ADVERTISEMENT

ಕನ್ನಡಕ್ಕೆ ಡಬ್ಬಿಂಗ್ ಬೇಡ: ಪುನೀತ್, ರಂಗಾಯಣ ರಘು

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 7:15 IST
Last Updated 8 ಜೂನ್ 2011, 7:15 IST
ಕನ್ನಡಕ್ಕೆ ಡಬ್ಬಿಂಗ್ ಬೇಡ: ಪುನೀತ್, ರಂಗಾಯಣ ರಘು
ಕನ್ನಡಕ್ಕೆ ಡಬ್ಬಿಂಗ್ ಬೇಡ: ಪುನೀತ್, ರಂಗಾಯಣ ರಘು   

ಶಿವಮೊಗ್ಗ: ಕಲಾವಿದರು-ತಂತ್ರಜ್ಞರ ಜೀವನಪ್ರಶ್ನೆ ಮತ್ತು ಕನ್ನಡ ಸಂಸ್ಕೃತಿಯ ಹಿತದೃಷ್ಟಿಯಿಂದ ಕನ್ನಡಕ್ಕೆ ಡಬ್ಬಿಂಗ್ ಬೇಕಾಗಿಲ್ಲ ಎಂದು ನಟ ಪುನೀತ್ ರಾಜ್‌ಕುಮಾರ್ ಸ್ಪಷ್ಟಪಡಿಸಿದರು.

`ಹುಡುಗರು~ ಚಿತ್ರದ ಪ್ರಚಾರದ ಹಿನ್ನೆಲೆಯಲ್ಲಿ ನಗರಕ್ಕೆ ಮಂಗಳವಾರ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಡಬ್ಬಿಂಗ್‌ಗೆ ಹೆಚ್ಚಿನ ಕಲಾವಿದರು- ತಂತ್ರಜ್ಞರು ಬೇಕಿಲ್ಲ. ಅಲ್ಲದೇ, ಇದು ಕನ್ನಡ ಭಾಷೆ-ಸಂಸ್ಕೃತಿ ಮೇಲೂ ಯಾವುದೇ ಪರಿಣಾಮ ಬೀರುತ್ತಿಲ್ಲ. ಹಾಗಾಗಿ, ಕನ್ನಡಕ್ಕೆ ಡಬ್ಬಿಂಗ್ ಬೇಡವೇ ಬೇಡ ಎಂದರು.

ಹಾಗಾದರೆ ರಿಮೇಕ್ ಚಿತ್ರಗಳು ಬೇಕೇ? ಎಂಬ ಪ್ರಶ್ನೆಗೆ, ಇಲ್ಲಿ ಹೆಚ್ಚಿನ ಸಂಖ್ಯೆಯ ಕಲಾವಿದರು-ತಂತ್ರಜ್ಞರು ದುಡಿಯುತ್ತಾರೆ. ಸೃಜನಶೀಲತೆಗೆ ಅವಕಾಶ ಇದೆ. ನಮ್ಮ ಸಂಸ್ಕೃತಿ- ಭಾಷೆಯಲ್ಲಿ ಸಿನಿಮಾವನ್ನು ಹೊಸದಾಗಿ ಸೃಷ್ಟಿಸಲಾಗುತ್ತದೆ. ಹಾಗಾಗಿ, ರಿಮೇಕ್‌ಗೆ ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಲಾತ್ಮಕ ಚಿತ್ರದಲ್ಲಿ ನಟಿಸಲು ಸಿದ್ಧ   
ಕಲಾತ್ಮಕ ಚಿತ್ರದಲ್ಲಿ ನಟಿಸುವ ಆಸಕ್ತಿ ಇದೆ. ಆ ರೀತಿ ಅವಕಾಶ ಬಂದರೆ ಖಂಡಿತಾ ನಟಿಸಲು ಸಿದ್ಧ ಎಂದು ತಿಳಿಸಿದರು.

ಸಿನಿಮಾ ನಿರ್ದೇಶಿಸುವ ಆಸೆ ಇದೆಯೇ? ಎಂಬ ಪ್ರಶ್ನೆಗೆ, ನಿರ್ದೇಶನ ಮಾಡಿದರೆ ಅದು ಖಂಡಿತಾ ಶಿವಣ್ಣ ಅವರ ಸಿನಿಮಾ ಆಗಿರುತ್ತದೆ. ಅದು ಇನ್ನು ಐದು ವರ್ಷ ಆಗಬಹುದು ಅಥವಾ ಮೂರು ವರ್ಷದ ಒಳಗೂ ಆಗಬಹುದು ಎಂದು ಉತ್ತರಿಸಿದರು.

`ಹುಡುಗರು~ ಮಲ್ಟಿಸ್ಟಾರ್ ಸಿನಿಮಾ. ಚೆನ್ನಾಗಿ ಓಡುತ್ತಿದೆ. ನಾವು ಹಾಕಿದ ಶ್ರಮಕ್ಕೆ ಫಲಿತಾಂಶ ಬಂದಿದೆ. ಉತ್ತಮ ಕಥೆ, ಒಳ್ಳೆಯ ನಿರ್ದೇಶಕ ಇದ್ದರೆ ಸಿನಿಮಾ ಗೆಲ್ಲುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂದರು.

ನಟ ರಂಗಾಯಣ ರಘು ಮಾತನಾಡಿ, ರಿಮೇಕ್ ಹಿಂದಿನಿಂದಲೂ ಇತ್ತು, ಈಗಲೂ ಇದೆ. ರಂಗಭೂಮಿಯಲ್ಲಿ ಷೇಕ್ಸ್‌ಪಿಯರ್ ನಾಟಕವನ್ನು ಹೇಗೆ ಕನ್ನಡದಲ್ಲಿ ತರುತ್ತವೆ. ಅದೇ ರೀತಿ ಸಿನಿಮಾ ಕೂಡ ಎಂದು ರಿಮೇಕ್ ಅನ್ನು ಸಮರ್ಥಿಸಿಕೊಂಡರು. 

ಸುದ್ದಿಗೋಷ್ಠಿಯಲ್ಲಿ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಪಂಚಾಕ್ಷರಪ್ಪ, ವಿತರಕ ಎಚ್.ಬಿ. ಮೋಹನ್ ಹೊನ್ನಾಳಿ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.