್ದೀರಿ. ಆದರೆ, ನಿಮ್ಮ ಮೇಲೂ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ. ನೀವೇಕೆ ಇನ್ನೂ ಉಪ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದ್ದ್ದಿದೀರಿ ಎಂದು ಪ್ರಶ್ನಿಸಿದರು.

ಪಕ್ಷ ಕಟ್ಟಿ, ಅಧಿಕಾರಕ್ಕೆ ತಂದು, ನಿಮಗೆ ಗೂಟದ ಕಾರನಲ್ಲಿ ಓಡಾಟಕ್ಕೆ ಅವಕಾಶ ಮಾಡಿದವನನ್ನೇ ಅಧಿಕಾರದಿಂದ ಇಳಿಸಲು ಸಂಚು ನಡೆಸಿದರಲ್ಲ, ನಿಮಗೆ ದೇವರು ಒಳ್ಳೆಯದು ಮಾಡ್ತಾನಾ ಎಂದು ಈಶ್ವರಪ್ಪ ಅವರನ್ನು ಪ್ರಶ್ನಿಸಿದರು.

ಹಣ ಪಡೆದಿದ್ದೆ ನಿಜ...
`ಪಕ್ಷ ಕಟ್ಟಲು ಹಿಂದೆ ಶಂಕರಮೂರ್ತಿ ಅವರಿಂದ ಹಣ ಪಡೆದಿದ್ದೆ ನಿಜ. ಒಂದು ಸೀಟು ಇದ್ದಿದ್ದನ್ನು ನೂರು ಮಾಡಿದೆ. ಸರ್ಕಾರ ಮಾಡಿದೆ. ಇಂತಹವನನ್ನು ಅಪರಾಧಿ ಎಂದು ಪದೇ ಪದೇ ಹೇಳುವ ಮೂಲಕ ಈಗ ಬಿಜೆಪಿಯೇ ಅಪರಾಧಿಯಾಗಿದೆ. ಚುನಾವಣೆ ಫಲಿತಾಂಶ ಬರಲಿ ಯಡಿಯೂರಪ್ಪ ಏನು-ಈಶ್ವರಪ್ಪ ಏನು ಎಂಬುದು ತಿಳಿಯುತ್ತದೆ' ಎಂದು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.

ಅನಂತಮೂರ್ತಿ ಭೇಟಿ
ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರನ್ನು ಈಚೆಗೆ ಭೇಟಿ ಮಾಡಿ ಚರ್ಚೆ ಮಾಡಿದೆ. ಅವರು ಕೂಡ ಬಿಜೆಪಿ ನೀಡಿದ ಸಂಕಷ್ಟಗಳನ್ನು ಹೇಗೆ ಜೀರ್ಣಿಸಿಕೊಂಡಿರಿ ಎಂದು ಕೇಳಿದರು ಎಂದರು.

ಪಕ್ಷ ಎಷ್ಟು ಸೀಟು ಗೆಲ್ಲುತ್ತದೆಂಬುದು ಮುಖ್ಯವಲ್ಲ. ಜನರಿಗೆ ಹೇಗೆ ಹತ್ತಿರವಾಗಿದ್ದೇವೆ ಎನ್ನುವುದು ಮುಖ್ಯ. ಇದೊಂದು ಚುನಾವಣೆಗೆ ಮುಗಿಯುತ್ತಿಲ್ಲ. ಈ ಯಡಿಯೂರಪ್ಪ ಇನ್ನೂ ಎರಡು-ಮೂರು ಚುನಾವಣೆ ಮಾಡುತ್ತಾನೆ. ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ಭವಿಷ್ಯದ ಮುನ್ನೋಟವನ್ನು ಬಿಚ್ಚಿಟ್ಟರು.

ಶಿವಮೊಗ್ಗ ನಗರ ಕೇತ್ರದ ಅಭ್ಯರ್ಥಿ ಎಸ್. ರುದ್ರೇಗೌಡ ಮಾತನಾಡಿ, ಯಡಿಯೂರಪ್ಪ ನಗರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಜನಮಾನಸದಲ್ಲಿ ಇವೆ. ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಕೆಜೆಪಿ ಬೆಂಬಲಿಸಿ ಎಂದರು.

