ADVERTISEMENT

ಇದು ಹೆಸರಿಗಷ್ಟೇ 100 ಅಡಿ ವರ್ತುಲ ರಸ್ತೆ

ಚಂದ್ರಹಾಸ ಹಿರೇಮಳಲಿ
Published 15 ಅಕ್ಟೋಬರ್ 2017, 9:39 IST
Last Updated 15 ಅಕ್ಟೋಬರ್ 2017, 9:39 IST
ಶಿವಮೊಗ್ಗ ವಿನೋಬನಗರ 100 ಅಡಿ ರಸ್ತೆಯ ಮೇದಾರ ಕೇರಿಯ ಬಳಿ ಜಲ್ಲಿ, ಮರಳು ಹಾಕಿರುವ ದೃಶ್ಯ (ಎಡಚಿತ್ರ). ಲಕ್ಷ್ಮಿ ಚಿತ್ರಮಂದಿರದ ಬಳಿಯ ವರ್ತುಲ ರಸ್ತೆ ಬದಿ ಅಡ್ಡಲಾಗಿ ಇಟ್ಟಿದ್ದ ಸಾಮಗ್ರಿಗಳು.
ಶಿವಮೊಗ್ಗ ವಿನೋಬನಗರ 100 ಅಡಿ ರಸ್ತೆಯ ಮೇದಾರ ಕೇರಿಯ ಬಳಿ ಜಲ್ಲಿ, ಮರಳು ಹಾಕಿರುವ ದೃಶ್ಯ (ಎಡಚಿತ್ರ). ಲಕ್ಷ್ಮಿ ಚಿತ್ರಮಂದಿರದ ಬಳಿಯ ವರ್ತುಲ ರಸ್ತೆ ಬದಿ ಅಡ್ಡಲಾಗಿ ಇಟ್ಟಿದ್ದ ಸಾಮಗ್ರಿಗಳು.   

ಶಿವಮೊಗ್ಗ: ತೀರ್ಥಹಳ್ಳಿ ರಸ್ತೆಯಿಂದ ರೈಲ್ವೆನಿಲ್ದಾಣದ ಬಳಿಯ ಅಮೀರ್‌ ಅಹಮದ್ ಕಾಲೊನಿವರೆಗೆ ಸಾಗುವ 100 ಅಡಿ ವಿಸ್ತಾರದ ವರ್ತುಲ ರಸ್ತೆಯು ಫುಟ್‌ಪಾತ್ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳ ಅತಿಕ್ರಮಣದ ಪರಿಣಾಮ ಸಂಕುಚಿತಗೊಂಡು ಕಿರಿದಾಗಿವೆ. ಇದೇ ರಸ್ತೆ ವಿನೋಬನಗರ ಪೊಲೀಸ್ ಚೌಕಿಯ ಬಳಿ ಕವಲೊಡೆದು ಸೋಮಿನಕೊಪ್ಪವರೆಗೆ ಸಾಗುತ್ತದೆ. ಈ ಕವಲು ಮಾರ್ಗದಲ್ಲೂ ಅತಿಕ್ರಮಣ ಕಿರಿಕಿರಿ ಸಾಕಷ್ಟು ಇದೆ. ರೈಲ್ವೆ ಹಳಿಯಿಂದ ತುಂಗಾ ನಾಲೆ ಸೇತುವೆವರೆಗೆ ಫುಟ್‌ಪಾತ್ ಹೋಟೆಲ್‌ಗಳ ಹಾವಳಿ ಮಿತಿ ಮೀರಿದೆ.

ದಾಖಲೆಗಳಲ್ಲಿ, ಜನರ ಬಾಯಲ್ಲಿ 100 ಅಡಿ ರಸ್ತೆ ಎಂದೇ ರೂಢಿಗತವಾಗಿ ಕರೆಯುವ ಈ ವರ್ತುಲ ರಸ್ತೆ ವಾಸ್ತವದಲ್ಲಿ ಶೇ 40ರಷ್ಟು ಅನ್ಯ ಉದ್ದೇಶಗಳಿಗೆ ನಿಯಮ ಬಾಹಿರವಾಗಿ ಬಳಕೆಯಾಗುತ್ತಿದೆ.

ನ್ಯೂಮಂಡ್ಲಿ, ಕೆಳಗಿನ ತುಂಗಾನಗರ, ಮೇಲಿನ ತುಂಗಾನಗರ, ಗೋಪಿಶೆಟ್ಟಿ ಕೊಪ್ಪ, ಗೋಪಾಳ, ಗೋಪಾಲಗೌಡ ಬಡಾವಣೆ, ಆಲ್ಕೊಳ ವೃತ್ತ, ಶಿವಪ್ಪನಾಯಕ ಬಡಾವಣೆ, ಜಯದೇವ ಬಡಾವಣೆ, ಕಟ್ಟೆ ಸುಬ್ಬಣ್ಣ ವೃತ್ತ, ಕರಿಯಣ್ಣ ಬಿಲ್ಡಿಂಗ್, ವಿನೋಬ ನಗರ, ಪೊಲೀಸ್ ಚೌಕಿ, ರಾಜೇಂದ್ರನಗರ, ರವೀಂದ್ರನಗರ, ಅಕ್ಕಮಹಾದೇವಿ ವೃತ್ತ, ಹನುಮಂತನಗರ, ಅಮೀರ್ ಅಹಮದ್‌ ನಗರದ ಬಳಿ ಕೊನೆಗೊಳುತ್ತದೆ. ಅಲ್ಲಿ ರೈಲ್ವೆ ಇಲಾಖೆ ಜಾಗದ ಸಮಸ್ಯೆಯ ಕಾರಣ ಈ ರಸ್ತೆ ವಿಸ್ತರಣೆ ಕಾಮಗಾರಿ ಕಳೆದ ಏಳೆಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ADVERTISEMENT

