ADVERTISEMENT

ಆಸ್ತಿ ಮಾಡುವುದರಲ್ಲಿ ಮಾತ್ರ ಸಿಎಂಗೆ ನಂಬಿಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 8:50 IST
Last Updated 21 ಜೂನ್ 2011, 8:50 IST

ಸಾಗರ: ರಾಜ್ಯದ ಬಿಜೆಪಿ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.

ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತೀ.ನಾ. ಶ್ರೀನಿವಾಸ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇವರಾಣೆಗೂ ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದು ಪ್ರಮಾಣ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈಗ ಧರ್ಮಸ್ಥಳದಲ್ಲಿ ಆಣೆ ಮಾಡಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.

ವಾಸ್ತವದಲ್ಲಿ ಬಿಜೆಪಿ ಮುಖಂಡರಿಗೆ ದೇವರು ಹಾಗೂ ಧರ್ಮ ಎನ್ನುವುದು ಒಂದು ವ್ಯಾಪಾರದ ವಸ್ತುವಾಗಿದೆ. ಅವರಿಗೆ ನಿಜವಾದ ನಂಬಿಕೆ ಇರುವುದು ಆಸ್ತಿ ಮಾಡುವುದರಲ್ಲಿ ಮಾತ್ರ ಎಂದರು.

ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ ಪಡಿತರ ಚೀಟಿ ಅವ್ಯವಸ್ಥೆ ಸರಿಪಡಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಅವರು ಮುಖ್ಯಮಂತ್ರಿಯಾದ ನಂತರ ಮಾಡಿದ ಕೆಲಸವೆಂದರೆ ಒಂದು ಕಾರ್ಡ್‌ಗೆ 28 ಕೆ.ಜಿ.ಅಕ್ಕಿ ನೀಡುವ ಬದಲು  ವ್ಯಕ್ತಿಗೆ 4 ಕೆ.ಜಿ ಎಂದು ಮಾರ್ಪಾಡು ಮಾಡಿದ್ದು. 12 ವರ್ಷದ ಒಳಗಿನ ಮಕ್ಕಳು ಊಟ ಮಾಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದದ್ದು ಈಗಿನ ಸರ್ಕಾರದ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಆಗಮಿಸಿ ವಿಜಯೋತ್ಸವ ನಡೆಸಿ ಈಗ ಕಣ್ಮರೆಯಾಗಿದ್ದಾರೆ. ಸ್ವಾರ್ಥಕ್ಕಾಗಿ ಭಿನ್ನಮತ ನಡೆಸುವ ಬದಲು ಕ್ಷೇತ್ರದ ಅಭಿವೃದ್ಧಿಗಾಗಿ ಬಂಡಾಯ ಸಾರಿದ್ದರೆ ಜನ ಅವರನ್ನು ಮೆಚ್ಚುತ್ತಿದ್ದರು. ಈಗ ಅವರು ಯಾವ ಪಕ್ಷದಲ್ಲಿದ್ದಾರೆ ಎಂಬ ಅನುಮಾನ ಜನರಲ್ಲಿದೆ ಎಂದರು.

ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಪ್ರತಿವರ್ಷ ಬಡವರಿಗೆ 3 ಲಕ್ಷ ಮನೆ ನಿರ್ಮಿಸುವುದಾಗಿ ಘೋಷಣೆ ಮಾಡಿ, ಅಧಿಕಾರಕ್ಕೆ ಬಂದ ಬಿಜೆಪಿ ಈವರೆಗೆ ಬಡವರಿಗೆ ಒಂದೇ ಒಂದು ಮನೆ ನಿರ್ಮಿಸಿ ಕೊಟ್ಟಿಲ್ಲ. ಜನರಿಗೆ ಈ ಮೂಲಕ ಬಿಜೆಪಿ ದ್ರೋಹ ಎಸಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕಾಗೋಡು ಅಣ್ಣಪ್ಪ ಮಾತನಾಡಿ, ಜಾತಿ ಹಾಗೂ ಮಠದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿದೆ. ಇಷ್ಟು ದಿನ ಈ ಸರ್ಕಾರವನ್ನು ಜನ ಸಹಿಸಿಕೊಂಡಿರುವುದೇ ದೊಡ್ಡ ಪವಾಡ ಎಂದರು.

ಕಾಂಗ್ರೆಸ್ ಮುಖಂಡರಾದ ಹೊಳಿಯಪ್ಪ, ಮಕ್ಬೂಲ್ ಅಹಮದ್, ಮಹಮದ್ ಖಾಸಿಂ, ಸುಮಂಗಲಾ ರಾಮಕೃಷ್ಣ, ಪದ್ಮಾವತಿ ಚಂದ್ರಕುಮಾರ್, ಲಲಿತಾ ನಾರಾಯಣ್, ಪ್ರಕಾಶ್ ಲ್ಯಾವಿಗೆರೆ, ಸುಂದರ್‌ಸಿಂಗ್, ಐ.ಎನ್. ಸುರೇಶ್‌ಬಾಬು, ಅರುಣ್‌ಕುಮಾರ್ ಗಡಿಕಟ್ಟೆ, ಡಿ. ದಿನೇಶ್, ಕರುಣಾಕರ, ರವಿ ಲಿಂಗನಮಕ್ಕಿ, ನಾಗರಾಜ ಗುಡ್ಡೆಮನೆ, ಅಬ್ದುಲ್ ಹಮೀದ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.