ಬಿಜೆಪಿಗೆ ನಾಯಕರಿಲ್ಲ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಜಿ. ಬಸವಣ್ಯಪ್ಪ ಮಾತನಾಡಿ, ಯಡಿಯೂರಪ್ಪ ಇಲ್ಲದ ಬಿಜೆಪಿ ಇಂದು ನಾಯಕತ್ವದ ಕೊರತೆಯಿಂದ ಬಳಲುತ್ತಿದೆ. ಅವರ ನಾಯಕತ್ವ ಕರ್ನಾಟಕಕ್ಕೆ ಅನಿವಾರ್ಯ ಎಂದರು.

ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿ ಆರ್.ಎಂ. ಮಂಜುನಾಥಗೌಡ, ಸಾಗರ ಕ್ಷೇತ್ರದ ಅಭ್ಯರ್ಥಿ ಬಿ.ಆರ್. ಜಯಂತ್, ಕೆಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಕೆ. ಮುಕುಡಪ್ಪ ಮಾತನಾಡಿದರು. ವೇದಿಕೆಯಲ್ಲಿ ಕೆಜೆಪಿ ಪದಾಧಿಕಾರಿಗಳಾದ ಕೆ.ಎಸ್. ಅನಂತರಾಮಯ್ಯ, ಎಸ್.ಎಸ್. ಜ್ಯೋತಿಪ್ರಕಾಶ್, ಏಸುದಾಸ್, ಕೆ.ಪಿ. ಪುರುಷೋತ್ತಮ್, ಕೆ.ಎಲ್. ಜಗದೀಶ್ವರ್, ಗಾಯತ್ರಿ ಮಲ್ಲಪ್ಪ, ಸತೀಶ್‌ಗೌಡ, ತನ್ವೀರ್ ಅಸ್ವಿ, ಬೇಗಂ ಉಪಸ್ಥಿತರಿದ್ದರು. ಬಿಳಕಿ ಕೃಷ್ಣಮೂರ್ತಿ ಸ್ವಾಗತಿಸಿದರು.

ಆಯನೂರು ಆತ್ಮವಿಮರ್ಶೆ ಮಾಡಿಕೊಳ್ಳಲಿ...
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎಸ್. ಗುರುಮೂರ್ತಿ ಮಾತನಾಡಿ, `ಯಡಿಯೂರಪ್ಪ-ರಾಘವೇಂದ್ರ ಬಗ್ಗೆ ಹಗುರವಾಗಿ ಮಾತನಾಡುವ ಆಯನೂರು ಮಂಜುನಾಥ ನೀವೆಷ್ಟು ಪ್ರಾಮಾಣಿಕರು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಿ' ಎಂದು ವಾಗ್ದಾಳಿ ನಡೆಸಿದರು.

`ಪಕ್ಷದಿಂದ ಪಕ್ಷದಿಂದ ಹಾರಿ, ಎಲ್ಲರೊಂದಿಗೆ ಡಿಲಿಂಗ್ ಮಾಡಿಕೊಂಡು ಬಿಜೆಪಿಗೆ ಅನ್ಯಾಯ ಮಾಡಿದ್ದೀರಿ. ಅದ್ಯಾವ ನೈತಿಕತೆಯಿಂದ ನೀವು ಮಾತನಾಡುತ್ತಿದ್ದೀರಿ. ಇದು ನಿಮಗೆ ಶೋಭೆ ತರುವ ಸಂಗತಿ ಅಲ್ಲ' ಎಂದು ಟೀಕಿಸಿಸಿದರು.

`ನೀವು ಎಂ.ಪಿ., ಎಂಎಲ್‌ಎ ಆಗಿದ್ದೀರಿ ನೀವೆಷ್ಟು ಕೆಲಸ ಮಾಡಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ' ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT