ADVERTISEMENT

ಇಂದಿನಿಂದ ಶಾಲೆ ಪ್ರಾರಂಭೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮೇ 2018, 9:32 IST
Last Updated 29 ಮೇ 2018, 9:32 IST
ಮಕ್ಕಳು ಶಾಲೆಗೆ ಹೊರಟಿರುವ ದೃಶ್ಯ. (ಸಾಂದರ್ಭಿಕ ಚಿತ್ರ)
ಮಕ್ಕಳು ಶಾಲೆಗೆ ಹೊರಟಿರುವ ದೃಶ್ಯ. (ಸಾಂದರ್ಭಿಕ ಚಿತ್ರ)   

ಶಿವಮೊಗ್ಗ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮಂಗಳವಾರ ಪುನಾರಂಭಗೊಳ್ಳುತ್ತಿದ್ದು, ಬೇಸಿಗೆ ರಜೆಯನ್ನು ಖುಷಿ ಖುಷಿಯಾಗಿ ಕಳೆದ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಮೇ 28ರಂದೇ ಶಾಲೆಗಳಿಗೆ ಬಂದ ಆಯಾ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರು ಶಾಲಾ ಒಳಾಂಗಣ ಹಾಗೂ ಹೊರಾಂಗಣ ಶುಚಿತ್ವ, ಬೋಧನಾ ಕೊಠಡಿಗಳ ಸಿದ್ಧತೆ, ಮಧ್ಯಾಹ್ನ ಉಪಹಾರ ಯೋಜನೆ, ಕ್ಷೀರಭಾಗ್ಯ ಕಾರ್ಯಕ್ರಮ ಹೀಗೆ ಸಕಲ ತಯಾರಿಯಲ್ಲಿ ತೊಡಗಿದರು.

ಹಲವೆಡೆ ಶಾಲೆ ಪ್ರಾರಂಭೋತ್ಸವದ ಕುರಿತು ಗ್ರಾಮದ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಮತ್ತು ಎಸ್ಡಿಎಂಸಿ ಸದಸ್ಯರಿಗೆ ಶಿಕ್ಷಕರು ತಿಳಿವಳಿಕೆ ಪತ್ರ ನೀಡಿದರು. ಸಮವಸ್ತ್ರ, ಪಠ್ಯಪುಸ್ತಕ ವರ್ಗವಾರು ಹಂಚಿಕೆ ಹಾಗೂ ವರ್ಗವಾರು ಮಕ್ಕಳ ದಾಖಲಾತಿ, ಹಾಜರಾತಿಯ ವಿವರ, ಶಿಕ್ಷಕರ ಹಾಜರಾತಿ ಪರಿಶೀಲಿಸಿದರು. ಜತೆಗೆ ಶೈಕ್ಷಣಿಕ ವಾರ್ಷಿಕ ಯೋಜನೆ ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡರು.

ADVERTISEMENT

ಕೆಲವೆಡೆ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶದಿಂದ ಬ್ಯಾನರ್ ಅಳವಡಿಕೆ, ಕರಪತ್ರ ಹಂಚಿಕೆಯೂ ನಡೆಯಿತು. ಮಂಗಳವಾರ ಪ್ರಾರಂಭೋತ್ಸವ ನಡೆಯಲಿದ್ದು, ಕೆಲವೆಡೆ ವಿದ್ಯಾರ್ಥಿಗಳ ಮೆರವಣಿಗೆ ನಡೆಯಲಿದೆ.

ಸಿಂಗಾರಗೊಂಡ ಶಾಲೆಗಳು: ಮಂಗಳವಾರ ಶಾಲೆಗಳಲ್ಲಿ ಪ್ರಾರಂಭೋತ್ಸವ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಶಾಲೆಗಳು ಬಾಳೆಕಂದು, ಮಾವಿನ ತೋರಣಗಳಿಂದ ಸಿಂಗಾರಗೊಂಡಿವೆ. ಮೊದಲ ಎರಡು ಅವಧಿಯಲ್ಲಿ ಮಕ್ಕಳನ್ನು ಆಹ್ವಾನಿಸುವ ಕಾರ್ಯಕ್ರಮ ನಡೆಯಲಿದೆ. ಮೂರನೇ ಅವಧಿಯಿಂದ ಮಕ್ಕಳಿಂದ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಸರ್ಕಾರದಿಂದ ದೊರೆಯುವ ಪಠ್ಯಪುಸ್ತಕ, ಸಮವಸ್ತ್ರ, ಮೊದಲಾದವುಗಳನ್ನು ಗಣ್ಯರ ಸಮ್ಮುಖದಲ್ಲಿ ವಿತರಿಸಲಾಗುತ್ತದೆ ಎಂದು ಶಿಕ್ಷಕರು ತಿಳಿಸಿದರು.

ಮಕ್ಕಳಿಗೆ ಸಿಹಿ ಊಟ: ಶಾಲೆ ಪ್ರಾರಂಭೋತ್ಸವ ಹಿನ್ನಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಸಿಹಿಊಟ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ ಮಕ್ಕಳಿಗೆ ಸಿಹಿ ವಿತರಿಸಿ ಬರಮಾಡಿಕೊಳ್ಳಲು ತಯಾರಿ ನಡೆಸಲಾಗಿದೆ. ಇದಕ್ಕಾಗಿ ಆಯಾ ಶಾಲೆಯ ಶಿಕ್ಷಕರು ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.