ADVERTISEMENT

ಈಶ್ವರಪ್ಪರ ನಾಲಿಗೆ–ಮೆದುಳಿನ ಲಿಂಕ್ ತಪ್ಪಿದೆ: ಸಿ.ಎಂ.

​ಪ್ರಜಾವಾಣಿ ವಾರ್ತೆ
Published 5 ಮೇ 2018, 13:56 IST
Last Updated 5 ಮೇ 2018, 13:56 IST

ಶಿವಮೊಗ್ಗ: ‘ಈಶ್ವರಪ್ಪ ಅವರ ನಾಲಿಗೆ ಹಾಗೂ ಮೆದುಳಿಗೆ ಲಿಂಕ್ ತಪ್ಪಿ ಹೋಗಿದೆ. ತಾನು ಏನು ಮಾತನಾಡುತ್ತೇನೆ ಎಂಬುದೇ ಈಶ್ವರಪ್ಪಗೆ ಗೊತ್ತಿರುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ತಾಲ್ಲೂಕಿನ ಆಯನೂರಿನಲ್ಲಿ ಶುಕ್ರವಾರ ನಡೆದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಕರ್ನಾಟಕದ ವಿರೋಧಿ. ರಾಜ್ಯದ ವಿಷಯದಲ್ಲಿ ಅನ್ಯಾಯ ಮಾಡಿದ್ದಾರೆ. ಉದ್ಯೋಗ ಸೃಷ್ಟಿಸುವುದರಲ್ಲಿ, ರೈತರ ಸಾಲಮನ್ನಾ ಮಾಡುವುದರಲ್ಲಿ, ಖಾತೆಗೆ ಹಣ ಹಾಕುವುದರಲ್ಲಿ ಮೋದಿ ವಿಫಲರಾಗಿದ್ದಾರೆ. ಭಾರತದ ಇತಿಹಾಸದಲ್ಲಿ ಮೋದಿ ಅವರಷ್ಟು ಸುಳ್ಳುಗಾರನನ್ನು ಮತ್ತೊಬ್ಬರು ಕಂಡಿಲ್ಲ. ಇಂತಹವರು ಶಿವಮೊಗ್ಗಕ್ಕೆ ಬಂದಾಗ ತಾವೇಕೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಪ್ರತಿಯೊಬ್ಬರು ಪ್ರಶ್ನಿಸಬೇಕು. ಜತೆಗೆ ಕೋಮುವಾದಿ ಮತ್ತು ಲೂಟಿಕೋರರ ಪಕ್ಷವಾದ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದರು.

ADVERTISEMENT

ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಗ ರೈತರಿಗೆ ಏನು ಮಾಡಿದೆ ಎಂದು ಎಲ್ಲಿಯೂ ಹೇಳುವುದಿಲ್ಲ. ಇದೀಗ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇನೆ ಎನ್ನುತ್ತಿದ್ದಾರೆ. ಇವರಪ್ಪ ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ, ಪ್ರಧಾನಿ ಮೋದಿಯಾಗಿದ್ದಾಗ ಸಾಲ ಮಾಡಿಲ್ಲ. ಇದೀಗ ಮುಂದೆ ಮಾಡುತ್ತೇವೆ ಎನ್ನುವ ಪೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಹೇಳಿದರು.

ಅನಂತಕುಮಾರ್‌ ಹೆಗಡೆ ಒಬ್ಬ ಜೋಕರ್‌. ಆತ ಗ್ರಾಮ ಪಂಚಾಯ್ತಿ ಸದಸ್ಯ ಆಗುವುದಕ್ಕೂ ನಾಲಾಯಕ್‌ ಟೀಕಿಸಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಶ್ರೀನಿವಾಸ್‌ ಕರಿಯಣ್ಣ ಮಾತನಾಡಿ, ‘ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜನರು ನನ್ನನ್ನು ತಮ್ಮ ಮನೆಯ ಮಗನೆಂದು ತಿಳಿದು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಅನಂತಕುಮಾರ್ ಒಬ್ಬ ಜೋಕರ್‌

ಅನಂತಕುಮಾರ್‌ ಹೆಗಡೆ ಒಬ್ಬ ಜೋಕರ್‌. ಆತ ಗ್ರಾಮ ಪಂಚಾಯ್ತಿ ಸದಸ್ಯ ಆಗುವುದಕ್ಕೂ ನಾಲಾಯಕ್‌. ಒಬ್ಬ ಕೇಂದ್ರ ಮಂತ್ರಿಯಾಗಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿತಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.