ವರ್ತುಲ ರಸ್ತೆಯ ಉದ್ದಕ್ಕೂ ಅತಿಕ್ರಮಣ: ವರ್ತುಲ ರಸ್ತೆ ದಾಖಲೆಗಳಲ್ಲಿ 100 ಅಡಿ ವಿಸ್ತಾರ ಇರುವ ಕಾರಣ ಮಧ್ಯೆ ರಸ್ತೆ ವಿಭಜಕ ಅಳವಡಿಸಿ, ಗಿಡಮರಗಳನ್ನು ಬೆಳೆಸಲಾಗಿದೆ. ವಿಭಜಕದ ಎರಡೂ ಭಾಗದಲ್ಲೂ 25 ಅಡಿ ಡಾಂಬರು ಹಾಕಲಾಗಿದೆ. ಉಳಿದ ಜಾಗ ಹಾಗೆಯೇ ಬಿಡಲಾಗಿದೆ.

ಹೀಗೆ ಎರಡೂ ಬದಿಗಳಲ್ಲಿ ಡಾಂಬರು ಕಾಣದ ಜಾಗವನ್ನು ಫುಟ್‌ಪಾತ್ ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಫುಟ್‌ಪಾತ್ ಆಹಾರ, ಸಾಮಗ್ರಿ ಖರೀದಿಸಲು ಬರುವ ಗ್ರಾಹಕರು, ದ್ವಿಚಕ್ರ ವಾಹನ, ಕಾರುಗಳನ್ನು ರಸ್ತೆ ಬದಿಯೇ ನಿಲ್ಲಿಸುವ ಪರಿಣಾಮ ಈ ಮಾರ್ಗಗಳಲ್ಲಿ ಸಂಚರಿಸುವ ವಾಹನಗಳು ಸುಗಮವಾಗಿ ಸಾಗಲು ಅಡ್ಡಿಯಾಗಿದೆ.

ಜೈಲ್‌ ರಸ್ತೆಯಿಂದ 100 ಅಡಿ ರಸ್ತೆಗೆ ವಾಹನಗಳು ಬಂದು ಸೇರಲು, ಮುಖ್ಯ ರಸ್ತೆಯಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಸಾಕಷ್ಟು ಪರದಾಟ ನಡೆಸಬೇಕಿದೆ. ಒಂದು ರೀತಿ ಕಿಷ್ಕಿಂಧೆ ಒಳಗೆ ಸಾಗಿದ ಅನುಭವ ಆಗುತ್ತದೆ. ಇದೇ ಸ್ಥಿತಿ ಪೊಲೀಸ್ ಚೌಕಿಯವರೆಗೂ ಇದೆ.

ಮರಳು, ಜಲ್ಲಿ ಮಾರಾಟಕ್ಕೂ ರಸ್ತೆ ಬಳಕೆ: ತಮಾಷೆಯ ಸಂಗತಿ ಎಂದರೆ ವಿನೋಬನಗರ ಮೇದಾರಕೇರಿಯ 3ನೇ ತಿರುವಿನ ಬಳಿ ನಗರ ಪಾಲಿಕೆಯ ಖಾಲಿ ಜಾಗ ಇದೆ. ಇದು ಪಾಲಿಕೆಯ ಸ್ವತ್ತು. ಅತಿಕ್ರಮ ಪ್ರವೇಶ ನಿಷಿದ್ಧ ಎಂದು ಪಾಲಿಕೆ ಆ ಸ್ಥಳದಲ್ಲಿ ಫಲಕವನ್ನೂ ಹಾಕಿದೆ. ಆದರೆ, ಕೆಲವರು ಆ ಜಾಗವನ್ನೂ ಸೇರಿಸಿಕೊಂಡು ಮರಳು, ಜಲ್ಲಿ, ಇಟ್ಟಿಗೆ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ. ಕೋಳಿ, ಕುರಿ, ನಾಯಿ, ಹಂದಿಗಳಿಗೆ ಗೂಡುಕಟ್ಟಿ ಫುಟ್‌ಪಾತ್‌ನಲ್ಲೇ ಆಶ್ರಯ ಕಲ್ಪಿಸಿದ್ದಾರೆ.

‘ರಾತ್ರಿ ಹೊತ್ತು ವಾಹನಗಳು ಬಂದು ಮರಳು ತುಂಬುತ್ತವೆ. ನಾಯಿ ಬೊಗಳುತ್ತವೆ. ಈ ಚಟುವಟಿಕೆಗಳಿಂದ ಕಿರಿಕಿರಿಯಾಗುತ್ತದೆ ಎಂದು ಹಲವು ಬಾರಿ ದೂರು ನೀಡಿದರೂ ಪಾಲಿಕೆ ಸದಸ್ಯರು, ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಾರೆ. ಕೆಲವರ ಸ್ವಾರ್ಥಕ್ಕೆ ನಾಗರಿಕರ ಹಿತ ಬಲಿಕೊಡಬೇಕೆ’ ಎಂದು ಅಲ್ಲಿನ ನಾಗರಿಕರಾದ ಚಂದ್ರು, ಲೋಕೇಶ್, ಶ್ರೀನಿವಾಸ್ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.